ಸೋಮವಾರ, ನವೆಂಬರ್ 18, 2019
23 °C

`ಚುನಾವಣೆ; ಜಿಲ್ಲೆಯಲ್ಲಿ ಅಧಿಕ ಭದ್ರತೆ'

Published:
Updated:

ಬಳ್ಳಾರಿ: ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಮತಗಟ್ಟೆಗಳ ಪರಿಸ್ಥಿತಿಗೆ ಅನುಗುಣವಾಗಿ, ಕೇಂದ್ರ ಚುನಾವಣಾ ಆಯೋಗವು ಅರೆಸೇನಾ ಪಡೆ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲಾಡಳಿತ  ಚುನಾವಣಾ ಸಿದ್ಧತೆ ಕೈಗೊಂಡಿದ್ದು, ಮತದಾರರು ನಿರ್ಭಯ, ಆತ್ಮ ಗೌರವದಿಂದ ಮತದಾನದ ಹಕ್ಕನ್ನು ಚಲಾಯಿಸಬಹುದು ಎಂದರು.

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಕುರಿತಾದ ಅಧಿಸೂಚನೆಯನ್ನು ಇಂದೇ ಹೊರಡಿಸಲಾಗಿದೆ ಎಂದ ಅವರು, ಇಂದಿನಿಂದಲೇ ನಾಮಪತ್ರ ಸಲ್ಲಿಸಬಹುದಾಗಿದೆ. ಮೊದಲ ದಿನ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ ಎಂದರು.

ಜಿಲ್ಲೆಯಲ್ಲಿ 1804 ಮತಗಟ್ಟೆಗಳಿದ್ದು, ಒಟ್ಟು 1529098 ಮತದಾರರಿದ್ದು, ಮತದಾರರ ಪಟ್ಟಿಯಲ್ಲಿ ಇನ್ನೂ ಅನೇಕ ಮತದಾರರು ಸೇರ್ಪಡೆಯಾಗಲಿದ್ದಾರೆ. ಒಂದು ವಾರದೊಳಗಾಗಿ ಜಿಲ್ಲೆಯ ಒಟ್ಟಾರೆ ಮತದಾರರ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು.

ಚುನಾವಣೆಯು ಮೇ 5ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಮೇ 8ರಂದು  ನಗರದ ರಾವ್‌ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತಗಳ ಎಣಿಕೆ ಕಾರ್ಯ ಜರುಗಲಿದೆ ಎಂದು ಅವರು ತಿಳಿಸಿದರು.ಚುನಾವಣೆಯ ಖರ್ಚು, ವೆಚ್ಚದ ಲೆಕ್ಕ ಇಡಲು, ಐದು ಜನ ವೀಕ್ಷಕರನ್ನು ಕೇಂದ್ರ ಚುನಾವಣಾ ಆಯೋಗ ನೇಮಕ ಮಾಡಿದ್ದು, ಇವರಲ್ಲಿ ಶಶಿಭೂಷಣ್ ಅವರು ಹಡಗಲಿ, ಹಗರಿ ಬೊಮ್ಮನಹಳ್ಳಿ ಹಾಗೂ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳ ವೀಕ್ಷಕರಾಗಿದ್ದಾರೆ. ಇನ್ನುಳಿದಂತೆ, ಎಸ್.ಕೆ. ಮಿತ್ರಾ ಅವರು ಬಳ್ಳಾರಿ ನಗರ, ಅಲೋಕುಮಾರ್ ಬಳ್ಳಾರಿ ಗ್ರಾಮೀಣ, ಸುಮೀತ್ ಕುಮಾರ್ ವಿಜಯನಗರ (ಹೊಸಪೇಟೆ), ದಿನೇಶ್ ಚಕ್ರವರ್ತಿ ಅವರು ಸಂಡೂರು, ಕೂಡ್ಲಿಗಿ ಹಾಗೂ ಕಂಪ್ಲಿ  ಕ್ಷೇತ್ರಗಳ ಚುನಾವಣಾ ಖರ್ಚು- ವೆಚ್ಚಗಳ ನಿಗಾ ಇಡಲಿದ್ದಾರೆ ಎಂದು ವಿವರಿಸಿದರು.ಶಾಂತಿಯುತ ಚುನಾವಣೆ ನಡೆಸಲು ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಅಪರ ಜಿಲ್ಲಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠರ ನೇತೃತ್ವದ ಒಂದು ತಂಡ ಹಾಗೂ ಎಲ್ಲಾ 9 ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಸಂಬಂಧಿಸಿದ ತಹಶೀಲ್ದಾರರ ನೇತೃತ್ವದಲ್ಲಿ ಪ್ರತ್ಯೇಕ 9 ತಂಡಗಳನ್ನು ರಚಿಸಲಾಗಿದೆ. ಜೊತೆಗೆ 11 ಸಂಚಾರಿ ತಪಾಸಣಾ ತಂಡಗಳನ್ನು ರಚಿಸಲಾಗಿದ್ದು, ವಿಶೇಷ ಅಧಿಕಾರ ನೀಡಲಾದ ಕಾರ್ಯನಿರ್ವಾಹಕ ನ್ಯಾಯಾಧೀಶರ ಅಧಿಕಾರ ಇರುವ ಒಬ್ಬರನ್ನು ನೇಮಕ ಮಾಡಿ, ಚುನಾವಣಾ ಅಕ್ರಮವನ್ನು ಸ್ಥಳದಲ್ಲೇ ಪರಿಶೀಲಿಸಿ ಶಿಕ್ಷೆ ವಿಧಿಸುವ ಅಧಿಕಾರವನ್ನು ನೀಡಲಾಗಿದೆ ಎಂದು ತಿಳಿಸಿದರು.ಚುನಾವಣಾ ಅಕ್ರಮಗಳ ಕುರಿತಾದ ಮಾಹಿತಿ ಸಂಗ್ರಹಿಸಲು 27 ಹೋಬಳಿ ಮಟ್ಟದ ಕಂದಾಯ ನಿರೀಕ್ಷಕರ ನೇತೃತ್ವದ ತಂಡಗಳನ್ನು, 193 ಗ್ರಾಮ ಪಂಚಾಯಿತಿ ಮಟ್ಟದ ತಂಡಗಳನ್ನು ಅಲ್ಲಿನ ಪಿಡಿಒ, ಗ್ರಾಮ ಲೆಕ್ಕಿಗರ ನೇತೃತ್ವದಲ್ಲಿ ರಚಿಸಲಾಗಿದ್ದು, ಎಲ್ಲಾ ತಂಡಗಳ ಕಾರ್ಯಾಚರಣೆಗಳನ್ನು ಚಿತ್ರೀಕರಿಸಲು, ವಿಡಿಯೋ ಕ್ಯಾಮೆರಾ ಒದಗಿಸಲಾಗಿದೆ ಎಂದರು.ಮತದಾರರಿಗೆ ಸಂದೇಶಗಳು: ಮತದಾರರು ಯಾವುದೇ ಕ್ಷೇತ್ರಗಳಲ್ಲಿ ಎರಡು ಕಡೆ ಮತದಾರಾರ ಪಟ್ಟಿಯಲ್ಲಿ ನಮೂದಾಗಿರುವುದು ಕಾನೂನಿನನ್ವಯ ಅಪರಾಧವಾಗಿದ್ದು, ಇಂತಹ ಮತದಾರರು ಎರಡೂ ಕಡೆ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಚುನಾವಣೆ ಸಂಬಂಧ ಯಾವುದೇ ರೀತಿಯ ಹಣ ನೀಡುವುದು, ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಹಣ, ಹೆಂಡ, ಉಡುಗೊರೆ, ಉಡುಗೊರೆಯ ವೋಚರ್ ನೀಡುವುದು ಮತ್ತು ಪಡೆಯುವುದು ಅಪರಾಧವಾಗಿದೆ. ಆಮಿಷ ನೀಡುವವರಿಗೆ, ಒಳಗಾದವರಿಗೆ ಒಂದು ವರ್ಷ ಅವಧಿಯ ಜೈಲು ಶಿಕ್ಷೆ ವಿಧಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ ಎಂದರು.ಚುನಾವಣೆ ವೇಳೆ ಮತದಾರರನ್ನು ಓಲೈಸಲು ಆಯೋಜಿಸುವ ಸಾಮೂಹಿಕ ಭೋಜನ ಕೂಟಗಳಲ್ಲಿ ಪಾಲ್ಗೊಳ್ಳದಂತೆ ಆಹಾರ ತಯಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದ್ದು, ಒಂದು ವೇಳೆ ಈ ಸಂಸ್ಥೆಗಳು ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಶಿಕ್ಷೆಗೆ ಒಳಪಡುವರು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಹಾಗೂ ಚುನಾವಣಾ ವೀಕ್ಷಕರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)