ಬುಧವಾರ, ನವೆಂಬರ್ 13, 2019
25 °C
ಕಚೇರಿ ಸಮಯ ಬದಲು

ಚುನಾವಣೆ ಕೆಲಸಕ್ಕೂ ಅಡ್ಡಿ!

Published:
Updated:

ಕೊಪ್ಪಳ: ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಕಚೇರಿಗಳ ಸಮಯದಲ್ಲಿ ಮಾಡಲಾಗಿರುವ ಬದಲಾವಣೆ ಒಂದೆಡೆ ಸಾರ್ವಜನಿಕರಿಗೆ ತೊಂದರೆ ಎನಿಸಿದರೆ ಮತ್ತೊಂದೆಡೆ ಚುನಾವಣಾ ಕಾರ್ಯಕ್ಕೆ ಅಡ್ಡಿಯುಂಟು ಮಾಡಿದೆ.
ಈ ನಡುವೆ, ಚುನಾವಣಾ ಕಾರ್ಯಕ್ಕೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಿ, ಕಚೇರಿ ಸಮಯವನ್ನು ಈ ಮೊದಲಿನಂತೆಯೇ ನಿಗದಿಪಡಿಸುವಂತೆ ಜಿಲ್ಲಾಡಳಿತ  ಸರ್ಕಾರಕ್ಕೆ ಮನವಿ ಮಾಡಿದೆ.`ಬದಲಾದ ಸಮಯದಂತೆ ಮಧ್ಯಾಹ್ನ 1.30 ಗಂಟೆಗೆ ಕಚೇರಿಗಳು ಬಂದ್ ಆಗುತ್ತವೆ. ಆದರೆ, ಯಾವುದೋ ತುರ್ತು ಮಾಹಿತಿ ಕೋರಿ ಚುನಾವಣಾ ಆಯೋಗದ ಅಧಿಕಾರಿಗಳು ಸಂಜೆ ಕರೆ ಮಾಡುತ್ತಾರೆ ಇಲ್ಲವೇ ಇ-ಮೇಲ್ ಹಾಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಾಹಿತಿ ನೀಡುವುದು ಕಷ್ಟವಾಗುತ್ತದೆ' ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹೇಳುತ್ತಾರೆ. `ಪ್ರಜಾವಾಣಿ'ಯೊಂದಿಗೆ ಮಾತನಾಡಿದ, `ವಿವಿಧ ಕಾರ್ಯಗಳಿಗೆ ಬರುವ ಸಾರ್ವಜನಿಕರು ಹಾಗೂ ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಕಚೇರಿಗಳ ಸಮಯವನ್ನು ಈ ಮೊದಲಿನಂತೆಯೇ ನಿಗದಿಪಡಿಸುವಂತೆ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿರುವುದಾಗಿ' ಹೇಳಿದರು.ಏ. 10ರಿಂದ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇರುತ್ತದೆ. ಆದರೆ, ಕಚೇರಿ ಸಮಯದಲ್ಲಿನ ಬದಲಾವಣೆ ಈ ಕಾರ್ಯಕ್ಕೆ ಅನುಕೂಲಕರವಾಗುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಚುನಾವಣಾ ಕರ್ತವ್ಯ ನಿರತ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ನೌಕರರು ಬೆಳಿಗ್ಗೆ 8 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಮನವಿ ಮಾಡಿದ್ದಾರೆ.ಆದರೆ, ಅವರು ಪ್ರತಿನಿಧಿಸುವ ಶಿಕ್ಷಣ ಇಲಾಖೆಯಲ್ಲಿಯೇ ನೌಕರರು ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.  ಕಳೆದ ಶನಿವಾರ ಹಾಗೂ ಇಂದು ಬೆಳಿಗ್ಗೆ 10 ಗಂಟೆಯಾದರೂ ಕಚೇರಿಯ ಬಾಗಿಲು ತೆರೆದಿರಲಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಕೆಲ ಸಿಬ್ಬಂದಿ ಹೇಳುತ್ತಾರೆ.ನೂತನ ವೇಳಾಪಟ್ಟಿಯಂತೆ ತಮ್ಮ ಕೆಲಸಗಳಿಗಾಗಿ ದೂರದ ಊರುಗಳಿಂದ ಬರುವ ಜನರಿಗೆ ಆಗುವ ತೊಂದರೆಯನ್ನು ಕೇಳುವವರು ಯಾರು ಎಂದೂ ಜನರು ಪ್ರಶ್ನಿಸುತ್ತಿದ್ದಾರೆ. ಇನ್ನೂ, ವಿಚಿತ್ರ ಎಂದರೆ, ಜಿಲ್ಲಾಡಳಿತ ಸಂಕೀರ್ಣದಲ್ಲಿ ಹಲವಾರು ಕಚೇರಿಗಳಿವೆ. ಆದರೆ, ಒಂದೊಂದು ಕಚೇರಿ ಒಂದೊಂದು ಸಮಯಕ್ಕೆ ಕಾರ್ಯಾರಂಭ ಮಾಡುತ್ತಿವೆ ಎಂಬ ದೂರುಗಳು ಸಹ ಕೇಳಿ ಬರುತ್ತಿವೆ. ಇವುಗಳ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವರೇ ಕಾದು ನೋಡಬೇಕು.

ಪ್ರತಿಕ್ರಿಯಿಸಿ (+)