ಶುಕ್ರವಾರ, ಫೆಬ್ರವರಿ 26, 2021
30 °C

ಚುನಾವಣಾ ವೆಚ್ಚ: ನಿಗಾವಹಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ವೆಚ್ಚ: ನಿಗಾವಹಿಸಲು ಸೂಚನೆ

ಬೆಳಗಾವಿ: ಮುಕ್ತ, ನ್ಯಾಯ ಸಮ್ಮತ ಹಾಗೂ ನಿರ್ಭಿತ ಚುನಾವಣೆ ನಡೆಸುವ ಉದ್ದೇಶದಿಂದ ಉಮೇದುವಾರರು ಹಾಗೂ ರಾಜಕೀಯ ಪಕ್ಷಗಳು ಮಾಡುವ ವೆಚ್ಚದ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ವೆಚ್ಚ ನಿರೀಕ್ಷಕ ತಮೀಝ ವೆಂಡನ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಚುನಾವಣಾ ಉಪವೆಚ್ಚ ನಿರೀಕ್ಷಕರಿಗೆ, ಉಪ ಚುನಾವಣಾಧಿಕಾರಿಗಳಿಗೆ, ವಿವಿಧ ನಿಗಾ ಸಮಿತಿಗಳಿಗೆ ಮಾಹಿತಿ ಹಾಗೂ ತರಬೇತಿ ನೀಡಲು ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಚುನಾವಣೆಯಲ್ಲಿ ಪ್ರತಿಯೊಬ್ಬ ಉಮೇದುವಾರರು ₨ 70 ಲಕ್ಷ ವೆಚ್ಚ ಮಾಡಲು ಚುನಾವಣಾ ಆಯೋಗವು ನಿಗದಿ ಮಾಡಿದೆ. ಇದಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಲು ಅವಕಾಶವಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಹಾಗೂ ಕಾಣಿಕೆಗಳನ್ನು ಮತದಾರರಿಗೆ ಹಂಚುವ ಮೂಲಕ ಆಮಿಷವೊಡ್ಡಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಚುನಾವಣೆ ನಡೆಸುವ ಸಂಭವವಿದೆ. ಆದ್ದರಿಂದ ಚುನಾವಣೆ ಉಪವೆಚ್ಚ ನಿರೀಕ್ಷಕರು ಸಂಪೂರ್ಣ ನಿಗಾವಹಿಸಿ ಕೆಲಸ ಮಾಡಬೇಕು ಎಂದರು. ಚುನಾವಣಾ ಆಯೋಗವು ವೆಚ್ಚ ನಿಯಂತ್ರಣ ಕುರಿತು ಒದಗಿಸಿದ ಮಾಹಿತಿಯನ್ನು ಸಂಪೂರ್ಣವಾಗಿ ಮನನ ಮಾಡಿಕೊಂಡು ಖರ್ಚು– ವೆಚ್ಚದ ಬಗ್ಗೆ ಅಭ್ಯರ್ಥಿಗಳು ನೀಡುವ ಮಾಹಿತಿಯನ್ನು ಪರಿಶೀಲಿಸಲು ಚುನಾವಣಾ ಆಯೋಗವು ನಿಗದಿಪಡಿಸಿದ ರಜಿಸ್ಟರ್‌ ಅನ್ನು ಇಟ್ಟುಕೊಳ್ಳಬೇಕು. ವಿಡಿಯೋ ಸರ್ವೆಲನ್ಸ್ ತಂಡದ ಕರ್ತವ್ಯವೂ ಸಹ ನ್ಯಾಯ ಸಮ್ಮತ ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಅವರು ಚುನಾವಣಾ ಆಯೋಗ ನಿಗದಿಪಡಿಸಿದ ನಿಯಮಗಳನ್ವಯ ವಿಡಿಯೋ ಶೂಟಿಂಗ್ ಮಾಡಬೇಕು ಎಂದು ತಿಳಿಸಿದರು.ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಜಯರಾಂ ಅವರು, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಚಿಸಲಾಗಿರುವ ತಂಡಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳು ಹೆಚ್ಚಾಗಿ ನಡೆಯುವ ಸಂಭವವಿದ್ದು, ಕಣ್ಗಾವಲು ಸಮಿತಿಗಳು ಪ್ರತಿದಿನ ಹೆಚ್ಚು ಪ್ರವಾಸ ಕೈಗೊಂಡು ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಎಲ್ಲ ರೀತಿಯಿಂದ ಕ್ರಮ ಕೈಗೊಳ್ಳಬೇಕು ಎಂದರು. ಮತದಾನದ ಪ್ರಮಾಣವನ್ನು ಶೇ.80 ಕ್ಕೆ ಹೆಚ್ಚಿಸುವಂತೆ ನೋಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು, ಪ್ರೇರಕರು, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳ ಸದಸ್ಯರ ಸಹಕಾರ ಪಡೆಯಬೇಕು ಎಂದು ತಿಳಿಸಿದರು.ಎ. ರವೀಂದ್ರ ಮಾತನಾಡಿದರು. ಜಿಲ್ಲೆಯ ವಿವಿಧ ವಿಚಕ್ಷಣಾ ದಳದ ಅಧಿಕಾರಿಗಳು ಹಾಜರಿದ್ದು, ತಮ್ಮ ಸಂದೇಹಗಳಿಗೆ ಪರಿಹಾರವನ್ನು ಸಂವಾದದ ಮೂಲಕ ಕಂಡುಕೊಂಡರು.ನಿರೀಕ್ಷಕರಾಗಿ ಪ್ರಭಾತ ಶಂಕರ ನೇಮಕ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ನಿರೀಕ್ಷಕರನ್ನಾಗಿ ಬಿಹಾರ ಸರ್ಕಾರದ ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪ್ರಭಾತ ಶಂಕರ ಅವರನ್ನು ನೇಮಿಸಿ ಚುನಾವಣಾ ಅಯೋಗವು ಆದೇಶ ಹೊರಡಿಸಿದೆ.ಪ್ರಭಾತ ಶಂಕರ ಅವರನ್ನು ಮೊಬೈಲ್ ಸಂಖ್ಯೆಗಳಾದ 09801762960 ಹಾಗೂ 09473191472ರ ಮೂಲಕ ಸಂಪರ್ಕಿಸಬಹುದು. ಸಾಮಾನ್ಯ ನಿರೀಕ್ಷಕರ ಸಮನ್ವಯ ಅಧಿಕಾರಿಗಳನ್ನಾಗಿ ಬೆಳಗಾವಿಯ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎನ್.ಪರಶಿವಮೂರ್ತಿ ಅವರನ್ನು ನೇಮಿಸಿದ್ದು, ಅವರನ್ನು ಮೊಬೈಲ್ ಸಂಖ್ಯೆ 9480813139 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.