ಮಂಗಳವಾರ, ನವೆಂಬರ್ 12, 2019
24 °C

ಚುನಾವಣಾ ಪ್ರಚಾರದ ಸುದ್ದಿಗಳು

Published:
Updated:

`ಪ್ರಚೋದನೆಗೆ ಒಳಗಾಗಿ ಮತ ಚಲಾಯಿಸಬೇಡಿ'

ಸವಣೂರ: `ಅಭಿವೃದ್ಧಿ ಪರವಾಗಿ ತಮ್ಮ ಮತವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ನೀಡುವ ಮೂಲಕ ಅನ್ಯ ಪ್ರಚೋದನೆಗಳನ್ನು ತಿರಸ್ಕರಿಸಿ' ಎಂದು ಸಚಿವ ಬಸವರಾಜ ಬೊಮ್ಮಾಯಿ ಕೋರಿದರು.ತಾಲ್ಲೂಕಿನ ಮಂತ್ರವಾಡಿ ಗ್ರಾಮದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.`ಕ್ಷೇತ್ರದಲ್ಲಿ ವಿರೊಧ ಪಕ್ಷದ ಅಭ್ಯರ್ಥಿಗಳ ಸತತ ಸೋಲು, ಕಣ್ಣೀರಿನ ಕತೆ ಅನುಕಂಪದಿಂದ ಮತ ಪಡೆಯಲು ಸಾಧ್ಯವಿಲ್ಲ. ನಾಯತಕ್ವ ವಹಿಸುವ ವ್ಯಕ್ತಿ ಕಣ್ಣೀರು ಹಾಕದೆ, ಅನ್ಯರ ಕಣ್ಣೀರು ಒರೆಸಬೇಕು' ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಅವರನ್ನು ಕುಟುಕಿದರು.`ಕ್ಷೇತ್ರದ ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಂಡಿದ್ದೇನೆ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ಹತ್ತಾರು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ' ಎಂದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಬಸವರಾಜ ಬೊಮ್ಮಾಯಿ ಮತಯಾಚಿಸಿದರು. ಜಿ.ಪಂ. ಸದಸ್ಯೆ ಶೋಭಾ ನಿಸ್ಸೀಮಗೌಡ್ರ, ತಾ.ಪಂ. ಅಧ್ಯಕ್ಷ ರುದ್ರಗೌಡ ಪಾಟೀಲ, ತಾ.ಪಂ. ಸದಸ್ಯರಾದ ಎಂ.ಕೆ. ಬಿಜ್ಜೂರ, ರಮೇಶ ಅರಗೋಳ, ಎಪಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಮುಖಂಡರಾದ ಮೋಹನ ಮೆಣಸಿನಕಾಯಿ, ವಿರೂಪಾಕ್ಷಪ್ಪ ಸಿಂಧೂರ, ಚಂದ್ರಣ್ಣ ಗುದಗಿ, ಗಂಗಾಧರ ಬಾಣದ, ಬಸನಗೌಡ ಕೊಪ್ಪದ, ಸುಭಾಷ್ ಗಡೆಪ್ಪನವರ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ದುಗ್ಗತಿ, ಅಂಗಡಿ ಕಾಂಗ್ರೆಸ್ ಸೇರ್ಪಡೆ

ಸವಣೂರ:
`ಭ್ರಷ್ಟಾಚಾರವನ್ನೇ ತಮ್ಮ ಸಾಧನೆಯಾಗಿ ಹೊಂದಿರುವ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಲಿದ್ದಾರೆ. ಜನತೆಗೆ ಕುಡಿಯುವ ನೀರು ಕೊಡದ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಾಧನೆಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ' ಎಂದು ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಜ್ಜಂಪೀರ್ ಖಾದ್ರಿ ಟೀಕಿಸಿದರು.ಪಟ್ಟಣದಲ್ಲಿ ಕಾಂಗ್ರೆಸ್‌ಗೆ ಸೇರಿದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನ ಬಸವರಾಜ ಅಂಗಡಿ, ಜಿ.ಪಂ. ಮಾಜಿ ಸದಸ್ಯ ರಮೇಶ ದುಗ್ಗತ್ತಿ, ಸುಭಾಷ್ ಮಜ್ಜಗಿ, ಬಸವರಾಜ ಅರಗೋಳ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ನಾಗಪ್ಪ ತಿಪ್ಪಕ್ಕನವರ, ಅಬ್ದುಲ್‌ಖಾದರ್ ಫರಾಶ, ರಾಜಾ ಜಕನಿ, ಸಿದ್ಧಪ್ಪ ನಿಂಬರಗಿ, ಮಂಜುನಾಥ ಉಪ್ಪಿನ, ಕುಮಾರ ಯಲವಿಗಿ, ಎಫ್. ಎನ್.ನೆಲ್ಲೂರ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.ಕೆಜೆಪಿಗೆ ವ್ಯಾಪಕ ಬೆಂಬಲ: ಉದಾಸಿ

ಹಾನಗಲ್:
`ಕರ್ನಾಟಕ ಜನತಾ ಪಕ್ಷಕ್ಕೆ ರಾಜ್ಯದಲ್ಲಿ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದ್ದು, ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ' ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಹೇಳಿದರು.ತಾಲ್ಲೂಕಿನ ಮಾರನಬೀಡ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕೆಜೆಪಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಲಿದೆ ಎಂದರು.ಸೇರ್ಪಡೆ: ಇದೇ ಸಂದರ್ಭದಲ್ಲಿ ಮಾರನಬೀಡ ಗ್ರಾಮದ ಖಾದರಸಾಬ್ ವಾಲಗದ, ಲಾಲಾಸಾಬ್ ಕ್ವಾಟಿ, ಮರದಾನಸಾಬ್ ಸವೂರ, ಮಹಮ್ಮದ್ ನದಾಫ, ದಾವೂದಲಿ ಬಂಕಾಪೂರ, ಮಖಬೂಲ್ ಬಾವಾನವರ, ಹಜರೇಸಾಬ್ ಮನ್ನಂಗಿ, ಫಕ್ಕೀರಪ್ಪ ಕಾಳಿ ಅವರು ಉದಾಸಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಕೆಜೆಪಿಗೆ ಸೇರ್ಪಡೆಗೊಂಡರು.`ಜೆಡಿಎಸ್‌ನಿಂದ ರೈತಪರ ಹೋರಾಟ'

ಹಾನಗಲ್:
`ರೈತ ಸಮೂಹಕ್ಕೆ ಹಲವು ಯೋಜನೆಗಳು, ರೈತಪರ ಹೋರಾಟಗಳ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತದಾರರ ಮನದಲ್ಲಿದ್ದು, ಈ ಬಾರಿ ಜೆಡಿಎಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ' ಎಂದು ಜೆಡಿಎಸ್ ಅಭ್ಯರ್ಥಿ ಬಿ.ಕೆ. ಮೋಹನಕುಮಾರ ವಿಶ್ವಾಸ ವ್ಯಕ್ತಪಡಿಸಿದರು.ತಾಲ್ಲೂಕಿನ ಕ್ಯಾಸನೂರ, ಕೋಣನಕೊಪ್ಪ, ಸಮ್ಮಸಗಿ ಹಾಗೂ ಮಂತಗಿ ಗ್ರಾಮಗಳಲ್ಲಿ ಪಾದಯಾತ್ರೆಯ ಮೂಲಕ ಮತದಾರರ ಬಳಿಗೆ ತೆರಳಿ ಅವರು ಮತ ಯಾಚಿಸಿದರು.   ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಖ್ವಾಜಾಮೊಹಿದ್ದೀನ್ ಅಣ್ಣಿಗೇರಿ, ಮುಖಂಡರಾದ ಎಸ್.ಎಲ್.ಬಣಕಾರ, ವಾಸಣ್ಣ ಮೂಡಿ, ಶಿರಬಡಗಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)