ಶುಕ್ರವಾರ, ನವೆಂಬರ್ 15, 2019
26 °C
ಚಿತ್ರದುರ್ಗ, ಆಂಧ್ರಪ್ರದೇಶ ಪೊಲೀಸರ ಸಭೆ; ಮಾಹಿತಿ ವಿನಿಮಯಕ್ಕೆ ನಿರ್ಧಾರ

ಚುನಾವಣೆ ಅಕ್ರಮ ಹತ್ತಿಕ್ಕಲು ಕ್ರಮ

Published:
Updated:

ಮೊಳಕಾಲ್ಮುರು: ವಿಧಾನಸಭಾ ಚುನಾವಣೆ ಅಕ್ರಮಗಳನ್ನು ಹತ್ತಿಕ್ಕಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಜತೆಗೆ ನೆರೆಯ ಆಂಧ್ರಪ್ರದೇಶ ಪೊಲೀಸರ ಸಹಕಾರ ಸಹ ಪಡೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ತಿಳಿಸಿದರು.ಸೋಮವಾರ ಇಲ್ಲಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಚಿತ್ರದುರ್ಗ ಹಾಗೂ ಆಂಧ್ರದ ಅನಂತಪುರ ಜಿಲ್ಲೆ ಪೊಲೀಸ್ ಅಧಿಕಾರಿಗಳ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನೆರೆಯ ರಾಜ್ಯದಿಂದ ಯಾವುದೇ ರೀತಿಯ ಅಕ್ರಮ ಹಣ, ಮದ್ಯ, ನಕಲಿ ಮತದಾರರು ರಾಜ್ಯ ಪ್ರವೇಶ ಮಾಡದಂತೆ ಕ್ರಮ ಎಚ್ಚರ ವಹಿಸಲಾಗುವುದು, ರಾಜ್ಯಕ್ಕೆ ಅಂಟಿಕೊಂಡಿರುವ ಆಂಧ್ರದ ರಾಯದುರ್ಗ, ಡಿ. ಹಿರೇಹಾಳ್, ಶೆಟ್ಟೂರ್, ಮಡಕಶಿರಾ, ಅಮರಾಪುರ, ಗುಮ್ಮಗಟ್ಟ, ಬೊಮ್ಮನಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ಸಹಕಾರ ಪಡೆಯಲು ಕೋರಲಾಗಿದೆ. ಅಲ್ಲಿನ ಸಮಾಜ ಘಾತುಕ ಪಟ್ಟಿಯಲ್ಲಿ ಇರುವ ವ್ಯಕ್ತಿಗಳ ಮತ್ತು ನಮ್ಮಲ್ಲಿರುವ ಪಟ್ಟಿಯಲ್ಲಿರುವ ವ್ಯಕ್ತಿಗಳ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.ಮತದಾರರ ಮೇಲೆ ಯಾವುದೇ ರೀತಿ ಅಮಿಷ ಹಾಗೂ ಒತ್ತಡ ಹೇರಲು ಅವಕಾಶ ನೀಡದೇ ಶಾಂತಿಯುತ ಹಾಗೂ ನೆಮ್ಮದಿ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಮೂರು ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಇನ್ನೂ ಐದು ಹೊಸ ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.ಅನಂತಪುರ ಎಸ್‌ಪಿ ಶಹನಾಜ್‌ವಾಜ್ ಖಾಸೀಂ, ಹಿರಿಯೂರು ಡಿವೈಎಸ್‌ಪಿ ಡಾ.ಶೇಖರ್, ಸಿಪಿಐಗಳಾದ ಜಿ. ಮಂಜುನಾಥ್, ಟಿ. ಮಂಜುನಾಥ್, ಜಮೀರ್ ಅಹಮದ್, ಭಾಸ್ಕರರೆಡ್ಡಿ, ರಾಮಕೃಷ್ಣಯ್ಯ ಹಾಗೂ ವಿವಿಧ ಠಾಣೆಗಳ ಪಿಎಸ್‌ಐಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)