ಬುಧವಾರ, ನವೆಂಬರ್ 20, 2019
25 °C

`ಚುನಾವಣೆಗೂ ಮುನ್ನ ಮತಚೀಟಿ'

Published:
Updated:
`ಚುನಾವಣೆಗೂ ಮುನ್ನ ಮತಚೀಟಿ'

ಬೆಂಗಳೂರು: ಚುನಾವಣೆಗೆ ನಾಲ್ಕು ಅಥವಾ ಐದು ದಿನಗಳ ಮುನ್ನ ಮತದಾರರಿಗೆ ಮತ ಚೀಟಿ ವಿತರಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ತಿಳಿಸಿದರು.ಭಾರತೀಯ ಚುನಾವಣಾ ಆಯೋಗ, `ಮತದಾರರ ನೋಂದಣಿ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ' (ಸ್ವೀಪ್) ಕುರಿತಂತೆ ಗುರುವಾರ ನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಡಿಯೊ ಕಾನ್ಫರೆನ್ಸ್‌ಗೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಮತ ಚೀಟಿಯಲ್ಲಿ ಮತದಾರರ ಹೆಸರು, ತಂದೆ ಹೆಸರು, ವಿಳಾಸ, `ಎಪಿಕ್' ನಂಬರ್ ಹಾಗೂ ಭಾವಚಿತ್ರ ಮುದ್ರಿತವಾಗಿರುತ್ತದೆ. ಈ ಮತ ಚೀಟಿಯನ್ನು ಮತದಾರರ ಮನೆಗೆ ತೆರಳಿ ವಿತರಿಸಲಾಗುವುದು ಎಂದರು.ಮತ ಚಲಾಯಿಸಲು ಬರುವಾಗ ಮತದಾರರ ಗುರುತಿನ ಚೀಟಿಯೊಂದಿಗೆ ಈ ಮತ ಚೀಟಿಯನ್ನು ಸಹ ತರಬೇಕು. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲವಾದಲ್ಲಿ ಮತ ಚೀಟಿಯೊಂದಿಗೆ ಯಾವುದಾದರೂ ಒಂದು ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತಂದು ಮತದಾನ ಮಾಡಬಹುದು ಎಂದು ಹೇಳಿದರು.`ಸ್ವೀಪ್' ಕಾರ್ಯಕ್ರಮದ ಅಡಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈ ಸಲ ಮತದಾನದ ಪ್ರಮಾಣವನ್ನು ಹೆಚ್ಚಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.ಬೇರೆ ರಾಜ್ಯಗಳಲ್ಲಿ `ಸ್ವೀಪ್' ಕಾರ್ಯಕ್ರಮದ ಫಲವಾಗಿ ಮತದಾನದ ಪ್ರಮಾಣದಲ್ಲಿ ಶೇ 10 ರಿಂದ ಶೇ 15ರಷ್ಟು ಹೆಚ್ಚಳವಾಗಿದೆ ಎಂದರು. ಇತ್ತೀಚೆಗೆ ತಲಘಟ್ಟಪುರದಲ್ಲಿ ವಶಪಡಿಸಿಕೊಂಡ ಚಿನ್ನದ ಬಳೆಗಳ ಪ್ರಕರಣದ ತನಿಖೆ ಮುಂದುವರೆದಿದ್ದು, ಅದು ಯಾರಿಗೆ ಸೇರಿದ್ದು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದರು.

ವಿಮಲಾಗೌಡ ವಿರುದ್ಧ ದೂರು

`ಯಶವಂತಪುರದಲ್ಲಿ ಕೆಜೆಪಿ ಅಭ್ಯರ್ಥಿ ಪ್ರಮೀಳಾ ಗೌಡ ಅವರು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ನಾಮಪತ್ರವೇ ಇಲ್ಲದೆ ಚುನಾವಣಾ ಕಚೇರಿಗೆ ಬಂದಿದ್ದರು. ಆ ಸಮಯದಲ್ಲಿ ನಾಮಪತ್ರ ಸಲ್ಲಿಸಲು ಸಾಧ್ಯವಾಗದ ಕಾರಣ ಚುನಾವಣಾ ಅಧಿಕಾರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡಿದ್ದಾರೆ. ಈ ಸಂಬಂಧ ಪ್ರಮೀಳಾ ವಿರುದ್ಧ ಸರ್ಕಾರಿ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ' - ಬೆಂಗಳೂರು ನಗರ ಜಿಲ್ಲಾಧಿಕಾರಿ ಪೊನ್ನುರಾಜ್

ಪ್ರತಿಕ್ರಿಯಿಸಿ (+)