ಚುನಾವಣೆಗೆ ಸಿದ್ಧ, ಮೈತ್ರಿ ಇಲ್ಲ- ಪರಮೇಶ್ವರ್

7

ಚುನಾವಣೆಗೆ ಸಿದ್ಧ, ಮೈತ್ರಿ ಇಲ್ಲ- ಪರಮೇಶ್ವರ್

Published:
Updated:

ಮಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಇಲ್ಲಿಗೆ ಬರಲಿರುವುದರಿಂದ ಹೊಸ ಉತ್ಸಾಹ ಮೈಗೂಡಿಸಿಕೊಂಡಿರುವ ಪಕ್ಷದ ರಾಜ್ಯ ಘಟಕ, ಯಾವುದೇ ಕ್ಷಣ ವಿಧಾನಸಭಾ ಚುನಾವಣೆಗೂ ಸಿದ್ಧ, ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂಬ ಘೋಷಣೆ ಮಾಡಿದೆ.ಸೋನಿಯಾ ಅವರ ಭೇಟಿಯ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಮಂಗಳವಾರ ಸಂಜೆ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ಆತ್ಮವಿಶ್ವಾಸದ ಮಾತನ್ನಾಡಿದರು.  ಮುಂದಿನ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ರಚಿಸುವುದು ನಿಶ್ಚಿತ ಎಂದರು.`ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದರೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುವುದು ಖಚಿತ. ಅದರ ಲಾಭ ಕಾಂಗ್ರೆಸ್‌ಗೆ ಆಗಲಿದೆ. ಹೊಸ ಪಕ್ಷ ರಚನೆಯಾದರೆ ಒಂದಿಷ್ಟು ನಾಯಕರ ವಲಸೆ ಅತ್ತಿಂದಿತ್ತ ನಡೆಯಬಹುದು ನಿಜ, ಆದರೆ ಕಾಂಗ್ರೆಸ್‌ಗೆ ಇದರಿಂದ ಭಯವೇನೂ ಇಲ್ಲ. ಯಾವ ಕಾರಣಕ್ಕೂ, ಯಾವ ಪ್ರಾದೇಶಿಕ ಪಕ್ಷದೊಂದಿಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ~ ಎಂದು ಸ್ಪಷ್ಟಪಡಿಸಿದರು.ಸೋನಿಯಾ ಅವರಿಗೆ ಕಾವೇರಿ ನದಿ ನೀರು ಹಂಚಿಕೆ, ಬರಗಾಲ ಸ್ಥಿತಿ, ಅಡಿಕೆಗೆ ಹಳದಿ ರೋಗ, ಗೋರಖ್ ಸಿಂಗ್ ವರದಿಯ ಅನುಷ್ಠಾನದ ಅನಿವಾರ್ಯತೆ, ಮೀನುಗಾರರ ಸಮಸ್ಯೆ, ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಹಿತ ರಾಜ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮನವರಿಕೆ ಮಾಡಲಾಗುವುದು. ಪಕ್ಷದ ಆಯ್ದ ಕೆಲವು ಕಾರ್ಯಕರ್ತರಿಗೆ ಸೋನಿಯಾ ಸಮ್ಮುಖದಲ್ಲಿ ಮಾತನಾಡಲು ಅವಕಾಶ ಕೊಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.ಸೋನಿಯಾ ಅವರ ಭೇಟಿಯಿಂದ ಪಕ್ಷದ ರಾಜ್ಯ ಘಟಕಕ್ಕೆ ಹೊಸ ಚೈತನ್ಯ ಮೂಡುವುದು ಖಂಡಿತ ಎಂದ ಅವರು, ತಮ್ಮ ನಾಯಕತ್ವವನ್ನು ವಿರೋಧಿಸುವವರಿಗೆ ಸೋನಿಯಾ ಭೇಟಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದರು.ಬಿಗಿ ಭದ್ರತೆ:  ಸೋನಿಯಾ ಗಾಂಧಿ ಅವರಿಗೆ `ಝಡ್ ಪ್ಲಸ್~ ಭದ್ರತೆ ಒದಗಿಸಬೇಕಾಗಿರುವುದರಿಂದ ಅವರು ಭೇಟಿ ನೀಡುವ ನೆಹರು ಮೈದಾನ ಮತ್ತು ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್‌ಪಿಜಿ ಅನುಮತಿ ಇಲ್ಲದೆ ಯಾವ ಗಣ್ಯರಿಗೂ ಸೋನಿಯಾ ಸಮೀಪ ಬರಲಾಗದಂತಹ ಸ್ಥಿತಿ ಇದೆ.ಮಂಗಳೂರು ದಸರಾ ಮತ್ತು ಶತಮಾನೋತ್ಸವ ಸಂಭ್ರಮದಲ್ಲಿರುವ ಕುದ್ರೋಳಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸೋನಿಯಾ ಅವರು ಸಂಜೆ 6ಕ್ಕೆ ಚಾಲನೆ ನೀಡಲಿದ್ದು, ಆಯ್ದ ಭಕ್ತರಿಗೆ ಮಾತ್ರ ದೇವಸ್ಥಾನದ ಆವರಣದೊಳಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.ರೈಲು ಇಂದಿನಿಂದ ಕಾರವಾರಕ್ಕೆ

ಮಂಗಳೂರು:
ಪ್ರತಿ ದಿನ ರಾತ್ರಿ ಸಂಚರಿಸುವ ಯಶವಂತಪುರ-ಕಣ್ಣೂರು ರೈಲನ್ನು ವಿಭಜಿಸಿ ಕಾರವಾರಕ್ಕೆ ಈ ರೈಲನ್ನು ಓಡಿಸುವ ಕಾರ್ಯ ಗುರುವಾರ ಬೆಳಿಗ್ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆಯಲಿದೆ. ಈ ರೈಲಿನ ನಾಲ್ಕು ಬೋಗಿಗಳು ಕಣ್ಣೂರಿನತ್ತ ತೆರಳಲಿದ್ದರೆ, 14 ಬೋಗಿಗಳೊಂದಿಗೆ ಕಾರವಾರಕ್ಕೆ ಸಾಗುವ ರೈಲಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹಸಿರು ನಿಶಾನೆ ತೋರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry