ಮಂಗಳವಾರ, ನವೆಂಬರ್ 19, 2019
22 °C

`ಚುನಾವಣೆಗೆ ಮೊದಲೇ ಶಸ್ತ್ರತ್ಯಾಗ ಮಾಡಿಲ್ಲ'

Published:
Updated:
`ಚುನಾವಣೆಗೆ ಮೊದಲೇ ಶಸ್ತ್ರತ್ಯಾಗ ಮಾಡಿಲ್ಲ'

ಬೆಂಗಳೂರು: `ಕಳೆದ ಐದು ವರ್ಷಗಳಲ್ಲಿ ಕೆಲವು ತಪ್ಪುಗಳು ಆಗಿರುವುದು ನಿಜ. ಇದರ ನಡುವೆಯೂ ಒಳ್ಳೆಯ ಕೆಲಸ ಮಾಡಿದ್ದೇವೆ. ಸಾಧನೆಗಳ ಆಧಾರದ ಮೇಲೆಯೇ ಮತ ಯಾಚಿಸುತ್ತಿದ್ದೇವೆ. ಮತದಾರರು ಬೆಂಬಲಿಸುತ್ತಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಗುರುವಾರ ಇಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷ ಅಲ್ಲ. ವಿಚಾರ ಮತ್ತು ಸಂಘಟನೆ ಆಧಾರದ ಮೇಲೆ ಬೆಳೆದಿದೆ. ಜನರು ಮತ್ತು ಕಾರ್ಯಕರ್ತರೇ ನಮಗೆ ಆಧಾರ' ಎಂದರು.`ಚುನಾವಣೆಗೂ ಮೊದಲೇ ಬಿಜೆಪಿಯವರು ಶಸ್ತ್ರತ್ಯಾಗ ಮಾಡಿದ್ದಾರೆ ಎಂಬುದು ಸರಿಯಲ್ಲ, ನಮ್ಮ ಪಕ್ಷ ಚುನಾವಣೆಗೆ ಸಜ್ಜಾಗಿದೆ. ಸೈನಿಕರು (ಕಾರ್ಯಕರ್ತರು) ಸಮರ್ಥರಾಗಿದ್ದಾರೆ. ಪ್ರಚಾರಕ್ಕೆ ನಮ್ಮದೇ ಆದ ಸಂಪರ್ಕ ಜಾಲವಿದೆ. ಕಾರ್ಯಕರ್ತರು ಪ್ರತಿಯೊಂದು ಮನೆಗೂ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಬೇರೆ ಯಾವ ಪಕ್ಷದಲ್ಲೂ ಈ ರೀತಿಯ ವ್ಯವಸ್ಥೆ ಇಲ್ಲ. ಈ ಅಂಶವೇ ನಮ್ಮ ಗೆಲುವಿಗೆ ಸಹಕಾರಿ ಆಗಲಿದೆ' ಎಂದು ಹೇಳಿದರು.ಬಿಜೆಪಿ ಮೂರು ಹೋಳು ಆಗಿದ್ದರೂ, ಸಂಘಟನೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಾರ್ಯಕರ್ತರಲ್ಲಿನ ಉತ್ಸಾಹ ಕಡಿಮೆಯಾಗಿಲ್ಲ. ಸಣ್ಣಪುಟ್ಟ ತಪ್ಪುಗಳಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿತ್ತು. ಈಗ ಎಲ್ಲವೂ ಸರಿ ಹೋಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ತಪ್ಪು ಮಾಡಿದವರ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದೆ. ಆದರೆ, ಕಾಂಗ್ರೆಸ್ ಮಾತ್ರ ಪ್ರಧಾನಿ ಸೇರಿ ಎಲ್ಲರನ್ನೂ ರಕ್ಷಿಸುತ್ತಿದೆ. ಜಂಟಿ ಸದನ ಸಮಿತಿ ಮುಂದೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಜರಾಗಲಿಲ್ಲ. ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ವಾಸ್ತವಾಂಶ ತಿಳಿಸಿಕೊಡುತ್ತಿದ್ದೇವೆ

`ಬಿಜೆಪಿಯಿಂದ ಜನತೆಗೆ ವಿಶ್ವಾಸದ್ರೋಹ ಆಗಿರುವುದು ನಿಜ. ಆದರೆ, ರಾಜಕೀಯ ಬಿಕ್ಕಟ್ಟಿನ ನಡುವೆಯೂ ಅಭಿವೃದ್ಧಿ ಕೆಲಸಗಳು ಆಗಿವೆ. ನಕಾರಾತ್ಮಕ ಅಂಶಗಳು ಹೆಚ್ಚು ಮಹತ್ವ ಪಡೆದುಕೊಂಡಿದ್ದರಿಂದ ಅಭಿವೃದ್ಧಿ ಕಾರ್ಯಗಳು ಗೌಣವಾದವು. ಜನರಿಗೆ ವಾಸ್ತವಾಂಶವನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ'.

- ಪ್ರಹ್ಲಾದ ಜೋಶಿ

`

ಪ್ರತಿಕ್ರಿಯಿಸಿ (+)