ಸೋಮವಾರ, ನವೆಂಬರ್ 18, 2019
24 °C
ಪ್ರಜಾಪ್ರಗತಿ ರಂಗದಿಂದ ಕಣಕ್ಕೆ

ಚುನಾವಣೆ ಕಣದಲ್ಲಿ ರೈತ ಮುಖಂಡರು

Published:
Updated:

ಚಿಕ್ಕಬಳ್ಳಾಪುರ: ರೈತ ಮುಖಂಡ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರು ರೈತ ಸಂಘದ ನೇತೃತ್ವ ವಹಿಸಿದ್ದ 1990ರ ದಶಕದ ಸಂದರ್ಭದಲ್ಲಿ ರೈತ ಸಂಘದಿಂದ ಅಭ್ಯರ್ಥಿಯೊಬ್ಬರು ವಿಧಾನಸಭೆ ಚುನಾವಣೆ ಕಣಕ್ಕೆ ಇಳಿಯುತ್ತಾರೆಂದರೆ, ಅದು ಭಾರಿ ಸಂಚಲನಕ್ಕೆ ಕಾರಣವಾಗುತಿತ್ತು.ಆಗಿನ ಕಾಲದಲ್ಲಿ ರೈತ ಸಂಘದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂದರೆ, ಅವರು ಪೂರ್ಣಪ್ರಮಾಣದ ವಿದ್ಯಾವಂತರಲ್ಲದೇ ನಿಜವಾದ ಹೋರಾಟಗಾರರೆಂದೇ ಪರಿಗಣಿಸಲಾಗುತಿತ್ತು. ಅವರ ನಿಧನದ ನಂತರ ರೈತರು ಚುನಾವಣೆ ನಿಲ್ಲುವುದರಿಲಿ, ರೈತ ಸಂಘದ ಚಳವಳಿಯೇ ಕಡಿಮೆಯಾಗತೊಡಗಿತು. ಆದರೆ ಚಳವಳಿಯ ಕಾವು ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಕೆಲ ರೈತ ಮುಖಂಡರು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.ಪ್ರಜಾ ಪ್ರಗತಿ ರಂಗದ ಅಭ್ಯರ್ಥಿಗಳಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರಾದ ಬಿ.ಎಚ್.ನರಸಿಂಹಪ್ಪ, ಭಕ್ತರಹಳ್ಳಿ ಬೈರೇಗೌಡ ಮತ್ತು ಮತ್ತು ನಾರಾಯಣಸ್ವಾಮಿ ಸ್ಪರ್ಧಿಸಲಿದ್ದಾರೆ. ಬಿ.ಎಚ್.ನರಸಿಂಹಪ್ಪ-ಚಿಕ್ಕಬಳ್ಳಾಪುರ, ಭಕ್ತರಹಳ್ಳಿ ಬೈರೇಗೌಡ-ಶಿಡ್ಲಘಟ್ಟ ಮತ್ತು ನಾರಾಯಣಸ್ವಾಮಿ-ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜರಾಗಿದ್ದು, ಅವರು ಸ್ಪರ್ಧಿಸುವುದನ್ನು ಪ್ರಜಾ ಪ್ರಗತಿ ರಂಗದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಿಸಿದ್ದಾರೆ. ಮೂವರು ಇದೇ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷ.ಬಿ.ಎಚ್.ನರಸಿಂಹಪ್ಪ: ಚಿಕ್ಕಬಳ್ಳಾಪುರ ತಾಲ್ಲೂಕಿನ ನೆಕ್ಕಲಬಚ್ಚಹಳ್ಳಿ ಗ್ರಾಮದ ನಿವಾಸಿಯಾದ ಬಿ.ಎಚ್.ನರಸಿಂಹಯ್ಯ ಅವರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷರು. ಪ್ರಾಥಮಿಕ ಶಿಕ್ಷಣವನ್ನು ತೌಡನಹಳ್ಳಿ ಮತ್ತು ಶ್ರೀರಾಮಪುರ ಗ್ರಾಮಗಳಲ್ಲಿ ಪೂರೈಸಿದ ಅವರು ಬೆಂಗಳೂರಿನ ಕಾನೂನು ವಿದ್ಯಾಲಯದಲ್ಲಿ ಕಾನೂನು ಶಿಕ್ಷಣ ಕೂಡ ಪಡೆದಿದ್ದಾರೆ. ಕಾಲೇಜಿನಲ್ಲಿ ಕಲಿಯುವಾಗಲೇ ವಿದ್ಯಾರ್ಥಿ ಚಳವಳಿಯಲ್ಲಿ ತೊಡಗಿಸಿಕೊಂಡ ಅವರು ದಲಿತ ವಿದ್ಯಾರ್ಥಿ ಒಕ್ಕೂಟದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಳಿಕ ದಲಿತ ಸಂಘರ್ಷ ಸಮಿತಿ ಸಂಘಟನೆ ಖಜಾಂಚಿಯಾಗಿ ಕಾರ್ಯನಿರ್ವಹಿಸಿದರು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಂಪ್ಯೂಟರ್ ಪ್ರೊಗ್ರಾಮರ್ ಆಗಿಯೂ ಕೆಲಸ ಮಾಡಿದ್ದಾರೆ. ಹೋರಾಟದ ಜೀವನದಲ್ಲಿ ತೊಡಗಲು ಮುಂದಾದ ಅವರು 1989ರಲ್ಲಿ ಪ್ರೊಗ್ರಾಮರ್ ಹುದ್ದೆಗೆ ರಾಜೀನಾಮೆ ನೀಡಿದರು.ನಂತರ ಹತ್ತು ವರ್ಷಗಳ ಕಾಲ ಎಲ್ಲ ರೀತಿಯ ಚಳವಳಿಯಿಂದ ದೂರ ಉಳಿದ ಅವರು ನಂತರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಪದಾಧಿಕಾರಿಯಾಗಿ ನೇಮಕಗೊಂಡರು. ಬಳಿಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಅವರು ಹಲವು ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಶ್ವತ ನೀರಾವರಿ ಹೋರಾಟವಲ್ಲದೇ ರೈತರ ಪರ ಹಲವು ಹೋರಾಟಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.ಭಕ್ತರಹಳ್ಳಿ ಬೈರೇಗೌಡ: ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬೈರೇಗೌಡ ಅವರು ಕಲಾ ಪದವೀಧರರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷರಾಗಿರುವ ಅವರು ರೇಷ್ಮೆ ಕೃಷಿಕರ ಪರ ಹೋರಾಟ, ಶಾಶ್ವತ ನೀರಾವರಿ ಹೋರಾಟ ಮುಂತಾದವುಗಳಲ್ಲಿ ಪಾಲ್ಗೊಂಡಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲೂ ಹಲವು ರೈತಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ರೇಷ್ಮೆ ಕೃಷಿಕರ ಹೋರಾಟದಲ್ಲಿ ಅವರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡರು.ನಾರಾಯಣಸ್ವಾಮಿ: ಬಾಗೇಪಲ್ಲಿ ತಾಲ್ಲೂಕಿನ ಗುಳೂರು ಸಮೀಪದ ಗುಂಡ್ಲಪಲ್ಲಿ ಗ್ರಾಮದವರಾದ ನಾರಾಯಣಸ್ವಾಮಿ ಅವರು ಹಲವಾರು ವರ್ಷಗಳಿಂದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.  ಎಸ್ಸೆಸ್ಸೆಲ್ಸಿವರೆಗೆ ಮಾತ್ರವೇ ಶಿಕ್ಷಣ ಪೂರೈಸಿರುವ ಅವರು ವಿವಿಧ ಚಳವಳಿಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.2009ರ ಫೆಬ್ರುವರಿ 3ರಂದು ಬಾಗೇಪಲ್ಲಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲುಗಳ ಸ್ವಾಧೀನ ಕಳೆದುಕೊಂಡ ಅವರು `ವಾಕರ್' ನೆರವಿನಿಂದಲೇ ಎಲ್ಲ ಕಡೆ ಓಡಾಡುತ್ತಾರೆ.`ನಾವು ಮೂವರು ಇದೇ ಪ್ರಥಮ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಭ್ರಷ್ಟಾಚಾರ ಮತ್ತು ಅನ್ಯಾಯ ಎಲ್ಲೆಡೆ ತೀವ್ರವಾಗಿ ವ್ಯಾಪಿಸಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಜನಪರ ಮತ್ತು ಸಮಾಜಪರ ಕೆಲಸಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡುತ್ತೇವೆ. ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಸೇರಿದಂತೆ ಇತರ ವಿಷಯಗಳಿಗೆ ಪ್ರಾಶಸ್ತ್ಯ ನೀಡುತ್ತೇವೆ. ಯಾರಿಗೂ ಯಾವುದೇ ಆಸೆ-ಆಮಿಷ ಒಡ್ಡುವುದಿಲ್ಲ. `ಒಂದು ವೋಟು-ಒಂದು ನೋಟು' ಎಂಬ ಘೋಷಣೆಯೊಂದಿಗೆ ಚುನಾವಣೆ ಪ್ರಚಾರದಲ್ಲಿ ಇಳಿಯುತ್ತೇವೆ. ಜನಪರ ಕಾರ್ಯಗಳ ಈಡೇರಿಕೆಗಾಗಿ ಜನರ ಬಳಿ ಮತಯಾಚಿಸುತ್ತೇವೆ' ಎಂದು ಮೂವರು ರೈತ ಮುಖಂಡರು `ಪ್ರಜಾವಾಣಿ'ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)