ಬುಧವಾರ, ನವೆಂಬರ್ 13, 2019
28 °C

ಚುನಾವಣಾ ತಯಾರಿ ಶೇ 80 ಪೂರ್ಣ

Published:
Updated:

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ 7 ವಿಧಾನಸಭಾ ಕ್ಷೇತ್ರಗಳ ಚುನಾವಣಾಪೂರ್ವ ತಯಾರಿ ಶೇ 80ರಷ್ಟು ಪೂರ್ಣಗೊಂಡಿದ್ದು, ಹೊಸ ವಿಧಾನಗಳ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದರು.ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2,011 ಮತಗಟ್ಟೆಗಳು ಅಸ್ತಿತ್ವದಲ್ಲಿದ್ದು, ಮತದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 308 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಡಿಸಿಪಿ ಮತ್ತು ಎಸಿಪಿ ಅವರೊಂದಿಗೆ ಚರ್ಚೆ ನಡೆಸಿ ಈಗಿರುವ ಮತಗಟ್ಟೆಗಳನ್ನು ಸಾಮಾನ್ಯ, ಸೂಕ್ಷ್ಮ, ಅತಿ ಸೂಕ್ಷ್ಮ, ಅಭೇದ್ಯ, ಅಪಾಯಕಾರಿ ತಾಣಗಳಾಗಿ ವಿಂಗಡಿಸಲಾಗಿದೆ. ಆ ಪ್ರದೇಶಗಳ ಅಗತ್ಯಕ್ಕೆ ತಕ್ಕಂತೆ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

725 ಮತಗಟ್ಟೆಗಳನ್ನು ಸೂಕ್ಷ್ಮ, 556 ಮತಗಟ್ಟೆಗಳು ಅತಿ ಸೂಕ್ಷ್ಮ, 167 ಅಭೇದ್ಯ, 96 ಮತಗಟ್ಟೆಗಳು ಅಪಾಯಕಾರಿಯೆಂದು ಗುರುತಿಸಲಾಗಿದ್ದು, ಈ ಭಾಗಗಳಲ್ಲಿ ವಿಡಿಯೊ ಸರ್ವೆಲೆನ್ಸ್ ತಂಡ, ಅರೆಸೇನಾ ಸಿಬ್ಬಂದಿ, ಸೂಕ್ಷ್ಮ ವೀಕ್ಷಕ ತಂಡ ಈ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ.

ಸದ್ಯಕ್ಕೆ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಕ್ಕಾಗಿ ಪೊಲೀಸ್ ಸಿಬ್ಬಂದಿ ಬಿಟ್ಟು ರಾಜ್ಯ ಸರ್ಕಾರಿ ನೌಕರರು (43,000), ಕೇಂದ್ರ ಸರ್ಕಾರದ ನೌಕರರು  (11,000), ಸೂಕ್ಷ್ಮ ವೀಕ್ಷಕ (3,000) ಚಾಲಕರು, ಸಿಬ್ಬಂದಿ ( 20,000) ನಿಯೋಜಿಸಲಾಗಿದ್ದು ಕೆಲವೆಡೆ ಸಿಬ್ಬಂದಿಯ ಕೊರತೆಯಿದೆ ಎಂದು ತಿಳಿಸಿದರು.ಪಕ್ಷ ಹಾಗೂ ಪ್ರತಿನಿಧಿಗಳ ನಡೆ ಮತ್ತು ಭಾಷಣವನ್ನು ಚಿತ್ರೀಕರಿಸಲಾಗುವುದು. ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯ ಪ್ರಕರಣಗಳ ಕುರಿತು ಸಾಮಾನ್ಯ ಜನರು ಮಾಹಿತಿ ನೀಡಿದರೆ ಚುನಾವಣಾ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. ಚುನಾವಣೆಗಾಗಿ ಈಗಾಗಲೇ 102 ಸರ್ಕಾರಿ ವಾಹನಗಳನ್ನು ಬಳಸಲಾಗುತ್ತಿದ್ದು, ಸದ್ಯಕ್ಕೆ 60 ವಾಹನಗಳ ಅವಶ್ಯಕತೆಯಿದೆ. ಆದಷ್ಟು ಸರ್ಕಾರಿ ವಾಹನಗಳನ್ನೇ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಚುನಾವಣಾ ಸಿಬ್ಬಂದಿಗೆ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಒದಗಿಸಲು ಬೂತ್ ಮಟ್ಟದಲ್ಲಿ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನೆರವು ನೀಡುವವರನ್ನು ಗುರುತಿಸಿ, ಸಿಬ್ಬಂದಿಗೆ ಸಹಕರಿಸುವ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.ನೀತಿಸಂಹಿತೆ ಉಲ್ಲಂಘನೆಯಡಿ 796 ಜನರಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಯಡಿ 512 ಪ್ರಕರಣಗಳು ದಾಖಲಾಗಿವೆ. ಅಬಕಾರಿ ಕಾಯ್ದೆಯಡಿ ವಿವಿಧೆಡೆ ದಾಳಿ ನಡೆಸಲಾಗಿದ್ದು, ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)