ಮಂಗಳವಾರ, ಜೂನ್ 22, 2021
29 °C
ಬಹಿರಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ

ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ

ಪ್‍ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು ಸಿದ್ದರಾಮಯ್ಯ ಅವರ ಮಾತು ಕೇಳುತ್ತಿಲ್ಲ. ಸಂಪುಟದಲ್ಲಿ ವೈಮನಸ್ಸು ಇದೆ. ಸಿದ್ದರಾಮಯ್ಯ ಸರ್ಕಾರ ತನ್ನಷ್ಟಕ್ಕೆ ತಾನೇ ಬಿದ್ದು ಹೋಗಲಿದೆ ಎಂದರು.ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ ಮೇಲೆ ರಾಜ್ಯ ಹಾಗೂ ಜೆಲ್ಲೆಯ ಅಗತ್ಯಗಳನ್ನು ಪೂರೈಸಲಾಗುವುದು. ಬಗರ್ ಹುಕುಂ ಸಮಸ್ಯೆ  ಬಗೆಹರಿಸುವ ಕಡೆಗೆ ಹೆಚ್ಚಿನ ಒತ್ತು ಹಾಗೂ ಅಡಿಕೆ ನಿಷೇಧದ ಕುರಿತು ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಮಾಣಪತ್ರ ಹಿಂದಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಹೋದ್ಯೋಗಿಗಳು ಆಟವಾಡಿಸುವ ಗೊಂಬೆಯಂತಾಗಿದ್ದಾರೆ ಎಂದು ಟೀಕಿಸಿದರು.ಹಿಂದುಳಿದ ವರ್ಗದ ಮಕ್ಕಳಿಗೆ ಪ್ರವಾಸ ಎಂದು ಜಾರಿಗೆ ತಂದು, ಮಕ್ಕಳಲ್ಲಿ ದ್ವೇಷದ ಬೀಜ ಬಿತ್ತುತ್ತಿದ್ದಾರೆ. ಶಾದಿಭಾಗ್ಯದಿಂದ ಧರ್ಮಗಳನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ಆರೋಪಗಳಲ್ಲಿ ಭಾಗಿಯಾಗಿರುವವರನ್ನು ಸಚಿವರನ್ನಾಗಿ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಜನತೆಯ ಹಿತ ಕಾಪಾಡುತ್ತಾರೆಯೇ? ಎಂದು ಪ್ರಶ್ನಿಸಿದರು.ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಯಾವುದೇ ಆರೋಪಗಳಿಲ್ಲ. ಲೋಕಸಭಾ ಚುನಾವಣೆಯಲ್ಲಿ ಭಾರೀ ಅಂತರದಿಂದ ಜಯಭೇರಿ ಬಾರಿಸಿ, ಕೇಂದ್ರದಲ್ಲಿ ಗದ್ದುಗೆಯನ್ನೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಸ್ತುತ ಲೋಕಸಭಾ ಚುನಾವಣೆ, ಬಡವ–ಬಲ್ಲಿದ, ಜನ–ಹಣ ಬಲದ ನಡುವಿನ ಹೋರಾಟ. ಇದರಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಗೊರಕೆ ಹೊಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.ಡಾ.ನೀರಜ್ ಪಾಟೀಲ್ ಮಾತನಾಡಿ, ಶಿವಮೊಗ್ಗದ ಒಂದೊಂದು ಕಲ್ಲು ಬಿ.ಎಸ್.ವೈ ಜಯಶಾಲಿಯಾಗುತ್ತಾರೆ ಎಂದು ಸಾರಿ ಹೇಳುತ್ತವೆ ಎಂದು ತಿಳಿಸಿದರು.ಮಾಜಿ ಶಾಸಕ ಎಚ್.ಹಾಲಪ್ಪ ಮಾತನಾಡಿ, ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲದಂತಾಗಿದೆ. ಪ್ರತಿ ಸಮಸ್ಯೆಗೂ ಕಾಂಗ್ರೆಸ್ ಹೈಕಮಾಂಡ್ ಬಳಿ ಹೋಗಿ, ಉತ್ತರ ಕೇಳುವ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಮಗು ಇನ್ನೂ ಹುಟ್ಟಿಲ್ಲ. ಇಂದಿಗೂ ಕಾಂಗ್ರೆಸ್ ನಾಯಕರಲ್ಲಿ ನಾಯಕತ್ವದ ಕೊರತೆ ಇದೆ ಎಂದರು.ಬೇರೆ ಕುಟುಂಬಗಳನ್ನು ಒಡೆಯುವ ರಾಜಕಾರಣಕ್ಕೆ ಶಿವಮೊಗ್ಗದಲ್ಲಿ ಪ್ರಾಮುಖ್ಯತೆ ಇಲ್ಲ ಎಂದರು.ನಂತರ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ, ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಪಿ.ವಿ.ಕೃಷ್ಣಭಟ್, ಆರ್.ಕೆ.ಸಿದ್ದರಾಮಣ್ಣ, ನೆಹರೂ ಓಲೇಕರ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ, ಪುಟ್ಟಸ್ವಾಮಿ ಗೌಡ, ಎಸ್.ರುದ್ರೇಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.ಜ್ಞಾನೇಶ್ವರ್ ಸ್ವಾಗತಿಸಿದರು. ಮಾಧ್ಯಮ ಪ್ರಮುಖ್ ಮಧುಸೂದನ್ ವಂದಿಸಿದರು. ಎಸ್.ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿದರು.ಯಡಿಯೂರಪ್ಪ ನಾಮಪತ್ರ ಸಲ್ಲಿಕೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆಯನೂರು ಮಂಜುನಾಥ, ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಮಾಜಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ವಿ.ಸೋಮಣ್ಣ ಮತ್ತಿತರ ಮುಖಂಡರು ಪಾಲ್‍ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.