ಬುಧವಾರ, ನವೆಂಬರ್ 20, 2019
21 °C

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಭೆ: ದಾಳಿ

Published:
Updated:

ಸಿಂದಗಿ: ಶಾಸಕ ರಮೇಶ ಭೂಸನೂರ ಅವರು ತಾಲ್ಲೂಕಿನ ಕನ್ನೊಳ್ಳಿ ಗ್ರಾಮದ ತೋಟವೊಂದರಲ್ಲಿ ಮತದಾರರಿಗೆ ಏರ್ಪಡಿಸಿದ್ದರು ಎನ್ನಲಾದ ಸಭೆಯ ಮೇಲೆ ತಹಶೀಲ್ದಾರರು ದಾಳಿ ನಡೆಸಿದ ಘಟನೆ ಗುರುವಾರ ಜರುಗಿತು.ಸಭೆ ರದ್ದು ಪಡಿಸುವಂತೆ ಸೂಚಿಸಿದ ತಹಶೀಲ್ದಾರರೊಂದಿಗೆ ವಾಗ್ವಾದ ನಡೆಸಿದ ಕಾರ್ಯಕರ್ತರು, ಅವರ ವಾಹನಕ್ಕೆ ಮುತ್ತಿಗೆ ಹಾಕಿ ವಾಹನದ ಚಕ್ರಗಳ ಗಾಳಿ ತೆಗೆಯಲು ಯತ್ನಿಸಿದರು. ಸ್ಥಳಕ್ಕೆ ಆಗಮಿಸಿ ರಕ್ಷಣೆ ಒದಗಿಸಲಿಲ್ಲ ಎಂದು ತಹಶೀಲ್ದಾರರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.`ಸಿಂದಗಿ ಶಾಸಕ ರಮೇಶ ಭೂಸನೂರ ನೀತಿ ಸಂಹಿಗೆ ಉಲ್ಲಂಘಿಸಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಸೂಚಿಸಲಾಗುವುದು' ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶಿವಯೋಗಿ ಕಳಸದ `ಪ್ರಜಾವಾಣಿ'ಗೆ ತಿಳಿಸಿದರು.ಘಟನೆಯ ವಿವರ:

ಕನ್ನೊಳ್ಳಿ ಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿರುವ ತೋಟದಲ್ಲಿ ಶಾಸಕರು ಸಭೆ ನಡೆಸುತ್ತಿದ್ದರು. 200ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದರಿಂದ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ ಅಶ್ವತ್ಥನಾರಾಯಣ ಶಾಸ್ತ್ರಿ, `ಚುನಾವಣಾಧಿಕಾರಿಗಳ ಪರವಾನಿಗೆ ಪಡೆದು ಸಭೆ ನಡೆಸಬೇಕು. ಹೀಗೆ ಸಭೆ ನಡೆಸಿದರೆ ಅದು ನೀತಿ ಸಂಹಿತೆಯ ಉಲ್ಲಂಘಣೆಯಾಗುತ್ತದೆ' ಎಂದು ಹೇಳಿದರು.ಈ ಸಂದರ್ಭದಲ್ಲಿ ಅಲ್ಲಿದ್ದ ಜನಪ್ರತಿನಿಧಿಗಳು ತಹಶೀಲ್ದಾರರೊಂದಿಗೆ ವಾಗ್ವಾದಕ್ಕಿಳಿದರು. ಮಾತಿನ ಚಕಮಕಿ ನಡೆಯಿತು. ಆ ನಂತರ ರೈತರು ತಹಶೀಲ್ದಾರರ ವಾಹಕ್ಕೆ ಮುತ್ತಿಗೆ ಹಾಕಿ, ಚಕ್ರದ ಗಾಳಿ ತೆಗೆಯಲು ಯತ್ನಿಸಿದರು.`ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ನೀವು ಈ ರೀತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ತಹಶೀಲ್ದಾರರು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಶಾಸಕ ರಮೇಶ ಭೂಸನೂರ ಇತರರು ಉಪಸ್ಥಿತರಿದ್ದರು.ಪೊಲೀಸ್ ಅಧಿಕಾರಿಗಳಿಗೆ ತರಾಟೆ: ತಹಶೀಲ್ದಾರರು ಸಿಪಿಐ ವಿ.ಎಂ. ಚಿದಂಬರ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಘಟನಾ ಸ್ಥಳಕ್ಕೆ ತಮ್ಮಂದಿಗೆ ಆಗಮಿಸುವಂತೆ ಕೋರಿದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇರುವುದರಿಂದ ತಾವು ಗುಲ್ಬರ್ಗಕ್ಕೆ ತೆರಳುತ್ತಿದ್ದು, ಪಿಎಸ್‌ಐ ಅವರನ್ನು ಕಳಿಸುವುದಾಗಿ ಸಿಪಿಐ ಹೇಳಿದ್ದರು ಎನ್ನಲಾಗಿದೆ.ಎರಡು ಗಂಟೆಯಾದರೂ ಪಿಎಸ್‌ಐ ಆಗಮಿಸಲಿಲ್ಲ. ಅದರಿಂದ ತಹಶೀಲ್ದಾರರು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದರು. ಘಟನಾ ಸ್ಥಳದಿಂದ ಸಿಂದಗಿಗೆ ವಾಪಸ್ಸಾ ಗುತ್ತಿದ್ದಾಗ ಪೊಲೀಸ್ ಅಧಿಕಾರಿ ಎದುರಿಗೆ ಬಂದರು ಎನ್ನಲಾಗಿದೆ.`ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬಂದೋಬಸ್ತ್ ಹಾಗೂ ಮೋರಟಗಿಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಹೀಗಾಗಿ ಬರಲು ವಿಳಂಬವಾಯಿತು' ಎಂದು ಪಿಎಸ್‌ಐ ಕುಸುಗಲ್ ಸಮಜಾಯಿಷಿ ನೀಡಿದರು.`ನಿಮ್ಮ ಸಿಬ್ಬಂದಿಯನ್ನಾದರೂ ಕಳಿಸಿಕೊಡಬಹುದಿತ್ತಲ್ಲ. ಅಹಿತಕರ ಘಟನೆ ನಡೆಸಿದ್ದರೆ ಯಾರು ಹೊಣೆ' ಎಂದು ತಹಶೀಲ್ದಾರು ತರಾಟೆಗೆ ತೆಗೆದುಕೊಂಡರು.ಘಟನೆಯ ಚಿತ್ರೀಕರಣ ಮಾಡುತ್ತಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಕ್ಯಾಮೆರಾಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಘಟನೆಯೂ ನಡೆಯಿತು.ಈ ಘಟನೆ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವುದಾಗಿ ತಹಶೀಲದಾರ ಅಶ್ವಥನಾರಾಯಣ ಶಾಸ್ತ್ರಿ ತಿಳಿಸಿದರು.`ರೈತರು ಬಮ್ಮನಜೋಗಿ ಕೆರೆ ವೀಕ್ಷಣೆಗೆ ನನ್ನನ್ನು ಕರೆದೊಯ್ದಿದ್ದರು. ಹೊಲವೊಂದಕ್ಕೆ ಕರೆದುಕೊಂಡು ಹೋಗಿ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಘಟನೆಗೂ ನನಗೂ ಸಂಬಂಧ ಇಲ್ಲ' ಎಂದು ಶಾಸಕ ರಮೇಶ ಭೂಸನೂರ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)