ಶನಿವಾರ, ನವೆಂಬರ್ 16, 2019
24 °C

ಚುನಾವಣೆಯೂ... ನಾಟಿ ಕೋಳಿಯೂ...

Published:
Updated:

ಶ್ರೀನಿವಾಸಪುರ: ವಿಧಾನ ಸಭೆ ಚುನಾವಣೆಗೂ, ನಾಟಿ ಕೋಳಿ ಬೆಲೆಗೂ ಏನು ಸಂಬಂಧ ಎನ್ನಬೇಡಿ. ಆಂಧ್ರಪ್ರದೇಶದ ಬೋಯಿ ಕೊಂಡದ ಕೋಳಿ ವ್ಯಾಪಾರಿಗಳ ಪ್ರಕಾರ ಸಂಬಂಧ ಇದೆ.ಬೋಯಿ ಕೊಂಡ ಗಂಗಮ್ಮ ದೇವಾಲಯಕ್ಕೆ ಪ್ರಸಿದ್ಧಿ. ಅಲ್ಲಿ ಶನಿವಾರ ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಪ್ರಾಣಿ ಬಲಿ ಸಾಮಾನ್ಯ. ಅದರಲ್ಲೂ ಮುಖ್ಯವಾಗಿ ದೇವಿಗೆ ನಾಟಿ ಕೋಳಿ ಬಲಿ ಕೊಡುವುದು ವಾಡಿಕೆ. ಅಲ್ಲಿಗೆ ಹೋಗುವ ಭಕ್ತರಲ್ಲಿ ಶೇ.90 ರಷ್ಟು ಮಂದಿ ಕರ್ನಾಟಕದವರು.ಬೋಯಿ ಕೊಂಡ ಬೆಟ್ಟದ ಬುಡದಲ್ಲಿ ಹತ್ತಾರು ಕೋಳಿ ಮಾರಾಟ ಕೇಂದ್ರಗಳಿವೆ. ಕರ್ನಾಟಕದಲ್ಲಿ ಚುನಾವಣೆ ಘೋಷಣೆಗೆ ಮೊದಲು ಒಂದು ಕೆ.ಜಿ ನಾಟಿ ಕೋಳಿ ಬೆಲೆ ರೂ.160ರಿಂದ 180 ಇತ್ತು. ಆದರೆ ಈಗ ರೂ. 220ರ ಗಡಿ ದಾಟಿದೆ. ಕರ್ನಾಟಕದಿಂದ ರಾಜಕಾರಣಿಗಳ ಪರವಾಗಿ ಗಂಗಮ್ಮನ ಪೂಜೆಗೆ ಬರುವವರ ಸಂಖ್ಯೆ ಹೆಚ್ಚಿದೆ. ಅಭ್ಯರ್ಥಿ ಗೆದ್ದ ಮೇಲೆ ಕುರಿ ಕೊಯ್ದು ಊಟ ಹಾಕಿಸುವುದು ಬೇರೆ.ಆದರೆ ಈಗ ದೇವಿ ಅನುಗ್ರಹಕ್ಕೆ ಕೋಳಿ ಬಲಿ ಕೊಡುವುದು ನಡೆದಿದೆ. ಬಂದವರು ಇಲ್ಲಿ ಮಾಂಸದೂಟ ಮಾಡಿಸಿ ತಿಂದು ಹೋಗುವುದು ಸಾಮಾನ್ಯ. ಇದರಿಂದಾಗಿ ನಾಟಿ ಕೋಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಅದಕ್ಕೆ ಅನುಗುಣವಾಗಿ ಕೋಳಿ ಸಿಗುತ್ತಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎಂಬುದು ಕೋಳಿ ವ್ಯಾಪಾರಿಗಳ ಅಭಿಮತ.ಆಂಧ್ರದ ಬೋಯಿ ಕೊಂಡಕ್ಕೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ನಾಟಿ ಕೋಳಿ ಬೆಲೆ ಇನ್ನೂ ಹೆಚ್ಚು. ನಾಟಿ ಕೋಳಿ ಪ್ರಿಯರ ಸಂಖ್ಯೆ ಹೆಚ್ಚುತ್ತಿದ್ದಂತೆ, ಕೋಳಿ ಬೆಲೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಒಂದು ಕೆ.ಜಿ ಮಾಂಸದ ಬೆಲೆ ರೂ. 300 ಕ್ಕೂ ಹೆಚ್ಚು ಬೀಳುತ್ತದೆ. ಈ ಬೆಲೆ ಬ್ರಾಯ್ಲರ್ ಕೋಳಿ ಮಾಂಸಕ್ಕೆ ಹೋಲಿಸಿದರೆ ಅರ್ಧಕ್ಕರ್ಧ ಜಾಸ್ತಿ. ಈ ಮಧ್ಯೆ ಜಿಲ್ಲೆಯ ಕೆಲವು ಕಡೆಗಳಲ್ಲಿ ನಾಟಿ ಕೋಳಿ ಫಾರಂಗಳು ಹುಟ್ಟಿಕೊಂಡಿವೆ. ಫಾರಂಗಳಲ್ಲಿ ಕೋಳಿ ಮರಿಮಾಡಿಸಿ, ಅಥವಾ ಮರಿಗಳನ್ನು ತಂದು ಮೇಯಿಸುವುದರ ಜೊತೆಗೆ, ಹಳ್ಳಿಗಾಡಿನಲ್ಲಿ ಸುತ್ತಾಡಿ ಸಿಗುವ ನಾಟಿ ಕೋಳಿಗಳನ್ನು ಖರೀದಿಸಿ, ಫಾರಂಗಳಲ್ಲಿ ಸಂಗ್ರಹಿಸಿ ಲಾಭದಾಯಕ ಬೆಲೆಗೆ ಮಾರಲಾಗುತ್ತಿದೆ.ಇನ್ನು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಮಾಂಸಾಹಾರಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾಮಾನ್ಯ ಊಟದ ಬದಲಿಗೆ ಮಾಂಸದೂಟಕ್ಕೆ ಒಲವು ತೋರುವುದುಂಟು.ಯಾವುದೇ ಔಷಧಿಯ ಸೋಂಕಿಲ್ಲದೆ, ನೈಸರ್ಗಿಕವಾಗಿ ಬೆಳೆದ ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರ ಮತ್ತು ಆರೋಗ್ಯಪೂರ್ಣ ಎನ್ನುತ್ತಾರೆ ಕೋಳಿ ಪ್ರಿಯರು.ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಎಲ್ಲರೂ ನಾಟಿ ಕೋಳಿ ಮಾಂಸ ಇಷ್ಟಪಡುತ್ತಾರೆ. ಈ ಎಲ್ಲ ಕಾರಣಗಳಿಂದ ನಾಟಿ ಕೋಳಿಗೆ ಮಾನ್ಯತೆ ಹೆಚ್ಚಿದೆ.

ನಾಟಿ ಕೋಳಿ ಹಾಕಿಸ್ತೀರಾ ಎಂದು ಕೇಳುವುದು, ನಾಟಿ ಕೋಳಿ ಹಾಕಿಸ್ತೀನಿ ಬನ್ರೀ ಎಂದು ಹೇಳುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಮಾತಿಗೆ ತಕ್ಕಂತೆ  ಬೆಲೆಯೂ ದುಬಾರಿಯಾಗಿದೆ.

ಪ್ರತಿಕ್ರಿಯಿಸಿ (+)