ಚುನಾವಣೆ ಪಾಠ

7

ಚುನಾವಣೆ ಪಾಠ

Published:
Updated:

ಒಂಬತ್ತು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ  ಬಿಜೆಪಿ ಹಿನ್ನಡೆ ಅನುಭವಿಸಿದೆ. ಇತ್ತೀಚಿನ ಲೋಕಸಭಾ ಚುನಾವಣೆ­ಯಲ್ಲಿ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಲ್ಲಿ 71ರಲ್ಲಿ  ಗೆದಿದ್ದ ಬಿಜೆಪಿ  ದಿಗ್ವಿ­ಜ­ಯ­ವನ್ನೇ ಸಾಧಿಸಿತ್ತು.  ಆದರೆ ಈಗ ನಡೆದ ಉಪಚುನಾವಣೆಯಲ್ಲಿ   11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಸಾಧಿಸಲಾಗಿರುವುದು ಕೇವಲ ಮೂರು ಕ್ಷೇತ್ರಗಳಲ್ಲಿ. ಉತ್ತರ ಪ್ರದೇಶದ ಪಶ್ಚಿಮ ಭಾಗದ ಕೋಮು ಸೂಕ್ಷ್ಮ ­ಪ್ರದೇಶಗಳಲ್ಲಿ  ಈ ಕ್ಷೇತ್ರಗಳಿವೆ ಎಂಬುದು ಗಮನಾರ್ಹ. ರಾಜ್ಯದಲ್ಲಿ ಅಧಿ­ಕಾರ­ದಲ್ಲಿ­ರುವ ಸಮಾಜವಾದಿ ಪಕ್ಷವೇ 8 ಸ್ಥಾನಗಳನ್ನು ಗೆದ್ದು­ಕೊಂಡಿದೆ.  ಕೋಮುದ್ವೇಷ ರಾಜಕಾರಣಕ್ಕೆ ಮತದಾರರು ಮಣೆ ಹಾಕಿಲ್ಲ ಎಂಬುದು  ಇಲ್ಲಿ ಸುವ್ಯಕ್ತ.  ಜೊತೆಗೆ ಚುನಾವಣಾ ಕಣಕ್ಕೆ  ಬಿಎಸ್‌ಪಿ  ಇಳಿಯದಿದ್ದುದೂ ಎಸ್‌ಪಿಗೆ ವರವಾಗಿ ಪರಿಣಮಿಸಿತು ಎಂಬುದನ್ನು ಮರೆಯಲಾಗದು.  ಪ್ರಧಾನಿ ನರೇಂದ್ರ ಮೋದಿ ಅವರ  ತವರು ರಾಜ್ಯ ಗುಜರಾತ್‌ನಲ್ಲೂ ಬಿಜೆಪಿ 9 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಕಳೆದ ಲೋಕ­ಸಭಾ ಚುನಾವಣೆಯಲ್ಲಿ ಎಲ್ಲಾ 26 ಲೋಕಸಭಾ ಕ್ಷೇತ್ರಗಳನ್ನೂ ಗೆದ್ದುಕೊಂಡಿದ್ದ ಬಿಜೆಪಿಗೆ  ಇದು ಸರಾಗ   ಗೆಲುವು ಆಗಿಲ್ಲ ಎಂಬುದು ಇಲ್ಲಿ ಮುಖ್ಯ. ರಾಜ­ಸ್ತಾ­ನದಲ್ಲೂ ಬಿಜೆಪಿಯೇ ಆಡಳಿತ ಪಕ್ಷವಾಗಿದ್ದೂ,    ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆದ್ದುಕೊಳ್ಳಲು ಸಾಧ್ಯವಾಗಿರುವುದು ಒಂದು ಕ್ಷೇತ್ರ­ವನ್ನು ಮಾತ್ರ.ಉಳಿದ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.  ಮೋದಿ ಸರ್ಕಾರದ 100 ದಿನಗಳ  ಆಡಳಿತಕ್ಕೆ ಜನ ನೀಡಿರುವ ಅಭಿಪ್ರಾಯ ಇದು  ಎಂದು ಭಾವಿಸಬಾರದು ಎಂದು ಬಿಜೆಪಿ ವಕ್ತಾರರು ಹೇಳುತ್ತಿದ್ದಾರೆ. ಆದರೆ ಧರ್ಮದ ಆಧಾರದಲ್ಲಿ ಮತಗಳನ್ನು ವಿಭಜಿಸುವ ಕಾರ್ಯತಂತ್ರ  ಈ ಉಪ­ಚುನಾವಣೆಗಳಲ್ಲಿ ಯಶಸ್ಸು ತಂದುಕೊಟ್ಟಿಲ್ಲ ಎಂಬುದು ಮಾತ್ರ ಸ್ಪಷ್ಟ.

ಗೋರಖ್‌ಪುರದ ಸಂಸತ್ ಸದಸ್ಯ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರದ ನೇತೃತ್ವ ವಹಿಸಿ ಆಡಿದ ಮಾತುಗಳು ಮತಗಳಾಗಿ ಪರಿವರ್ತಿತ­ವಾಗಿಲ್ಲ. ಹಾಗೆಯೇ  ಮುಸ್ಲಿಂ ಸಮುದಾಯದ  ಮೇಲೆ ಅಪರೋಕ್ಷ ಆಕ್ರಮ­ಣ­ಗಳನ್ನು ಮಾಡುವ ‘ಲವ್ ಜಿಹಾದ್’ ವಿಚಾರದ ಬಗ್ಗೆ  ಸಾಕ್ಷಿ ಮಹಾ­ರಾಜ್ ಅವರ  ಮಾತುಗಳೂ  ಮತದಾರರ ಮೇಲೆ ಪ್ರಭಾವ ಬೀರಿಲ್ಲ. ಹೀಗಿದ್ದೂ ಉಪಚುನಾವಣೆಗಳ ಫಲಿತಾಂಶದ ಆಧಾರದ ಮೇಲೆ  ಸಾರಾ­ಸಗಟಾದ ನಿರ್ಣಯಗಳನ್ನು ಕೈಗೊಳ್ಳುವುದೂ ಸಾಧ್ಯವಿಲ್ಲ. ಉತ್ತರ ಪ್ರದೇಶ­ದಲ್ಲಿ ಬಿಜೆಪಿಗೆ ಮುಖಭಂಗ ಅಥವಾ  ಎಸ್‌ಪಿಗೆ  ಮತದಾರರ ಅನು­ಮೋ­ದನೆ ಎಂದು ಸರಳೀಕರಿಸಲಾಗದು. ಸ್ಥಳೀಯ ರಾಜಕೀಯ ಸಮೀಕರಣ­ಗಳು ಈ ಚುನಾವಣೆ ಮೇಲೆ  ಪ್ರಭಾವ ಬೀರಿರುವುದೂ ನಿಜ. ಆದರೆ  ಮತ­ದಾ­ರ-­ರನ್ನು   ಗಂಭೀರವಾಗಿ ಪರಿಗಣಿಸಬೇಕು ಎಂಬುದಕ್ಕೆ ಈ ಫಲಿತಾಂಶಗಳು ಸ್ಪಷ್ಟ ಸೂಚನೆ.ಪ್ರಜಾಪ್ರಭುತ್ವದ ಶಕ್ತಿ ಇರುವುದೇ ಇಲ್ಲಿ. ಪ್ರತಿ ಚುನಾ­ವ­ಣೆಯೂ ಒಂದು ಪಾಠ ಎಂಬುದನ್ನು ಮರೆಯಬಾರದು.  ಉತ್ತರ ಪ್ರದೇಶ, ರಾಜ­ಸ್ತಾನ ಹಾಗೂ ಗುಜರಾತ್ ಚುನಾವಣೆ ಫಲಿತಾಂಶಗಳಲ್ಲಿ ಈ ಪಾಠ ಸ್ಪಷ್ಟ­ವಾಗಿದೆ. ಅಭಿವೃದ್ಧಿ ರಾಜಕೀಯ ಮಾತಾಡುತ್ತಲೇ ರಾಜಕಾರಣದಲ್ಲಿ ಕೋಮು­ವಾದ ಬೆಸೆಯುವುದರಿಂದ ಫಲ ಇಲ್ಲ ಎಂಬುದನ್ನು ಬಿಜೆಪಿ ಅರಿತು­-ಕೊಳ್ಳಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry