ಬುಧವಾರ, ಅಕ್ಟೋಬರ್ 16, 2019
21 °C

ಚುನಾವಣೆ ಪ್ರಚಾರ: ಅಣ್ಣಾ ತಂಡ ದೂರ

Published:
Updated:

ಮುಂಬೈ/ರಾಳೇಗಣಸಿದ್ದಿ (ಪಿಟಿಐ): ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದ ವಿರುದ್ಧ ಪ್ರಚಾರ ಮಾಡದಿರುವ ನಿರ್ಧಾರವನ್ನು ಅಣ್ಣಾ ತಂಡ ಕೈಗೊಂಡಿದೆ. 

`ಚುನಾವಣೆ ನಡೆಯುವ ಎಲ್ಲಾ ಐದು ರಾಜ್ಯಗಳಲ್ಲಿ ನಾವು ಪ್ರವಾಸ ಮಾಡುತ್ತೇವೆ. ಆದರೆ ಯಾವುದೇ ಪಕ್ಷದ ವಿರುದ್ಧ ಪ್ರಚಾರ ಮಾಡುವುದಿಲ್ಲ. ಎಂದು ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಅವರು ಅಣ್ಣಾ ಭೇಟಿಯ ಬಳಿಕ ತಿಳಿಸಿದರು.

ಈ ನಿರ್ಧಾರಕ್ಕೆ ಅಣ್ಣಾ ಕೂಡ ಸಮ್ಮತಿ ಸೂಚಿಸಿದ್ದಾರೆ ಎಂದೂ ಹೇಳಿದರು.

ಭ್ರಷ್ಟಾಚಾರ ವಿರೋಧಿ ಹೋರಾಟದ ಮುಂದಿನ ಸ್ವರೂಪದ ಬಗ್ಗೆ ಅಣ್ಣಾ ಅವರೇ ನಿರ್ಧಾರ ಕೈಗೊಳ್ಳಬೇಕು ಎಂದರು.

ಪ್ರಮುಖರ ಸಭೆ: ಭಿನ್ನಾಭಿಪ್ರಾಯಗಳಿಂದ ಗೊಂದಲದ ಗೂಡಾಗಿರುವ ಅಣ್ಣಾ ತಂಡ ತನ್ನ ಮುಂದಿನ ಹೋರಾಟದ ರೂಪುರೇಷೆಗಳನ್ನು ಕುರಿತು ಚರ್ಚಿಸಲು ಜ. 26 ರಂದು ನವದೆಹಲಿಯಲ್ಲಿ ಪ್ರಮುಖರ ಸಮಿತಿಯ ಸಭೆಯನ್ನು ಕರೆದಿದೆ.

ವೈದ್ಯರು ಅನುಮತಿ ನೀಡಿದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅಣ್ಣಾ ಹಜಾರೆ ಕೂಡಾ ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ತಂಡದ ಸದಸ್ಯರಾದ ಅರವಿಂದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಮತ್ತು ಕುಮಾರ್ ವಿಶ್ವಾಸ್ ಅವರು ಮಂಗಳವಾರ ಬೆಳಿಗ್ಗೆ ಅಣ್ಣಾಸ್ವಗ್ರಾಮ ರಾಳೇಗಣಸಿದ್ಧಿಯಲ್ಲಿ ಅವರನ್ನು ಕಂಡು ಮಾತುಕತೆ ನಡೆಸಿದರು.

ಸದ್ಯದ ಪರಿಸ್ಥಿತಿ ಮತ್ತು ಗಣರಾಜ್ಯೋತ್ಸವದಂದು ರಾಷ್ಟ್ರದ ರಾಜಧಾನಿಯಲ್ಲಿ ಕರೆದಿರುವ ಸಭೆಯ ಬಗ್ಗೆ ಅವರು ವಿವರಿಸಿದರು ಎಂದು ಅಣ್ಣಾ ಆಪ್ತ ಶ್ಯಾಮ್‌ರಾವ್ ಪಟಾಡೆ ತಿಳಿಸಿದ್ದಾರೆ.

ಅಣ್ಣಾ ಜ್ವರದಿಂದ ಚೇತರಿಸಿಕೊಂಡಿದ್ದರೂ ಮತ್ತೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆ ಅಗತ್ಯ ಎಂದು ಪುಣೆಯ ಸಂಚೇತಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಸ್ವಲ್ಪ ಶ್ವಾಸಕೋಶದ ತೊಂದರೆ ಇದ್ದು ದೀರ್ಘ ಪ್ರವಾಸ, ಉಪವಾಸ ಅಥವಾ ಹೋರಾಟದಂತಹ ಆಯಾಸಕರ ಕೆಲಸಗಳಿಗೆ ಮುಂದಾಗದಂತೆ ವೈದ್ಯರು ಅಣ್ಣಾಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.  

ಕಾಂಗ್ರೆಸ್ ವಿರೋಧಿ ನಿಲುವಿನ ಬಗ್ಗೆ ತಂಡದೊಳಗೇ ಭಿನ್ನಾಭಿಪ್ರಾಯಗಳು ಬಂದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಪಾಲ ವಿಷಯದಲ್ಲಿ ಕಾಂಗ್ರೆಸ್ ಪಕ್ಷವೊಂದನ್ನೇ ಗುರಿಯಾಗಿಸುವುದನ್ನು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮತ್ತು ಇತರ ಕೆಲವರು ತೀವ್ರವಾಗಿ ವಿರೋಧಿಸಿದ್ದರು.

ಸೋಮವಾರ ನಡೆದ ಪ್ರಮುಖರ ಸಮಿತಿ ಸಭೆಯಲ್ಲಿ ಮೇಧಾ ಪಾಟ್ಕರ್ ಪಾಲ್ಗೊಂಡಿರಲಿಲ್ಲ. ಆದರೆ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆದು ಕಳುಹಿಸಿದ್ದರು.

Post Comments (+)