ಗುರುವಾರ , ನವೆಂಬರ್ 21, 2019
23 °C

ಚುನಾವಣೆ: ಚುರುಕು ಪಡೆಯದ ನಾಮಪತ್ರ ಸಲ್ಲಿಕೆ

Published:
Updated:

ಚಿಕ್ಕಮಗಳೂರು: ನಾಮಪತ್ರ ಸಲ್ಲಿಕೆಯ ಎರಡನೇ ದಿನವೂ ಯಾವುದೇ ಅಭ್ಯರ್ಥಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಆದರೆ ರಾಜಕೀಯ ಸಮಾವೇಶ, ಸಭೆ, ಆರೋಪ- ಪ್ರತ್ಯಾರೋಪ ಹಾಗೂ ಪಕ್ಷ ತೊರೆಯುವ ಚಟುವಟಿಕೆಗಳು ಸಕ್ರಿಯವಾಗಿದ್ದವು.ಕಾಂಗ್ರೆಸ್ ಅಪಪ್ರಚಾರ: ಜೀವರಾಜ್

ಶೃಂಗೇರಿ:
ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್‌ನ ಅಪಪ್ರಚಾರದ ನಡುವೆ ನಡೆಯಲಿದ್ದು, ಪ್ರಜ್ಞಾವಂತ ಮತದಾರರು ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಬೆಂಬಲಿಸಲಿದ್ದಾರೆ ಎಂದು ಡಿ.ಎನ್. ಜೀವರಾಜ್ ಹೇಳಿದರು. ಪಟ್ಟಣದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಶೃಂಗೇರಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾ ಯತಿ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಭೆಗಳಲ್ಲಿ ಭಾಗವಹಿಸುತ್ತಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.ಮೇ 8ರಿಂದ ಯೋಜನೆ ಮುಂದುವರಿ ಯಲಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಿಂದ ಸ್ವಇಚ್ಛೆಯಿಂದ ಹೊರ ಹೋಗುವವರಿಗೆ ಪರಿಹಾರ ನೀಡಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸುವ ಮೂಲಕ ಈ ಭಾಗದ ಅಭಿವೃದ್ಧಿ ಮತ್ತು ಪುನರ್ವಸತಿಗೆ ಆದ್ಯತೆ ನೀಡಿ ತಾಲ್ಲೂಕಿನ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಅವರು ಎನ್‌ಎಸ್‌ಯುಐನ ತಾಲ್ಲೂಕು ಘಟಕ, ಕೆರೆಕಟ್ಟೆ ಗ್ರಾವ  ಪಂಚಾಯತಿ ಅಧ್ಯಕ್ಷ ಶೀರ್ಲು ತಿಮ್ಮಪ್ಪ ಒಳಗೊಂಡಂತೆ ಬೇಗಾರು, ಕೆರೆಕಟ್ಟೆ, ವಿದ್ಯಾರಣ್ಯಪುರ, ಧರೇಕೊಪ್ಪ, ತೆಕ್ಕೂರು ಹಾಗೂ ನೆಮ್ಮೋರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ನೂರಾರು ಕಾರ್ಯಕರ್ತರ ಪಟ್ಟಿ ಬಿಡುಗಡೆ ಮಾಡಿದರು.ಪಕ್ಷದ ತಾಲ್ಲೂಕು ಅಧ್ಯಕ್ಷ ಎ.ಎಸ್. ನಯನ, ಜಿ.ಪಂ. ಸದಸ್ಯ ಶಿವಶಂಕರ್, ರಂಗನಾಥ್, ತಾಲ್ಲೂಕು ಪಂಚಾಯತಿ ಸದಸ್ಯ ನೂತನ್ ಕುಮಾರ್, ಬಿ.ಎನ್. ಕೃಷ್ಣ, ಚೇತನ್‌ಹೆಗ್ಡೆ, ಮಂಜುನಾಥ್ ಪಂಡಿತ್ ಮತ್ತಿತರರು ಇದ್ದರು.ಕನ್ನಡ ಧ್ವಜಕ್ಕೆ ಕಾಡಿದ ನೀತಿ ಸಂಹಿತೆ

ಮೂಡಿಗೆರೆ:
ಪಟ್ಟಣದ ಲಯನ್ಸ್ ವೃತ್ತದಲ್ಲಿ ಹಾರಾಡುತ್ತಿದ್ದ ಕನ್ನಡ ಧ್ವಜದ ಮೇಲೆ ಶುಕ್ರವಾರ ನೀತಿ ಸಂಹಿತೆಯ ಕಣ್ಣು ಬಿದ್ದಿತು. ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದಾದ್ಯಂತ ಹಿಂದೆ ಕಟ್ಟಲಾಗಿರುವ ವಿವಿಧ ಪಕ್ಷಗಳಿಗೆ ಸೇರ್ಪಡೆಗೊಂಡ, ಬಂಟಿಂಗ್ಸ್, ಧ್ವಜ, ವಿವಿಧ ಜಾಹಿರಾತುಗಳ ಫಲಕಗಳನ್ನೆಲ್ಲಾ ಶುಕ್ರವಾರ ತೆರವುಗೊಳಿಸಿದರು. ಈ ಹಿನ್ನೆಲೆಯಲ್ಲಿ ಲಯನ್ಸ್ ವೃತ್ತದಲ್ಲಿದ್ದ ಕನ್ನಡದ ಬಾವುಟವನ್ನು ತೆರವುಗೊಳಿಸಲಾಯಿತು.ಆದರೆ ತೆರವುಗೊಳಿಸಿದ ಧ್ವಜವನ್ನು ಸ್ಥಳದಲ್ಲಿಯೇ ಬೇಕಾಬಿಟ್ಟಿ ಬಿಟ್ಟು ಹೋಗಲಾಗಿತ್ತು. ಇದನ್ನು ಕಂಡ ವಾಹನ ಚಾಲಕರು ಧ್ವಜವನ್ನು ಜೋಪಾನವಾಗಿರಿಸಿದ್ದರು. ಧ್ವಜ ತೆರವುಗೊಳಿಸಿದ ಸುದ್ದಿ ಹರಡುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಕನ್ನಡ ಬಾವುಟ ತೆರವಿಗೆ ವಿರೋಧಿಸಿದ್ದರಿಂದ ಪುನಃ ಬಾವುಟ ಕಟ್ಟಲು ಅಧಿಕಾರಿಗಳು ಪರದಾಡಿದರೆ, ಬಿಚ್ಚಿದ್ದ ಬಾವುಟ ನಾಪತ್ತೆಯಾಗಿ ಸ್ವಲ್ಪಕಾಲ ಗೊಂದಲವುಂಟಾಗಿತ್ತು. ನಂತರ ವಾಹನ ಮಾಲೀಕರ ಸಂಘಟನೆಯ ಪದಾಧಿಕಾರಿಗಳು ಧ್ವಜವನ್ನು  ಕೊಟ್ಟ ನಂತರ ಪುನಃ ಧ್ವಜವನ್ನು ಏರಿಸಲಾಯಿತು.ಧ್ವಜ ಇಳಿಸಬಾರದು: ಪಟ್ಟಣದ ಹೃದಯಭಾಗವಾದ ಲಯನ್ಸ್ ವೃತ್ತದಲ್ಲಿ ಹಲವಾರು ವರ್ಷಗಳಿಂದಲೂ ಕನ್ನಡದ ಧ್ವಜವನ್ನು ಹಾರಿಸಲಾಗುತ್ತಿದ್ದು, ಇದನ್ನು ತೆರವುಗೊಳಿಸಿದರೆ, ಆ ಜಾಗಕ್ಕೆ ವಿವಿಧ ಪಕ್ಷಗಳ ಧ್ವಜ, ವಿವಿಧ ಸಂಘಟನೆಗಳ ಧ್ವಜಗಳನ್ನು ಏರಿಸುವ ಸಂಭವ ವಿರುವುದರಿಂದ ಕನ್ನಡದ ಧ್ವಜವನ್ನು ತೆರವುಗೊಳಿಸಬಾರದು ಎಂದು ಹಲವಾರು ಸಂಘಟನೆಗಳು ಒತ್ತಾಯಿಸಿವೆ.ನಾಮಪತ್ರ ಸಲ್ಲಿಕೆ ಇಲ್ಲ: ಚುನಾವಣೆಗೆ ಕಡೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಶುಕ್ರವಾರವೂ ಯಾವುದೇ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ. ನೀತಿಸಂಹಿತೆ ಉಲ್ಲಂಘನೆ ವರದಿಯಾಗಿಲ್ಲ ಮತ್ತು ತನಿಖಾ ತಂಡವು ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಚುನಾವಣಾಧಿಕಾರಿ ಲಕ್ಷ್ಮಿ ನರಸಯ್ಯ ತಿಳಿಸಿದ್ದಾರೆ.

ಬೆಟ್ಟದಮಳಲಿ: ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ

ಚಿಕ್ಕಮಗಳೂರು:
ಆವತಿ ಹೋಬಳಿಯ ಬೆಟ್ಟದಮಳಲಿ ಗ್ರಾಮಸ್ಥರು ಬುಧವಾರ ಲೋಕಪಯೋಗಿ ಇಲಾಖೆಯ ಸಹಾಯಕರ ಕಚೇರಿ ಎದುರು ಹೊಸಳ್ಳಿ, ಕಣತಿ, ಬೆಟ್ಟದಮಳಲಿ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದು, ಗುತ್ತಿಗೆದಾರರು ಕೆಲಸ ಮಾಡದೆ ಹಣ ಪಡೆದಿದ್ದಾರೆಂದು ಆರೋಪಿಸಿ ಪ್ರತಿಭಟಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಗ್ರಾಮದ ಎ.ಎಂ. ಮಂಜುನಾಥಗೌಡ ಮಾತನಾಡಿ, ಶಾಸಕ ಕುಮಾರಸ್ವಾಮಿಯವರ ಬಳಿ ಅನೇಕ ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಬೆಟ್ಟದಮಳಲಿ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಗೆ ಹಣ ಬಿಡುಗಡೆಯಾಗಿ ಗುತ್ತಿಗೆದಾರರು ಬಿಲ್ ಪಡೆದಿದ್ದರೂ ಕಾಮಗಾರಿ ನಡೆದಿರುವುದಿಲ್ಲ. ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ. ತಕ್ಷಣವೇ ಕಾಮಗಾರಿ ಮುಗಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡದಿದ್ದರೆ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಸ್ಥಳೀಯ ಶಾಸಕರು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳದೆ ಬೇಕಾಬಿಟ್ಟಿ ಕಾಮಗಾರಿಗಳು ಆವತಿ ಹೋಬಳಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತರ ಮುಖಂಡರ ಮನೆಗಳಿರುವ ರಸ್ತೆ ಅಭಿವೃದ್ಧಿಯಾಗಿದೆಯೇ ಹೊರತು ಸಾರ್ವಜನಿಕರ ಅನುಕೂಲಕ್ಕೆ ಶ್ರಮಿಸಿಲ್ಲ ಎಂದರು.ಪ್ರತಿಭಟನೆಯಲ್ಲಿ ಸತೀಶ್, ಮಹೇಶ್, ನಾಗೇಶ್, ರಮೇಶ್, ಶಿವರಾಜ್, ಸುರೇಶ್ ಹಾಗೂ ಗ್ರಾಮಸ್ಥರು ಶಾಸಕರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

 

ಪ್ರತಿಕ್ರಿಯಿಸಿ (+)