ಮಂಗಳವಾರ, ಮೇ 18, 2021
30 °C

ಚುನಾವಣಾ ಸುಧಾರಣೆ ನಡೆಯಬೇಕಾದ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:`ರಾಜಕಾರಣ ಕುಲಗೆಟ್ಟಿರುವ ಸಂದರ್ಭದಲ್ಲಿ ಚುನಾವಣಾ ಸುಧಾರಣೆ ಜರೂರಾಗಿ ನಡೆಯಬೇಕಾದ ಕಾರ್ಯ~ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ನಗರದಲ್ಲಿ ಹಮ್ಮಿಕೊಂಡಿದ್ದ `ಚುನಾವಣಾ ಸುಧಾರಣೆಗಳು~ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಚುನಾವಣಾ ಖರ್ಚು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಜತೆಗೆ ಭ್ರಷ್ಟಾಚಾರ ಕೂಡ ಹೆಚ್ಚಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಚುನಾವಣೆ ನಡೆಸುವುದೇ ಬೇಡ. ಈಗ ಅಧಿಕಾರದಲ್ಲಿರುವವರೇ ಖಾಯಂ ಆಗಿ ಇರಲಿ~ ಎಂದು ವ್ಯಂಗ್ಯವಾಡಿದರು.`ಜನ ಸರಿಯಾದ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಲ್ಲ. ಅಣ್ಣಾ ಹಜಾರೆ ಅವರಿಂದಾಗಿ ಜನ ಜಾಗೃತಿ ಮೂಡಿದೆ. ಇನ್ನಾದರೂ ಸ್ವತಂತ್ರವಾಗಿ ಆಲೋಚನೆ ಮಾಡುವುದನ್ನು ಕಲಿಯಬೇಕಿದೆ. ದುಡ್ಡುಕೊಟ್ಟವರಿಗೆ ಮತ ಹಾಕುವುದು ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇರುವುದನ್ನು ಮೊದಲು ಬಿಡಬೇಕು~ ಎಂದರು.`ಮತ ಎನ್ನುವುದು ಮನೆಯ ಮಗಳು ಅಥವಾ ಸಹೋದರಿಯ ಹಾಗೆ. ಎಂತೆಂತಹವರಿಗೋ ಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲ. ಹಾಗೆಯೇ ಮತದಾನ ಮಾಡುವಾಗಲೂ ಎಚ್ಚರಿಕೆ ಅಗತ್ಯ. ದೇಶಕ್ಕೆ ಒಳಿತಾಗುವ ರೀತಿಯಲ್ಲಿ ಮತ ಹಾಕಬೇಕು~ ಎಂದು ಹೇಳಿದರು.  `ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚುನಾವಣಾ ಸುಧಾರಣೆ ಬಗ್ಗೆ ಎರಡು ದಿನ ಎಲ್.ಕೆ. ಅಡ್ವಾಣಿ ಅವರು ಬೋಧಿಸಿದ್ದರು. ಆದರೆ ಅವರೇ ಸ್ವತಃ ಗೃಹ ಸಚಿವರಾದಾಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಾಜಕೀಯ ನಾಯಕರು ಅಧಿಕಾರದಲ್ಲಿ ದ್ದಾಗ ಸೂಕ್ತ ರೀತಿಯಲ್ಲಿ ನಡೆದುಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.  ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್, `ಚುನಾವಣಾ ಸುಧಾರಣೆಗೆ ಜನ ಲೋಕಪಾಲ್ ಮಾದರಿ ಚಳವಳಿ ನಡೆಯಬೇಕು. ನ್ಯಾಯಾಂಗ ಸುಧಾರಣೆಗೆ ಪ್ರತ್ಯೇಕ ಆಯೋಗ ರಚನೆಯಾಗಬೇಕು. ಚುನಾವಣಾ ಪ್ರಕ್ರಿಯೆ, ಚುನಾವಣಾ ಆಯೋಗ ಸುಧಾರಣೆಯಾಗಬೇಕು. ಕಪ್ಪು ಹಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.~ ಎಂದರು.`ಯಾವುದೇ ಮಸೂದೆ ಜಾರಿಯಾಗುವ ಮುನ್ನ ಅದು ಗ್ರಾಮಪಂಚಾಯ್ತಿ ಮಟ್ಟದಲ್ಲಿ ಚರ್ಚೆಯಾಗಬೇಕು. ಜನಪ್ರತಿನಿಧಿ ತನ್ನ ಕ್ಷೇತ್ರದಲ್ಲಿ ಮಸೂದೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಬೇಕು. ಸರಿಯಾಗಿ ಕಾರ್ಯ ನಿರ್ವಹಿಸದ ಜನಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಬರಬೇಕು~ ಎಂದು ಹೇಳಿದರು.    `ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ಹಣ ನೀಡುವುದನ್ನು ಸಂಪೂರ್ಣ ನಿಷೇಧಿಸಬೇಕಿದೆ. ಹಣ ಕೊಡಲು ಇಚ್ಛಿಸುವವರು ರಾಜಕೀಯ ಪಕ್ಷಗಳ ಬದಲು ಚುನಾವಣಾ ಆಯೋಗಕ್ಕೇ ಹಣ ನೀಡಲಿ. ಇವೆಲ್ಲಾ ಒಟ್ಟಿಗೆ ನಡೆದರೆ ಚುನಾವಣಾ ಸುಧಾರಣೆ ಖಂಡಿತ ಸಾಧ್ಯ~ ಎಂದರು.  ಹೋರಾಟಗಾರ ಎಸ್.ಆರ್.ಹಿರೇಮಠ, `ಚುನಾವಣಾ ಸುಧಾರಣೆ ಹೋರಾಟದಲ್ಲಿ ಜನಶಕ್ತಿ ಭಾಗವಹಿಸಬೇಕು. ಜನರು ಭಾಗಿಯಾದರೆ ಸುಧಾರಣೆ ಸಾಧ್ಯವಾಗುತ್ತದೆ. ಜನಾಭಿಪ್ರಾಯ ರೂಪುಗೊಂಡಾಗ ಸರ್ಕಾರ ಕೂಡ ಜಾಗೃತವಾಗುತ್ತದೆ~ ಎಂದು ಹೇಳಿದರು.`ಲೋಕಾಯುಕ್ತ ನೀಡಿರುವ ಎರಡನೇ ವರದಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಈ ಸಂಬಂಧ ಶೀಘ್ರದಲ್ಲಿಯೇ ಹೋರಾಟ ಆರಂಭಿಸಲಾಗುವುದು. ನಮ್ಮನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ಬೀಗುವವರಿಗೆ ಬಳ್ಳಾರಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪಾಠ ಕಲಿಸುತ್ತಿವೆ~ ಎಂದು ಅವರು ತಿಳಿಸಿದರು.ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿರುವ ಹುಲಿಕಲ್ ನಟರಾಜು, ರಾಮಾಂಜನಪ್ಪ, ಹಾಗೂ ಫಾರೂಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಎ.ಕೆ.ಸುಬ್ಬಯ್ಯ, ಎಲೆಕ್ಷನ್ ವಾಚ್ ಸಂಸ್ಥೆಯ ಸಂಚಾಲಕ ತ್ರಿಲೋಚನ್ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.