ಗುರುವಾರ , ಜೂನ್ 17, 2021
27 °C

ಚುನಾವಣೆಗೆ ಸಕಲ ಸಿದ್ಧತೆ: ಫ್ಲೆಕ್ಸ್ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಆರಂಭವಾಗಿವೆ. ಮತದಾರರ ಪಟ್ಟಿ, ಮತಗಟ್ಟೆ ವಿವರ, ಸಿಬ್ಬಂದಿ ನಿಯೋಜನೆ ಬಹುತೇಕ ಅಂತಿಮಗೊಂಡಿವೆ. ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಹಾಕಲಾಗಿದ್ದ ಸರ್ಕಾರದ ಜಾಹೀರಾತು ಫಲಕ, ಫ್ಲೇಕ್ಸ್‌ಗಳನ್ನು ತೆರವುಗೊಳಿಸಲಾಯಿತು. ಮತ್ತೊಂದೆಡೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಪ್ರಕ್ರಿಯೆ ಗರಿಗೆದರಿದವು.‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿ ಎರಡೂ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ, ಕೃಷ್ಣರಾಜ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ವರುಣಾ ವಿಧಾನಸಭಾ ಕ್ಷೇತ್ರದ ಕೆಲ ಗ್ರಾಮಗಳನ್ನು ಹೊರತುಪಡಿಸಿ ಜಿಲ್ಲೆಯ ತಿ. ನರಸೀಪುರ, ನಂಜನಗೂಡು, ಎಚ್‌.ಡಿ. ಕೋಟೆ ತಾಲ್ಲೂಕು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಕೆ.ಆರ್‌. ನಗರ ತಾಲ್ಲೂಕು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ. ಶಿಖಾ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ 16.77 ಲಕ್ಷ ಮತದಾರರಿದ್ದಾರೆ. 1,973 ಮತಗಟ್ಟೆ ತೆರೆಯಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ 22.17 ಲಕ್ಷ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಮತದಾರರ ನೋಂದಣಿಯಲ್ಲಿ ಜಿಲ್ಲೆಯಲ್ಲಿ 1.16 ಲಕ್ಷ ಹೊಸ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಆ ಬಳಿಕ 45 ಸಾವಿರ ಮತದಾರರು ನೋಂದಣಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,675 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಹೀಗಾಗಿ, 11 ಸಹಾಯಕ ಚುನಾವಣಾಧಿಕಾರಿ, 15 ನೋಡೆಲ್‌ ಅಧಿಕಾರಿಗಳ ನೇಮಕಕ್ಕೆ ಪ್ರಸ್ತಾವವನ್ನು ಕಳುಹಿಸಲಾಗಿದೆ’ ಎಂದು ವಿವರಿಸಿದರು.‘2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 58ರಷ್ಟು ಮತದಾನವಾಗಿತ್ತು. ಆದರೆ, ಮತದಾರರ ಜಾಗೃತಿ ಆಂದೋಲನದ ಪರಿಣಾಮ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ 71ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವಿದ್ದು, ಅಗತ್ಯ ರೂಪರೇಷ ತಯಾರಿಸಬೇಕಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ವಿಚಕ್ಷಣಾ ದಳ ರಚಿಸಲಾಗುವುದು, ಚೆಕ್‌ಪೋಸ್ಟ್‌ಗಳಲ್ಲಿ ವಿಡಿಯೋ ಮಾಡಲಾಗುವುದು’ ಎಂದರು.ವಾಹನ ಹಿಂದಿರುಗಿಸಲು ಸೂಚನೆ:

ಚುನಾವಣಾ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ವಾಹನಗಳನ್ನು ಮರಳಿಸುವಂತೆ ವಿವಿಧ ಅಭಿವೃದ್ಧಿ ನಿಗಮ, ಮಂಡಳಿ ಹಾಗೂ ಸ್ವಾಯತ್ತತಾ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರೇತರ ಸದಸ್ಯರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಚುನಾವಣಾ ಪ್ರಕ್ರಿಯೆಗೆ ವಾಹನಗಳ ಅಗತ್ಯವಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದ್ದು, ಕೂಡಲೇ ವಾಹನಗಳನ್ನು ಸರ್ಕಾರದ ವಶಕ್ಕೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಫ್ಲೆಕ್ಸ್‌ ತೆರವು:

ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಹಾಕಲಾಗಿದ್ದ ಸರ್ಕಾರದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕಚೇರಿ ಹಾಗೂ ಮಿನಿ ವಿಧಾನಸೌಧದ ಬಳಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಅಳವಡಿಸಿದ್ದ ಫ್ಲೆಕ್ಸ್‌, ಹೋರ್ಡಿಂಗ್ಸ್‌ಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.