ಸೋಮವಾರ, ಜೂನ್ 14, 2021
22 °C

ಚುನಾವಣೆಯಲ್ಲಿ ದ್ವೇಷ; ಸಾವಿನಲ್ಲಿ ಸ್ನೇಹ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅವರಿಬ್ಬರೂ ಮುತ್ಸದ್ಧಿಗಳಾಗಿದ್ದರು. ವಾರ್ಡ್ ಚುನಾವಣೆಯಲ್ಲಿ ಪರಸ್ಪರ ಬದ್ಧ ಎದುರಾಳಿಗಳಾಗಿದ್ದರು. ಒಬ್ಬರು ಭಾವಿ ಮೇಯರ್ ಎಂದೇ ಪ್ರತಿಬಿಂಬಿತವಾಗಿದ್ದರೆ, ಮತ್ತೊಬ್ಬರು ಮಾಜಿ ಮೇಯರ್ ಆಗಿದ್ದರು. 47ನೇ ವಾರ್ಡ್ ಪ್ರತಿನಿಧಿಸಿದ್ದ ಆ ಇಬ್ಬರೂ ನಾಯಕರು ಕೇವಲ 13 ದಿನಗಳ ಅಂತರದಲ್ಲಿ ಅದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು.ಇತ್ತ 13 ದಿನಗಳ ಹಿಂದಷ್ಟೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಸುನೀಗಿದ್ದ ಅಶೋಕ ಜಾಧವ್ ಅವರ ವೈಕುಂಠ ಸಮಾರಾಧನೆ ಬುಧವಾರ ಬೆಳಿಗ್ಗೆ ನಗರದಲ್ಲಿ ನಡೆದರೆ, ಅತ್ತ ಅದೇ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದ ಮತ್ತೊಂದು ರಸ್ತೆ ಅಪಘಾತದಲ್ಲಿ ಸಂಜೆ ಫಿರ್ದೋಸ್ ಕೊಣ್ಣೂರು ಪ್ರಾಣ ತೆತ್ತರು. ಕಾಕತಾಳೀಯವಾಗಿ ನಡೆದ ಈ ಘಟನೆಯಿಂದ ಜಿಲ್ಲೆಯ ಇಡೀ ರಾಜಕೀಯ ವಲಯವೇ ದಿಗ್ಭ್ರಮೆ ಅನುಭವಿಸಿತು.ಒಂದೇ ಕ್ಷೇತ್ರವನ್ನು ಪ್ರತಿನಿಧಿಸಿದವರು, ಚುನಾವಣೆಯಲ್ಲಿ ಎದುರು-ಬದುರಾದವರು, ರಾಜಕೀಯ ತಂತ್ರಗಳಿಗೆ ಹೆಸರಾದವರು ಹೀಗೆ 15 ದಿನಗಳ ಅಂತರದಲ್ಲೇ ಕಣ್ಮರೆಯಾಗಿರುವುದು ವಾರ್ಡ್ ಸದಸ್ಯರನ್ನು ಅನಾಥ ಪ್ರಜ್ಞೆಗೆ ನೂಕಿದರೆ, ಅವಳಿನಗರದ ಜನರಲ್ಲಿ ಅವ್ಯಕ್ತವಾದ ಆತಂಕವನ್ನು ಮೂಡಿಸಿತು. `ಇದೆಂತಹ ಕಾಕತಾಳೀಯ ಘಟನೆ~ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತು.ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದ ಗೂಡೂಸಾಬ್ ಅವರ ಮೂವರು ಪುತ್ರರಲ್ಲಿ ಫಿರ್ದೋಸ್ ಕೂಡ ಒಬ್ಬರಾಗಿದ್ದರು. 1965ರ ಏಪ್ರಿಲ್ 24ರಂದು ಜನಿಸಿದ ಅವರು, ಲ್ಯಾಮಿಂಗ್ಟನ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದರೆ, ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪದವಿ ಓದಿದ್ದರು. ಟಿಪ್ಪು ತಾಂತ್ರಿಕ ಸಂಸ್ಥೆಯಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಅವರು ಪಡೆದಿದ್ದರು.ಫಿರ್ದೋಸ್ ಪಾಲಿಗೆ ರಾಜಕೀಯವೇ ವೃತ್ತಿಯಾಗಿರಲಿಲ್ಲ. ಗುತ್ತಿಗೆದಾರರಾಗಿದ್ದ ಅವರು, ತಮ್ಮ ಉದ್ಯಮದಲ್ಲಿ ಬಿಡುವು ಸಿಕ್ಕಾಗಲೆಲ್ಲ ರಾಜಕೀಯ ಕ್ಷೇತ್ರದಲ್ಲಿ ತೊಡಗುತ್ತಿದ್ದರು. 2001ರಲ್ಲಿ ಕಾಂಗ್ರೆಸ್‌ನಿಂದ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು, ಮೊದಲ ಸಲ ಸದಸ್ಯರಾದ ಸಂದರ್ಭದಲ್ಲೇ ಮೇಯರ್ ಪಟ್ಟ ಅಲಂಕರಿಸುವ ಅದೃಷ್ಟ ಪಡೆದಿದ್ದರು. ಬಳಿಕ 2007ರಲ್ಲಿ ಅವರು ಜೆಡಿಎಸ್‌ಗೆ ಸೇರ್ಪಡೆಯಾದರು.ಈದ್ಗಾ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದು, ರಾಜೀಸೂತ್ರದ ಪ್ರಸ್ತಾಪವಾದಾಗ ಅಂಜುಮನ್ ಸಂಸ್ಥೆಗೆ ಆ ಸ್ಥಳವನ್ನು ಬಿಟ್ಟುಕೊಡಬೇಕು ಎಂದು ಪ್ರಬಲವಾಗಿ ವಾದಿಸಿದವರಲ್ಲಿ ಅವರೂ ಒಬ್ಬರು. ಪ್ರಗತಿಪರ ಧೋರಣೆ ಹೊಂದಿದ್ದ ಫಿರ್ದೋಸ್, ಎಲ್ಲ ಪಕ್ಷಗಳಲ್ಲೂ ಸ್ನೇಹಿತರನ್ನು ಹೊಂದಿದ್ದರು. ತಮ್ಮ ಸಾಮರಸ್ಯದ ಮನೋಭಾವದಿಂದ ಪ್ರೀತಿಯನ್ನು ಸಂಪಾದಿಸಿದ್ದರು.ರಾಜಕೀಯ ಮತ್ತು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಸಾಂಸ್ಕೃತಿಕವಾದ ಆಸಕ್ತಿಯೂ ಅವರಲ್ಲಿತ್ತು. ಹುಬ್ಬಳ್ಳಿಯಲ್ಲಿ ಕೆಲವು ತಿಂಗಳ ಹಿಂದೆ ಅಭೂತಪೂರ್ವ ಎನ್ನುವಂತಹ ಕವ್ವಾಲಿ ಕಾರ್ಯಕ್ರಮವನ್ನು ಸ್ನೇಹಿತರ ಜತೆಗೂಡಿ ಸಂಘಟಿಸಿದ್ದರು.ವಿಷಯ ತಿಳಿಯುತ್ತಿದ್ದಂತೆಯೇ ಕೇಶ್ವಾಪುರದ ಅವರ ಮನೆಯಲ್ಲಿ, ಫಿರ್ದೋಸ್ ಅವರ ತಾಯಿ, ಪತ್ನಿ ತಸ್ನೀಮ್ ಮತ್ತು ಇಬ್ಬರು ಪುತ್ರರ ಗೋಳು ಹೇಳತೀರದಾಗಿತ್ತು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಚಿಕ್ಕಮಗಳೂರಿಗೆ ಪ್ರಚಾರ ಕಾರ್ಯಕ್ಕಾಗಿ ತೆರಳಿದ್ದ ಅವರು, ಹೆಣವಾಗಿ ವಾಪಸ್ಸಾಗಿದ್ದು ಆ ಮನೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡಿತ್ತು.`ಪಕ್ಷಕ್ಕೆ ದೊಡ್ಡ ಆಸ್ತಿ ಎನಿಸಿದ್ದ ಫಿರ್ದೋಸ್ ಸಾವು ನಮ್ಮನ್ನೆಲ್ಲ ಕಂಗೆಡಿಸಿದೆ. ನಾನೂ ಚುನಾವಣಾ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ತೆರಳಿದ್ದೆ. ನಾನು ಮುಂದೆ ಬಂದರೆ ಆತ ಹಿಂದಿದ್ದ. ಸಾವು ಹೀಗೆ ಆತನಿಗೆ ಹೊಂಚು ಹಾಕಿ ಕುಳಿತಿರುತ್ತೆ ಎಂಬ ಯೋಚನೆ ಕನಸು-ಮನಸಿನಲ್ಲೂ ಇರಲಿಲ್ಲ~ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ.ಸಚಿವ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ, ಜಿಲ್ಲಾ ಪಂಚಾಯಿತಿ ಸದಸ್ಯ ಅಮೃತ ದೇಸಾಯಿ, ಎನ್‌ಸಿಪಿಯ ಈರಣ್ಣ ಎಮ್ಮಿ, ಜೈಂಟ್ಸ್ ಇಂಟರ್‌ನ್ಯಾಶನಲ್ ಹುಬ್ಬಳ್ಳಿ ಘಟಕದ ಪದಾಧಿಕಾರಿಗಳು ಫೀದೋಸ್ ಅಕಾಲಿಕ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.