ಚುನಾವಣಾ ಸುಧಾರಣೆಗೆ ಆಗ್ರಹ

7

ಚುನಾವಣಾ ಸುಧಾರಣೆಗೆ ಆಗ್ರಹ

Published:
Updated:

ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತು ತಂಡದ ಸದಸ್ಯರು ಗುರುವಾರ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯೋಗದ ಆಯುಕ್ತರನ್ನು ಭೇಟಿ ಮಾಡಿ ಚುನಾವಣಾ ವ್ಯವಸ್ಥೆಗಳಲ್ಲಿ ಸುಧಾರಣೆ ತರುವಂತೆ ಒತ್ತಾಯಿಸಿದರು.

ಜೊತೆಗೆ ವಿದ್ಯುನ್ಮಾನ ಮತಯಂತ್ರಗಳಲ್ಲಿ  `ನಿರಾಕರಣೆಯ ಹಕ್ಕಿಗೆ~ ಅವಕಾಶ ಕಲ್ಪಿಸಬೇಕು ಮತ್ತು ನ್ಯಾಯಾಲಯದಿಂದ ದೋಷಾರೋಪಣೆಗೆ ಗುರಿಯಾಗಿರುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರಬೇಕು ಎಂಬ ಬೇಡಿಕೆಗಳನ್ನೂ ಚುನಾವಣಾ ಆಯೋಗದ ಮುಂದಿಟ್ಟರು.

ಅಣ್ಣಾ ಹಜಾರೆ ಮತ್ತು ತಂಡದ ಸದಸ್ಯರಾದ ಸಂತೋಷ್ ಹೆಗ್ಡೆ, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ಅವರು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಮಾತುಕತೆ ತುಂಬಾ ಫಲಪ್ರದವಾಗಿತ್ತು. ತಮ್ಮ ಯೋಚನೆಗಳನ್ನು ಮತ್ತು ಬೇಡಿಕೆಗಳನ್ನು ಚುನಾವಣಾ ಆಯೋಗ ಸೂಕ್ಷ್ಮವಾಗಿ ಗ್ರಹಿಸಿರುವುದಾಗಿ ಅಣ್ಣಾ ತಂಡ ಹೇಳಿದೆ.

`ಅಭ್ಯರ್ಥಿಯು ಇಷ್ಟವಾಗದೇ ಹೋದ ಸಂದರ್ಭದಲ್ಲಿ ಅಂತಹ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಲು ಅವಕಾಶ ಕಲ್ಪಿಸುವ  ಅರ್ಜಿ (ಫಾರ್ಮ್) 49 (ಒ) ಅನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುವುದು, ಮತ ಎಣಿಕೆ ಸಂದರ್ಭದಲ್ಲಿ ಸಂಕಲಕವನ್ನು (ಟೋಟಲೈಸರ್) ಬಳಸುವುದು ಮತ್ತು ನ್ಯಾಯಾಲಯದಿಂದ ದೋಷಾರೋಪಣೆಗೆ ಗುರಿಯಾಗಿರುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರುವ ವಿಚಾರಗಳನ್ನು ಮಾತುಕತೆ ವೇಳೆ ಆಯೋಗದ ಮುಂದಿಟ್ಟಿರುವುದಾಗಿ ಬೇಡಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry