ಭಾನುವಾರ, ಜೂನ್ 13, 2021
26 °C

ಚುನಾವಣೆಗೆ ತಡೆ ಒಡ್ಡುವವರಿಗೆ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಚುನಾವಣೆ ಸಂದರ್ಭದಲ್ಲಿ ತಡೆ ಒಡ್ಡುವ 730 ಜನರ ಬಗ್ಗೆ ಪೊಲೀಸರು ತೀವ್ರ ನಿಗಾ ಇರಿಸಲಾಗಿದ್ದು, ಅವರನ್ನು ಬಂಧಿಸಬೇಕೇ ಇಲ್ಲವೇ ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆದರೆ, ಉಳಿದ 283 ರೌಡಿ ಷೀಟರ್‌ಗಳ ವಿರುದ್ಧ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಅನುಸಾರ ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಮೀರ್ ಶುಕ್ಲಾ ಹೇಳಿದರು.ಚುನಾವಣೆಯ ಸಿದ್ಧತೆಯ ಕುರಿತು ಬುಧ­ವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಕಮಿಷನರೇಟ್‌ ಹಾಗೂ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಕಳೆದ ಚುನಾವಣೆಯಲ್ಲಿ ಅನಗತ್ಯ ತೊಂದರೆ ಮಾಡಿದ 730 ಜನರನ್ನು ಗುರುತಿಸ­ಲಾಗಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 2,275 ಜನರು ಬಂದೂಕು ಪರವಾನಗಿ ಹೊಂದಿದ್ದು, ಅವುಗಳನ್ನು ಸಂಬಂಧ­ಪಟ್ಟ ಪೊಲೀಸ್‌ ಠಾಣೆಗಳಲ್ಲಿ ಜಮಾ ಮಾಡು­ವಂತೆ ಈಗಾಗಲೇ ಆದೇಶ ನೀಡಲಾಗಿದೆ. ಬ್ಯಾಂಕ್‌ ಸೇರಿದಂತೆ ಕೆಲವು ಪ್ರಮುಖ ಕಚೇರಿಗಳ ಭದ್ರತೆಗೆಂದು ಕೆಲ ಬಂದೂ­ಕು­ಗಳಿಗೆ ಜಮಾ ಆದೇಶದಿಂದ ವಿನಾಯ್ತಿ ನೀಡ­ಬೇ­ಕಾಗುತ್ತದೆ. ಈ ಸಂಬಂಧ ನಾನು, ಹು–ಧಾ ಪೊಲೀಸ್‌ ಕಮಿಷ­ನರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿಗಳನ್ನು ಒಳಗೊಂಡ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದರು.ಮತದಾನ ಪ್ರಮಾಣ ಹೆಚ್ಚಳಕ್ಕೆ ಯತ್ನ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ 56.56ರಷ್ಟು ಮತದಾನವಾಗಿತ್ತು. ಈ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಮಟ್ಟದ ಸ್ವೀಪ್‌ ಸಮಿತಿಯನ್ನು ರಚಿಸಲಾಗಿದ್ದು, ವಿವಿಧ ಗ್ರಾಮಗಳಲ್ಲಿ ಜಾಥಾ, ವಿವಿಧ ಸ್ಪರ್ಧೆಗಳು, ರೇಡಿಯೊ ಜಿಂಗಲ್ಸ್‌ಗಳನ್ನು ಪ್ರಸಾರ ಮಾಡ­ಲಾಗು­ವುದು’ ಎಂದು ಹೇಳಿದರು.ಜಿಲ್ಲೆಯಲ್ಲಿ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ 2,357 ಪೊಲೀಸ್‌ ಸಿಬ್ಬಂದಿ­­­ಯನ್ನು ಬಳಕೆ ಮಾಡಲಾಗುತ್ತಿದೆ. ಅಭ್ಯ­ರ್ಥಿಗಳು ಮಾಡುವ ವೆಚ್ಚದ  ಮೇಲೆ ನಿಗಾ ಇಡಲು 26 ಫ್ಲೈಯಿಂಗ್‌ ಸ್ಕ್ವಾಡ್‌, 24 ಸ್ಟಾಟಿಕ್‌ ಸರ್ವಲೆನ್ಸ್‌ ಟೀಂ, 135 ಸೆಕ್ಟರ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿಯೊಬ್ಬ ಸಹಾಯಕ ಚುನಾವಣಾಧಿಕಾರಿಗಳಿಗೆ ಲೆಕ್ಕಪತ್ರ ಪರಿಶೀಲ­ನಾಧಿ­ಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಎಂದು ಸಮೀರ್‌ ಶುಕ್ಲಾ ಹೇಳಿದರು.ಅಭ್ಯರ್ಥಿಗಳು ಪ್ರಚಾರಕ್ಕಾಗಿ ವೆಚ್ಚ ಮಾಡುವ ಹಾಗೂ ಅವರು ಅದರ ಲೆಕ್ಕ ನೀಡುವುದರ ಮಧ್ಯೆ ಸಾಮ್ಯತೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಈ ಅಧಿಕಾರಿಯ ಜವಾಬ್ದಾರಿ. ಪ್ರಚಾರದ ವಿಡಿಯೊ ಚಿತ್ರೀಕರಣ ಮಾಡಿ, ಆ ಕಾರ್ಯಕ್ರಮಕ್ಕೆ ಮಾಡಲಾದ ನಿಜವಾದ ವೆಚ್ಚವನ್ನು ಇವರು ಪತ್ತೆ ಹಚ್ಚಲಿದ್ದಾರೆ’ ಎಂದರು.ಹತ್ತು ಪ್ರಕರಣ: ₨ 46 ಲಕ್ಷ ವಶ

ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾತಿಗೆ ಬಂದ ನಂತರ ಇಲ್ಲಿಯವರೆಗೆ 10 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ ಐದು ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಯಾವುದೇ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪಕ್ಷದ ಮಹಾನಗರ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಾಗಿದೆ  ಎಂದು ಹೇಳಿದರು.ಅಕ್ರಮವಾಗಿ ಸಾಗಿಸುತ್ತಿದ್ದ ₨ 45 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದ ₨ 1.49 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ 12 ಗಂಟೆಯ ನಂತರವೂ ಮುಚ್ಚದಿರುವ ಐದು ಬಾರ್‌ ಹಾಗೂ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ.ಅಬಕಾರಿ ಇಲಾಖೆಯು 123 ದಾಳಿಗಳನ್ನು ನಡೆಸಿ, 47 ಪ್ರಕರಣಗಳನ್ನು ದಾಖಲಿಸಿದೆ. 37 ಜನರನ್ನು ಬಂಧಿಸಲಾಗಿದೆ. ₨ 40,389 ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಮೀರ್‌ ಶುಕ್ಲಾ ತಿಳಿಸಿದರು.35,585 ನೂತನ ಮತದಾರರು?

ಚುನಾವಣಾ ಆಯೋಗವು ನೂತನ ಮತದಾರರ ಹೆಸರು ಸೇರ್ಪಡೆಗೆ ಮಾ 16ರವರೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 35,585 ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಬಯಸಿದ್ದು, ಅಧಿಕೃತ ನಮೂನೆ 6ನ್ನು ಸಲ್ಲಿಸಿದ್ದಾರೆ. ಇದನ್ನು ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತಿದ್ದು, ಆಯೋಗ ಹೊಸದಾಗಿ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಮೀರ್‌ ಶುಕ್ಲಾ ಹೇಳಿದರು.ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ

ಏಪ್ರಿಲ್‌ 17ರಂದು ಧಾರವಾಡ ಲೋಕ­ಸಭಾ ಕ್ಷೇತ್ರದ ಮತದಾನ ನಡೆಯಲಿದ್ದು, ಮತದಾನ ಬೆಳಿಗ್ಗೆ 7ಕ್ಕೆ ಆರಂಭವಾಗಿ ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ಇತ್ತೀಚೆಗೆ ಚುನಾವಣಾ ಆಯೋಗ ಹೆಚ್ಚು ಮತದಾರ­ರಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಮತ­ದಾನದ ಅವಧಿನ್ನು ಎರಡು ಗಂಟೆ ಹೆಚ್ಚಿಸಿದೆ. ಈ ಅವಧಿ ಮೊದಲು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಇತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.