ಸೋಮವಾರ, ನವೆಂಬರ್ 18, 2019
24 °C

`ಚುನಾವಣೆ ನೀತಿಗೆಟ್ಟವರ ಅಖಾಡ ಆಗದಿರಲಿ'

Published:
Updated:

ಧಾರವಾಡ: 1990ರ ದಶಕದಲ್ಲಿ ಜಿಲ್ಲೆಯಲ್ಲಿ ಚಟುವಟಿಕೆ ಆರಂಭಿಸಿದ ಎಡಪಂಥೀಯ ಧೋರಣೆಯ `ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್' ಪಕ್ಷದ ಅಭ್ಯರ್ಥಿಯಾಗಿ `ಬ್ಯಾಟ್'ನ ಗುರುತಿನಡಿ ಎಚ್.ಜಿ.ದೇಸಾಯಿ ಈ ಬಾರಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹಲವಾರು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ದೇಸಾಯಿ ಪಕ್ಷದ ಪೂರ್ಣಾವಧಿ ಕಾರ್ಯಕರ್ತರು.ಪತ್ರಿಕೋದ್ಯಮ ಹಾಗೂ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ತಾವು ಸ್ಪರ್ಧಿಸುತ್ತಿರುವ ಕಾರಣ ಹಾಗೂ ಪಕ್ಷದ ಹೋರಾಟಗಳ ಬಗ್ಗೆ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.
* ನಿಮ್ಮ ಸ್ಪರ್ಧೆಯ ಉದ್ದೇಶ ಏನು?

ಶಿವದಾಸ್ ಘೋಷ್ ಎಂಬ ಕ್ರಾಂತಿಕಾರಿ ನಾಯಕ 1948ರಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದರು. ಸಿಪಿಐ ಪಕ್ಷ ನೈಜ ಕಮ್ಯುನಿಸ್ಟ್ ಗುಣವನ್ನು ಅಳವಡಿಸಿಕೊಳ್ಳಲು ವಿಫಲವಾದುದರಿಂದ, ಬ್ರಿಟಿಷರಿಂದ ದೊರೆತ ಸ್ವಾತಂತ್ರ್ಯ ಎಲ್ಲ ವರ್ಗದವರಿಗೂ ದೊರೆಯದೇ ಭಾರತದ ಬಂಡವಾಳಗಾರರಿಗೆ ದೊರೆಯಿತು. ಇದನ್ನು ಗುರುತಿಸಿದ ಘೋಷ್ ಪಕ್ಷವನ್ನು ನೈಜ ಕ್ರಾಂತಿಕಾರಿ ಪಕ್ಷವನ್ನಾಗಿ ಕಟ್ಟಿದರು. ಅಂದಿನಿಂದಲೂ ಚುನಾವಣೆಗಳನ್ನು ಜನಹೋರಾಟದ ಒಂದು ಭಾಗವೆಂದೇ ತಿಳಿದುಕೊಂಡು ಸ್ಪರ್ಧಿಸುತ್ತಾ ಬಂದಿದ್ದೇವೆ. ಈ ಬಾರಿಯೂ ರಾಜ್ಯದ ವಿವಿಧೆಡೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.* ದೊಡ್ಡ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಪಕ್ಷದ ಪ್ರಚಾರ ಕಾರ್ಯವನ್ನು ಹೇಗೆ ನಡೆಸುತ್ತಿದ್ದೀರಿ?

ದೊಡ್ಡ ಪಕ್ಷಗಳು ಚುನಾವಣಾ ಆಯೋಗದ ಯಾವ ನೀತಿ ನಿಯಮಗಳೂ ಅನ್ವಯವಾಗದಂತೆ ವರ್ತಿಸುತ್ತಿದೆ. ಮೇಲ್ನೋಟಕ್ಕೆ ನಿಯಂತ್ರಣ ಕ್ರಮಗಳು ಜಾರಿಯಲ್ಲಿದ್ದರೂ ಹಣ, ಹೆಂಡ ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತವೆ. ಆಯೋಗದ ಈ ಕ್ರಮಗಳು ನಮ್ಮಂತಹ ಬಡ ಪಕ್ಷಗಳಿಗೆ ಮಾರಕವಾಗಿವೆ. ಇಷ್ಟರ ಮಧ್ಯೆಯೇ ನಾವು ನಮ್ಮ ಸೀಮಿತ ಕಾರ್ಯಕರ್ತರು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸುವ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ.

*ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬಂಡವಾಳಶಾಹಿ ಪರ ಪಕ್ಷಗಳು ಎಂದು ದೂರುತ್ತೀರಿ? ಹಾಗಾದರೆ ಇವುಗಳನ್ನು ಸೋಲಿಸಲು ಇತರ ಸಮಾನಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸುವ ಯತ್ನ ಮಾಡಿದ್ದೀರಾ?

ಹೌದು. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ನಮ್ಮ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ಅವರು ಆಸಕ್ತಿ ವಹಿಸಿ ಸಿಪಿಐ, ಸಿಪಿಐ (ಎಂ), ಫಾರ್ವರ್ಡ್ ಬ್ಲಾಕ್ ಹಾಗೂ ಕರ್ನಾಟಕ ಸರ್ವೋದಯ ಪಕ್ಷದ ಮುಖ್ಯಸ್ಥರನ್ನು ಭೇಟಿ ಮಾಡಿ ಜಂಟಿಯಾಗಿ ಚುನಾವಣೆ ಎದುರಿಸುವ ಪ್ರಸ್ತಾಪ ಮುಂದಿಟ್ಟೆವು. ಆದರೆ ಇಲ್ಲಿಯವರೆಗೂ ಅವರಿಂದ ಪ್ರತಿಕ್ರಿಯೆ ಇಲ್ಲ!* ದುಡ್ಡಿದ್ದವರು ಹಾಗೂ ದೊಡ್ಡ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವ ಸನ್ನಿವೇಶ ಸೃಷ್ಟಿಯಾದ ಈ ಸಂದರ್ಭದಲ್ಲಿ ನಿಮ್ಮ ಗೆಲುವು ಸಾಧ್ಯವೇ?

ರಾಜಕಾರಣಿಗಳು ಭ್ರಷ್ಟರಾಗಿದ್ದರು. ಬಹುತೇಕ ಮತದಾರರು ಇನ್ನೂ ಪ್ರಾಮಾಣಿಕರು ಹಾಗೂ ಸಮಾಜದ ಬಗ್ಗೆ ಕಾಳಜಿ ಉಳ್ಳವರು. ಅತ್ಯಂತ ಭ್ರಷ್ಟ ಪಕ್ಷ ಅಥವಾ ವ್ಯಕ್ತಿಯನ್ನು ಸೋಲಿಸುವ ಉದ್ದೇಶದಿಂದ ಇನ್ನೊಂದು ಕಡಿಮೆ ಭ್ರಷ್ಟ ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ಅದು ಸರಿಯಾದ ಕ್ರಮ ಅಲ್ಲ. ಪ್ರಾಮಾಣಿಕರನ್ನು ಆರಿಸುವ ಸಾಮರ್ಥ್ಯವೂ ಮತದಾರರಲ್ಲಿದೆ. ಇಂದು ದೊಡ್ಡದಾಗಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹಿಂದೆ ಚಿಕ್ಕದಾಗಿಯೇ ಇದ್ದವಲ್ಲ? ಆದ್ದರಿಂದ ಪಕ್ಷ ದೊಡ್ಡದು ಸಣ್ಣದು ಎಂಬುದನ್ನು ಪರಿಗಣಿಸುವ ಬದಲು ತಮ್ಮ ಪರ ದನಿ ಎತ್ತುವವರನ್ನು ಚುನಾಯಿಸಬೇಕು. ಚುನಾವಣೆಯಲ್ಲಿ ಕ್ರಿಮಿನಲ್‌ಗಳು, ಕೊಲೆಘಾತುಕರು, ಅತ್ಯಾಚಾರಿಗಳು, ವಂಚಕರೇ ಆರಿಸಿ ಬರಲು ಜನರು ಸಹಕಾರ ನೀಡಬಾರದು. ಚುನಾವಣೆ ಎಂದಿಗೂ ನೀತಿಗೆಟ್ಟವರ ಅಖಾಡ ಆಗಬಾರದು.* ನಿಮ್ಮ ಪಕ್ಷದಿಂದ ಈವರೆಗೂ ಯಾರಾದರೂ ಆರಿಸಿ ಬಂದಿದ್ದಾರೆಯೇ?

ಹೌದು. ಪಕ್ಷ ಆರಂಭವಾದ ದಿನದಿಂದಲೂ `ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ'ಯನ್ನು ನೆರವೇರಿಸುವ ಸಂಕಲ್ಪಕ್ಕೆ ಬದ್ಧರಾಗಿ ಚುನಾವಣೆಯನ್ನೂ ಎದುರಿಸುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ 1967ರಲ್ಲಿ ಎಸ್‌ಯುಸಿಐ ಪಕ್ಷವು ಸರ್ಕಾರದ ಒಂದು ಭಾಗವಾಗಿತ್ತು. ನಮ್ಮ ನಾಯಕರು ಕಾರ್ಮಿಕ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದರು. ಈಗಲೂ ಬಂಗಾಳದ ಜಯನಗರ ಕ್ಷೇತ್ರದಿಂದ ತರುಣ್ ಮಂಡಲ್ ಎಂಬ ಸಂಸದರಿದ್ದಾರೆ. ಒಬ್ಬ ಶಾಸಕರೂ ಇದ್ದಾರೆ.

ಪ್ರತಿಕ್ರಿಯಿಸಿ (+)