ಸೋಮವಾರ, ನವೆಂಬರ್ 18, 2019
22 °C

ಚುನಾವಣೆ: ನಗರದಲ್ಲಿ ಬಂದೋಬಸ್ತ್

Published:
Updated:

ಬೆಂಗಳೂರು: `ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ತಿಳಿಸಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಗೂ ರೌಡಿಗಳನ್ನು ವಶಕ್ಕೆ ತೆಗೆದುಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ' ಎಂದರು.ನಗರದಲ್ಲಿ ಏಳು ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಿವೆ. ಅವುಗಳಲ್ಲಿ ಎರಡೂವರೆ ಸಾವಿರ ಅತಿ ಸೂಕ್ಷ್ಮ ಹಾಗೂ ಎರಡು ಸಾವಿರ ಸೂಕ್ಷ್ಮ ಮತಗಟ್ಟೆಗಳಾಗಿವೆ. ಬಹುಬೇಗನೆ ದೊಂಬಿ ಅಥವಾ ಘರ್ಷಣೆ ಸಂಭವಿಸುವ ಸಾಧ್ಯತೆ ಇರುವ 236 ಪ್ರದೇಶಗಳನ್ನು ಗುರುತಿಸಲಾಗಿದೆ.ಆ ಪ್ರದೇಶಗಳಲ್ಲಿ ಅರೆಸೇನಾ ಪಡೆ ಸಿಬ್ಬಂದಿ ಪಥಸಂಚಲನ ನಡೆಸಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ. ಈಗಾಗಲೇ ನಗರಕ್ಕೆ ಅರೆಸೇನಾ ಪಡೆಯ 30 ಕಂಪೆನಿಗಳು ಬಂದಿವೆ ಎಂದು ಮಾಹಿತಿ ನೀಡಿದರು.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳ ತಡೆಗೆ ಪೊಲೀಸ್ ಸಿಬ್ಬಂದಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳನ್ನು ಒಳಗೊಂಡ ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಈವರೆಗೆ 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಅದೇ ರೀತಿ ಅಬಕಾರಿ ಕಾಯ್ದೆ ಉಲ್ಲಂಘನೆಗೆ ಸಂಬಂಧಪಟ್ಟಂತೆ 100 ಪ್ರಕರಣಗಳನ್ನು ದಾಖಲಿಸಲಾಗಿದೆ.ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ವಿರುದ್ಧ ವಾರೆಂಟ್ ಜಾರಿ ಮಾಡುವ ಪ್ರಕ್ರಿಯೆ ಶೇ 70ರಷ್ಟು ಮುಗಿದಿದೆ. ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಸಮಾಜ ಘಾತುಕ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಔರಾದಕರ್ ಹೇಳಿದರು.

ಪ್ರತಿಕ್ರಿಯಿಸಿ (+)