ಚುನಾವಣೆಗೆ ಮೊದಲೇ ಬಿಜೆಪಿಗೆ ಆಘಾತ

7
ಗದ್ದುಗೆಗೆ ಗುದ್ದಾಟ 2013

ಚುನಾವಣೆಗೆ ಮೊದಲೇ ಬಿಜೆಪಿಗೆ ಆಘಾತ

Published:
Updated:
ಚುನಾವಣೆಗೆ ಮೊದಲೇ ಬಿಜೆಪಿಗೆ ಆಘಾತ

ಚಿಕ್ಕಮಗಳೂರು:  ಕಾಫಿ ಕಣಿವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಕಾವು ಏರಲು ಶುರುವಾಗಿದ್ದು, ಸಂಭವನೀಯ ಅಭ್ಯರ್ಥಿಗಳು ಈಗಾಲೇ ಕ್ಷೇತ್ರಗಳಲ್ಲಿ ಚುರುಕಿನ ಪ್ರವಾಸ ನಡೆಸುತ್ತಿದ್ದಾರೆ.ಕೆಲ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಸಭೆ, ಸಮಾರಂಭ, ಕ್ರೀಡಾಕೂಟ, ಮದುವೆ, ಮುಂಜಿ, ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ನೆಪದಲ್ಲಿ `ಹಣದ ಹೊಳೆ' ಹರಿಸುತ್ತಿದ್ದಾರೆ.ಚಿಕ್ಕಮಗಳೂರು ಕ್ಷೇತ್ರಕ್ಕೆ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಶೃಂಗೇರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರ ಸಚಿವ ಡಿ.ಎನ್.ಜೀವರಾಜ್, ಮೂಡಿಗೆರೆ ಕ್ಷೇತ್ರಕ್ಕೆ ಎಂ.ಪಿ.ಕುಮಾರಸ್ವಾಮಿ ಅವರನ್ನೇ ಬಿಜೆಪಿ ಈ ಬಾರಿ ಮತ್ತೆ ಕಣಕ್ಕಿಳಿಸುವುದು ಬಹುತೇಖ ಖಚಿತ. ಎಂ.ಪಿ.ಕುಮಾರಸ್ವಾಮಿ ಅವರ ಸ್ಪರ್ಧೆಗೆ ಸ್ವಪಕ್ಷೀಯರಲ್ಲಿ ಒಂದು ಗುಂಪು ವಿರೋಧ ವ್ಯಕ್ತಪಡಿಸುತ್ತಿದೆ. ತರೀಕೆರೆ ಮತ್ತು ಕಡೂರು ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಹುಡುಕುವ ಪರಿಸ್ಥಿತಿ ಪಕ್ಷಕ್ಕೆ ಎದುರಾಗಿದೆ.ಚುನಾವಣೆ ಪೂರ್ವದಲ್ಲೇ ಆಘಾತ: ಹಿಂದಿನ ಚುನಾವಣೆಯಲ್ಲಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಚುನಾವಣೆ ಪೂರ್ವದಲ್ಲೇ ಆಘಾತ ಆಗಿದೆ. ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕೆಜೆಪಿಗೆ ಸೇರಿದ್ದಾರೆ. ಕಡೂರು ಶಾಸಕ ಡಾ.ವೈ.ಸಿ.ವಿಶ್ವನಾಥ್ ಇತ್ತ ಸಂಪೂರ್ಣ ಬಿಜೆಪಿ ಪರವೂ ಇಲ್ಲದೆ, ಅತ್ತ ಕೆಜೆಪಿಯಲ್ಲಿ ಗುರುತಿಸಿಕೊಳ್ಳದೇ `ತ್ರಿಶಂಕು' ಸ್ಥಿತಿಯಲ್ಲಿದ್ದಾರೆ.`ಈ ಬಾರಿ ಚುನಾವಣೆಗೆ ಕಡೂರು ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರಿಗೆ ಅವಕಾಶ ನೀಡಲು ಕಳೆದ ಬಾರಿ ಉಪಚುನಾವಣೆ ವೇಳೆಯೇ  ನಿರ್ಧರಿಸಲಾಗಿದೆ. ಈ ಬಗ್ಗೆ ಬೆಳ್ಳಿ ಪ್ರಕಾಶ್ ಮತ್ತು ವೈ.ಸಿ.ವಿಶ್ವನಾಥ್ ನಡುವೆ ಒಪ್ಪಂದವೂ      ಆಗಿತ್ತು' ಎನ್ನುತ್ತವೆ ಬಿಜೆಪಿ ಮೂಲಗಳು.ದತ್ತ ಸ್ಪರ್ಧೆ ಖಚಿತ: ಹಿಂದಿನ ಎರಡು ಚುನಾವಣೆಗಳಲ್ಲಿ ಗೆಲುವಿನ ಹತ್ತಿರಕ್ಕೆ ಬಂದು ನಿರಾಸೆ ಅನುಭವಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ, ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಮತ್ತೆ ಇದೇ ಕ್ಷೇತ್ರದಲ್ಲಿ  ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ.

ಕಾಂಗ್ರೆಸ್‌ನಿಂದ ಕೆ.ಬಿ.ಮಲ್ಲಿಕಾರ್ಜುನ್ ಹೆಸರು ಕೇಳಿ ಬರುತ್ತಿದ್ದರೂ ಆ ಪಕ್ಷ ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ.ತರೀಕೆರೆಯಲ್ಲಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಿದರೆ, ಕಡೂರಿನಲ್ಲಿ ಮಾಜಿ ಶಾಸಕ ದಿ.ಕೆ.ಎಂ.ಕೃಷ್ಣಮೂರ್ತಿ ಸಹೋದರ ಕೆಂಪರಾಜು ಅಥವಾ ಮಾಜಿ ಸಚಿವ ದಿ.ಮಲ್ಲಿಕಾರ್ಜುನ ಪ್ರಸನ್ನ ಅವರ ಪುತ್ರ ಕೆ.ಎಂ.ವಿನಾಯಕ ಅವರಿಗೆ ಅವಕಾಶ     ಸಿಗಲಿದೆ ಎನ್ನುವ ಲೆಕ್ಕಾಚಾರವಿದೆ.ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಸಗೀರ್ ಅಹಮದ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಅವರ ಪತಿ ಗುತ್ತಿಗೆದಾರ ಶಾಂತೇಗೌಡ, ನಗರಸಭೆ ಸದಸ್ಯ ಬಿ.ಎಂ.ಸಂದೀಪ್, ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ ಪ್ರಬಲ ಆಕಾಂಕ್ಷಿಗಳು.

ಶೃಂಗೇರಿ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡ ಅವರ ಪುತ್ರ ಎಚ್.ಜಿ.ವೆಂಕಟೇಶ್, ಟಿ.ಡಿ.ರಾಜೇಗೌಡ, ಎಐಸಿಸಿ ಮಹಿಳಾ ವಿಭಾಗದ ಕಾರ್ಯದರ್ಶಿ ಬಿ.ಸಿ.ಗೀತಾ ನಡುವೆ ಟಿಕೆಟ್‌ಗೆ ಪೈಪೋಟಿ ಇದೆ. ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರ ಹೆಸರು ಚಿಕ್ಕಮಗಳೂರು, ಶೃಂಗೇರಿ ಕ್ಷೇತ್ರಗಳಿಗೆ ಕೇಳಿಬರುತ್ತಿವೆ. ಮೂಡಿಗೆರೆ ಕ್ಷೇತ್ರಕ್ಕೆ ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಕೆಪಿಸಿಸಿ ಕಾರ್ಯದರ್ಶಿ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿ.ಪಂ. ಸದಸ್ಯ ಅನಂತು ಲಾಬಿ ನಡೆಸುತ್ತಿದ್ದಾರೆ. ತರೀಕೆರೆ ಕ್ಷೇತ್ರದಲ್ಲಿ ಟಿ.ವಿ.ಶಿವಶಂಕರ್, ಮಾಜಿ ಶಾಸಕರಾದ ಬಿ.ಆರ್.ನೀಲಕಂಠಪ್ಪ, ಟಿ.ಎಚ್.ಶಿವಶಂಕರ್, ಎಸ್.ಎಂ.ನಾಗರಾಜ್, ದೋರನಾಳು ಪರಮೇಶ್ ಕಾಂಗ್ರೆಸ್ ಆಕಾಂಕ್ಷಿಗಳು.ಜೆಡಿಎಸ್ ಅಭ್ಯರ್ಥಿಗಳು: ಜೆಡಿಎಸ್ ಪಕ್ಷ ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಕಡೂರಿಗೆ ವೈ.ಎಸ್.ವಿ.ದತ್ತ ಹಾಗೂ ಶೃಂಗೇರಿಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ.ಕೆಜೆಪಿಯಿಂದ ಸುರೇಶ್: ಕೆಜೆಪಿಯಿಂದ ತರೀಕೆರೆ ಕ್ಷೇತ್ರಕ್ಕೆ ಹಾಲಿ ಶಾಸಕ ಡಿ.ಎಸ್.ಸುರೇಶ್ ಅಧಿಕೃತ ಅಭ್ಯರ್ಥಿ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಜಿಲ್ಲಾ ಸಮಾವೇಶದಲ್ಲಿ ಪ್ರಕಟಿಸಿದ್ದಾರೆ.ಸಿಪಿಐ ಸ್ಪರ್ಧೆ: ಸಿಪಿಐ ಕೂಡ ಚಿಕ್ಕಮಗಳೂರು ಮತ್ತು ಮೂಡಿಗೆರೆ ಕ್ಷೇತ್ರಕ್ಕೆ ಸ್ಪರ್ಧಿಸುವುದಾಗಿ ಪಕ್ಷದ ಸಮಾವೇಶದಲ್ಲಿ ಘೋಷಿಸಿದೆ. ಆದರೆ ಅಭ್ಯರ್ಥಿಗಳ ಹೆಸರು ಇನ್ನೂ ಪ್ರಕಟಿಸಿಲ್ಲ.ಜೆಡಿಯು ಜಿಲ್ಲಾ ಅಧ್ಯಕ್ಷ ಕೆ.ಭರತ್ ಪಕ್ಷದ ಜಿಲ್ಲಾ ಘಟಕ ವಿಸರ್ಜಿಸಿ, ಬಿಎಸ್‌ಆರ್ ಕಾಂಗ್ರೆಸ್ ಸೇರಿದ್ದಾರೆ. ಮೂಡಿಗೆರೆ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ   ಘೋಷಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry