ಬುಧವಾರ, ನವೆಂಬರ್ 13, 2019
21 °C
ಗಡಿಯೋಧರು, ಸೈನಿಕರಿಗೆ ವಿಶೇಷ ಅಂಚೆ ಸೇವೆ

ಚುನಾವಣೆಗೆ ಮೊದಲೇ ಮತದಾನದ ವ್ಯವಸ್ಥೆ!

Published:
Updated:

ಕುಷ್ಟಗಿ: ಚುನಾವಣಾ ಕರ್ತವ್ಯದ ಮೇಲೆ ತೆರಳುವ ಸಿಬ್ಬಂದಿ ಇನ್ನು ಮುಂದೆ ಮತದಾನದ ಹಕ್ಕಿನಿಂದ ವಂಚಿತರಾಗಬೇಕಿ. ಇವರಿಗಾಗಿಯೇ ವಿಶೇಷ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಚುನಾವಣಾ ಆಯೋಗ ಮತದಾನಕ್ಕೆ ಎರಡು ವಾರ ಮೊದಲೇ ತಮ್ಮ ಮತ ಹಕ್ಕು ಚಲಾಯಿಸುವುದಕ್ಕೆ ಅವಕಾಶ ನೀಡಿದೆ.ಅಂಚೆ ಮತದಾನದ ಅವ್ಯವಸ್ಥೆ ಮತ್ತು ಇಲ್ಲದ ಉಸಾಬರಿಯೇ ಬೇಡ ಎಂದು ಉದಾಸೀನ ಮಾಡುತ್ತಿದ್ದುದರಿಂದ ಪ್ರತಿ ಚುನಾವಣೆಯಲ್ಲೂ ಸಾಕಷ್ಟು ಜನ ಸಿಬ್ಬಂದಿ ಮತದಾನದ ಹಕ್ಕು ಕಳೆದುಕೊಳ್ಳುತ್ತಿದ್ದರು. ಈ ಬಾರಿ ಹಾಗಿಲ್ಲ, ಕರ್ತವ್ಯಕ್ಕೆ ಗುರುತಿಸಲಾಗಿರುವ ಈ ಕ್ಷೇತ್ರದ ಸಿಬ್ಬಂದಿಗೆ ಏ.23 ಮತ್ತು 29ರಂದು ಪಟ್ಟಣದಲ್ಲಿ ತರಬೇತಿ ಏರ್ಪಡಿಸಲಾಗಿದ್ದು ಮತದಾನಕ್ಕೆ ತರಬೇತಿ ಸ್ಥಳದಲ್ಲಿಯೇ ತೆರೆಯುವ ಪ್ರತ್ಯೇಕ ಕೌಂಟರ್‌ನಲ್ಲಿ ಸಿಬ್ಬಂದಿ ಮೊದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂಬುದನ್ನು ಚುನಾವಣಾಧಿಕಾರಿ ಸುಜ್ಞಾನಮೂರ್ತಿ ವಿವರಿಸಿದರು.ಹೇಗೆ?: ತರಬೇತಿಗೆ ಹಾಜರಾಗುವ ಸಿಬ್ಬಂದಿ ಮೊದಲೇ ಪಡೆದ ಅಂಚೆ ಮತದಾನದ ಫಾರ್ಮ್ ನಂ 12 ಅನ್ನು ಅಲ್ಲಿರುವ ಗೆಜಿಟೆಡ್ ದರ್ಜೆ ಅಧಿಕಾರಿಗೆ ಮರಳಿಸಿದರೆ ಅವರು ಈ ಕ್ಷೇತ್ರದ ಮತಪತ್ರ ನೀಡುತ್ತಾರೆ.ಪಕ್ಕದಲ್ಲಿನ ಮರೆಮಾಡಿರುವ ಸ್ಥಳದಲ್ಲಿ ತಮಗೆ ಬೇಕಾದ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕಿದ ಮತಪತ್ರವನ್ನು ಕವರ್‌ನಲ್ಲಿ ಭದ್ರಪಡಿಸಿ ಅಲ್ಲಿ ಇಟ್ಟಿರುವ ಮತ ಪೆಟ್ಟಿಗೆಯಲ್ಲಿ ಹಾಕಿದರೆ ಮುಗಿಯಿತು. ತರಬೇತಿ ನಡೆಯುವ ಎರಡು ದಿನವೂ ಮತ ಚಲಾಯಿಸಬಹುದು. ಅಷ್ಟೇ ಅಲ್ಲ ಅಂಚೆ ಮೂಲಕವೂ ರವಾನಿಸಬಹುದು ಎಂದು ತಿಳಿಸಿದರು.ಗಡಿಯೋಧರಿಗೆ: ಗಡಿ ಕಾಯುವ ಯೋಧರು, ಬೇರೆ ಬೇರೆ ಸ್ಥಳದಲ್ಲಿರುವ ಸೈನಿಕರು, ವಿವಿಧ ಸೇವೆಗಳಲ್ಲಿ ಇರುವವರಿಗಾಗಿಯೇ ಈ ಸಲ ಅಂಚೆ ಮತದಾನದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆಯುವ ಅವಧಿ ಮುಗಿದ 48 ಗಂಟೆಯೊಳಗೆ ಸಂಬಂಧಿಸಿದ ಯೋಧರಿಗೆ ಕ್ಷೇತ್ರದ ಅಂಚೆ ಮತಪತ್ರ ರವಾನಿಸಲಾಗುತ್ತದೆ. ಅದೇ ರೀತಿ ಮತಪತ್ರಗಳನ್ನು ಕ್ಷೇತ್ರದ ಚುನಾವಣಾಧಿಕಾರಿಗೆ ತಲುಪಿಸುವುದಕ್ಕೂ ಅಂಚೆ ಇಲಾಖೆ ವಿಶೇಷ ಅನುಕೂಲ ಕಲ್ಪಿಸಿದೆ ಎಂದು ಹೇಳಿದರು. ಸಹಾಯಕ ಚುನಾವಣಾಧಿಕಾರಿ ವೀರೇಶ ಬಿರಾದಾರ ಇದ್ದರು.

ಪ್ರತಿಕ್ರಿಯಿಸಿ (+)