ಚುನಾವಣೆ: ಮನೆಮನೆ ಮತಯಾಚನೆ ನಿಷೇಧ

7

ಚುನಾವಣೆ: ಮನೆಮನೆ ಮತಯಾಚನೆ ನಿಷೇಧ

Published:
Updated:

ಬೆಂಗಳೂರು: ಚುನಾವಣೆಯ ನಿರ್ಣಾಯಕ ಹಂತವಾದ ಮತದಾನಕ್ಕೂ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸುವುದೂ ಸೇರಿದಂತೆ ಎಲ್ಲ ಬಗೆಯ ಪ್ರಚಾರವನ್ನೂ ನಿಷೇಧಿಸುವತ್ತ ಕೇಂದ್ರ ಚುನಾವಣಾ ಆಯೋಗ ಹೆಜ್ಜೆಯಿಟ್ಟಿದೆ.ಕೇಂದ್ರ ಕಾನೂನು ಸಚಿವಾಲಯ ಮತ್ತು ಕೇಂದ್ರ ಚುನಾವಣಾ ಆಯೋಗ ಜಂಟಿಯಾಗಿ ನಗರದ ಐಐಎಸ್‌ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ಕುರಿತ ಪ್ರಾದೇಶಿಕ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಈ ವಿಷಯ ಪ್ರಕಟಿಸಿದರು.ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಕಾನೂನುಗಳ ಪ್ರಕಾರ ಮತದಾನಕ್ಕೂ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರವನ್ನು ಮಾತ್ರ ನಿಷೇಧಿಸಲಾಗುತ್ತದೆ. ಆದರೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆಮನೆಗೆ ತೆರಳಿ ಮತ ಯಾಚಿಸಲು ಅವಕಾಶ ಇದೆ. ಈ ಅವಧಿಯಲ್ಲಿ ಮತದಾರರಿಗೆ ಹಣ, ವಸ್ತುಗಳು ಮತ್ತು ಮದ್ಯ ವಿತರಿಸಿ ಆಮಿಷ ಒಡ್ಡುತ್ತಿರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ-ಮನೆ ಪ್ರಚಾರವನ್ನೂ ನಿಷೇಧಿಸಲು ಆಯೋಗ ಯೋಚಿಸಿದೆ.‘ಮತದಾನಕ್ಕೂ ಮುಂಚಿನ ಅವಧಿಯಲ್ಲಿ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ’ ಎಂದು ಖುರೇಷಿ ಹೇಳಿದರು.‘ಮತದಾರರು ಯಾವುದೇ ಪೂರ್ವಗ್ರಹ ಇಲ್ಲದೇ ಮತ ಚಲಾಯಿಸುವ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕಾಗಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳಾಗಲೀ, ಅವರ ಬೆಂಬಲಿಗರಾಗಲೀ ಮತದಾರರನ್ನು ಸಂಪರ್ಕಿಸದಂತೆ ನಿಷೇಧ ಹೇರಲು ಚಿಂತನೆ ನಡೆದಿದೆ. ಮತದಾನಕ್ಕೂ ಮುನ್ನ ಮತದಾರರಿಗೆ ಆಮಿಷ ಒಡ್ಡಲು ಅವಕಾಶ ಇಲ್ಲದಿದ್ದರೆ ಮುಕ್ತ ಮತ್ತು ನಿಷ್ಪಕ್ಷಪಾತ ಮತದಾನ ನಡೆಯುತ್ತದೆ’ ಎಂದರು.‘ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸುವ ಮತ್ತು ಚುನಾವಣೆಯ ದಿನ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಮೇಲೆ ನಿಗಾ ಇಡುವ ಅಗತ್ಯವಿದೆ. ‘ಕಾಸಿಗಾಗಿ ಸುದ್ದಿ’ ಸಮಸ್ಯೆ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ನಿಷೇಧಿಸಲೇಬೇಕಿದೆ’ ಎಂದು ಅಭಿಪ್ರಾಯಪಟ್ಟರು.ಶುದ್ಧೀಕರಣವೇ ಗುರಿ: ತ್ವರಿತಗತಿಯಲ್ಲಿ ಚುನಾವಣಾ ಸುಧಾರಣೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿದ ಖುರೇಷಿ, ‘ರಾಜಕೀಯ ವ್ಯವಸ್ಥೆಯನ್ನು ಅಪರಾಧ ಮುಕ್ತಗೊಳಿಸುವುದೇ ನನ್ನ ಮೊದಲ ಕಾರ್ಯಸೂಚಿ’ ಎಂದರು.‘ಐದು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಬಹುದಾದ ಆರೋಪದಡಿ ವಿಚಾರಣೆ ಎದುರಿಸುತ್ತಿರುವವರನ್ನು ಅನರ್ಹಗೊಳಿಸುವ ಸಂಬಂಧ ‘ಪ್ರಜಾಪ್ರತಿನಿಧಿ ಕಾಯ್ದೆ-1951’ರ ಕಲಂ 8ಕ್ಕೆ ತಿದ್ದುಪಡಿ ತರುವಂತೆ ಚುನಾವಣಾ ಆಯೋಗ 2004ರಲ್ಲೇ ಸಲಹೆ ಮಾಡಿತ್ತು. ಈ ಅವಕಾಶ ದುರುಪಯೋಗ ಆಗದಂತೆ ತಡೆಯಲು ಚುನಾವಣೆಗೂ ಆರು ತಿಂಗಳ ಮುನ್ನ ದಾಖಲಾದ ಪ್ರಕರಣಗಳನ್ನು ಮಾತ್ರ ಪರಿಗಣಿಸಬೇಕೆಂಬ ಅಂಶ ತಿದ್ದುಪಡಿಯಲ್ಲಿರಬೇಕು’ ಎಂದು ಪ್ರತಿಪಾದಿಸಿದರು.ಶೀಘ್ರದಲ್ಲಿ ಕಾಯ್ದೆಗೆ ತಿದ್ದುಪಡಿ: ದೇಶದ ಚುನಾವಣಾ ವ್ಯವಸ್ಥೆಗೆ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗದ ಸಲಹೆ ಪಡೆದು ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ರಾಜಕೀಯ ಪಕ್ಷಗಳು, ಕಾನೂನು ತಜ್ಞರು, ಸರ್ಕಾರೇತರ ಸಂಸ್ಥೆಗಳು, ಶೈಕ್ಷಣಿಕ ವಲಯದ ಪ್ರಮುಖರು ಸೇರಿದಂತೆ ಚುನಾವಣಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಸಲಹೆ ಪಡೆದ ಬಳಿಕ ಚುನಾವಣಾ ಸುಧಾರಣೆ ಪ್ರಸ್ತಾವವನ್ನು ಅಂತಿಮಗೊಳಿಸಲಾಗುವುದು ಎಂದರು.ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರೂ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸುವುದು ಚುನಾವಣಾ ಸುಧಾರಣೆಯ ಮುಖ್ಯ ಅಂಶ. ಅದರೊಂದಿಗೆ ಚುನಾವಣಾ ವೆಚ್ಚ, ಗಂಭೀರವಲ್ಲದ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು, ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು ಮತ್ತು ವಾಪಸ್ ಪಡೆಯುವುದು, ಆಸ್ತಿ ಮತ್ತು ಬಾಧ್ಯತೆಗಳ ವಿವರ ಪ್ರಕಟ ಮತ್ತಿತರ ಅಂಶಗಳೂ ಈ ಸುಧಾರಣೆಯ ಭಾಗವಾಗಲಿವೆ ಎಂದು ಮೊಯಿಲಿ ಹೇಳಿದರು.‘ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಸಮಿತಿಯು ಈಗಾಗಲೇ ಐದು ಪ್ರಾದೇಶಿಕ ಸಂವಾದ ಕಾರ್ಯಕ್ರಮಗಳನ್ನು ನಡೆಸಿದ್ದು, ಸಲಹೆಗಳನ್ನು ಸ್ವೀಕರಿಸಿದೆ. ಚುನಾವಣಾ ವ್ಯವಸ್ಥೆಯನ್ನು ಬಲಗೊಳಿಸುವ ಸಂಬಂಧ ಸಲಹೆ ಪಡೆಯಲು ಏಪ್ರಿಲ್ 2 ಮತ್ತು 3ರಂದು ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಸಭೆ ನಡೆಯಲಿದೆ. ಬಳಿಕ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಸಮಗ್ರ ತಿದ್ದುಪಡಿ ತರಲಾಗುವುದು’ ಎಂದರು.‘ಚುನಾವಣಾ ಸಂಬಂಧಿ ಕಾಯ್ದೆಗಳಲ್ಲಿ ಇರುವ ಲೋಪಗಳನ್ನು ಗುರುತಿಸಲಾಗಿದೆ. ಅವುಗಳನ್ನು ಸರಿಪಡಿಸುವ ನೀಲಿನಕ್ಷೆಯೂ ಸಿದ್ಧವಿದೆ. ಈಗ ಜನತೆಯ ಅಭಿಪ್ರಾಯವನ್ನು ಪಡೆಯೋಣ. ಸುಧಾರಣೆಯ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳುವ ಜನಾಭಿಪ್ರಾಯವನ್ನು ಸಂಸತ್ತು ತಿರಸ್ಕರಿಸುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕಿದೆ. ಇದಕ್ಕಾಗಿ ಕ್ರಿಮಿನಲ್ ನ್ಯಾಯ ಪದ್ಧತಿಯನ್ನು ಶುಚಿಗೊಳಿಸಬೇಕಿದೆ. 2012ರ ಡಿಸೆಂಬರ್ ಬಳಿಕ ನ್ಯಾಯಾಲಯಗಳಲ್ಲಿ ಪ್ರಕರಣಗಳ ಬಾಕಿ ಅವಧಿಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ನ್ಯಾಯಾಂಗದಲ್ಲೂ ಸುಧಾರಣೆ ತರಲಾಗುವುದು ಎಂದರು.‘ರಾಜಕೀಯಕ್ಕೆ ಅಂಟಿದ ರೋಗ’:

ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ, ‘ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಪರಿಪಾಠ ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಒಂದು ರೋಗವಾಗಿ ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.‘ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಸಂಬಂಧ ಸ್ಪೀಕರ್ ನಿರ್ಧಾರ ಕೈಗೊಳ್ಳುವ ಪದ್ಧತಿಯನ್ನು ತೆಗೆದು ಹಾಕಬೇಕು. ಲಭ್ಯವಿರುವ ಸಾಕ್ಷ್ಯಾಧಾರಗಳು ಮತ್ತು ಚುನಾವಣಾ ಆಯೋಗದ ಸಲಹೆ ಆಧರಿಸಿ ರಾಷ್ಟ್ರಪತಿ ಅಥವಾ ರಾಜ್ಯಪಾಲರು ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’ ಎಂದು ಸಲಹೆ ಮಾಡಿದರು.ರಾಜ್ಯದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ತಮಿಳುನಾಡು ಕಾನೂನು ಸಚಿವ ದೊರೈ ಮುರುಗನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ‘ಟೋಟಲೈಸರ್’ ಬಳಸಲು ತಿದ್ದುಪಡಿ: ಕೋರಿಕೆ

ಬೆಂಗಳೂರು: ವಿದ್ಯುನ್ಮಾನ ಮತಯಂತ್ರ ಬಳಸುವ ಚುನಾವಣೆಗಳಲ್ಲಿ ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳ ಮತ ಎಣಿಕೆಯನ್ನು ನಡೆಸಲು ‘ಟೋಟಲೈಸರ್’ (ಒಂದಕ್ಕಿಂತ ಹೆಚ್ಚು ಯಂತ್ರಗಳ ಮತವನ್ನು ಲೆಕ್ಕಹಾಕುವ ಯಂತ್ರ) ಬಳಸಲು ಅವಕಾಶ ನೀಡಲು ಚುನಾವಣಾ ನಿಯಮಗಳಿಗೆ ತಿದ್ದುಪಡಿ ತರುವಂತೆ ಕೇಂದ್ರ ಚುನಾವಣಾ ಆಯೋಗ ಕೋರಿದೆ.ಕೇಂದ್ರ ಕಾನೂನು ಸಚಿವಾಲಯ ಮತ್ತು ಕೇಂದ್ರ ಚುನಾವಣಾ ಆಯೋಗ ಜಂಟಿಯಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಚುನಾವಣಾ ಸುಧಾರಣೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಟೋಟಲೈಸರ್ ಬಳಕೆಗೆ ಅನುವು ಮಾಡಿಕೊಡುವುದನ್ನು ಆದ್ಯತೆಯ ವಿಷಯವನ್ನಾಗಿ ಕೇಂದ್ರ ಸರ್ಕಾರ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.ಆಯಾ ಮತಗಟ್ಟೆಗಳ ಮತಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯಿಂದ ಆಯಾ ಪ್ರದೇಶದ ಮತ ಹಂಚಿಕೆ ವಿವರಗಳು ಸ್ಪಷ್ಟವಾಗಿ ಬಹಿರಂಗವಾಗುತ್ತವೆ. ಇದು ನಂತರದ ದಿನಗಳಲ್ಲಿ ರಾಜಕೀಯ ಗಲಭೆಗಳಿಗೆ ದಾರಿಯಾಗುತ್ತದೆ. ಆದ್ದರಿಂದ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳ ಮತಯಂತ್ರಗಳ ಮತ ಎಣಿಕೆ ಒಟ್ಟಾಗಿ ನಡೆದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.ಪ್ರಸ್ತುತ ವಿಧಾನಸಭಾ ಚುನಾವಣೆಗೆ 10 ಲಕ್ಷ ರೂಪಾಯಿ ಮತ್ತು ಲೋಕಸಭಾ ಚುನಾವಣೆಗೆ ರೂ 25 ಲಕ್ಷ ಚುನಾವಣಾ ವೆಚ್ಚ ನಿಗದಿ ಮಾಡಲಾಗಿದೆ. ಈ ಮೊತ್ತವನ್ನು ಅನುಕ್ರಮವಾಗಿ ರೂ 16 ಲಕ್ಷ ಮತ್ತು ರೂ 40 ಲಕ್ಷಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ ಎಂದು ಖುರೇಷಿ ತಿಳಿಸಿದರು.‘ಇತ್ತೀಚಿನ ಕಾಯ್ದೆಯೊಂದರ ಅಡಿಯಲ್ಲಿ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಪರಿಣಾಮವಾಗಿ ಆಯೋಗದಲ್ಲಿ ನೋಂದಣಿ ಮಾಡಿಸಿದ ರಾಜಕೀಯ ಪಕ್ಷಗಳ ಸಂಖ್ಯೆ 1,200ಕ್ಕೆ ಹೆಚ್ಚಿದೆ. ಒಂದು ಪಕ್ಷವು ಆಭರಣ ಮತ್ತು ಷೇರುಗಳ ಮೇಲೆ ರೂ 3 ಕೋಟಿ ಹೂಡಿಕೆ ಮಾಡಿರುವುದು ಆಯೋಗ ನಡೆಸಿರುವ ಪರಿಶೀಲನೆಯಲ್ಲಿ ಪತ್ತೆಯಾಗಿದೆ’ ಎಂದರು.ಅಧಿಕಾರ ಅಗತ್ಯ: ರಾಜ್ಯದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ‘ಚುನಾವಣೆಗಳಲ್ಲಿ ಸ್ಪರ್ಧಿಸುವ ಗಂಭೀರವಲ್ಲದ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ನಿಯಂತ್ರಿಸುವುದೂ ಸೇರಿದಂತೆ ಚುನಾವಣಾ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಚುನಾವಣಾ ಆಯೋಗಕ್ಕೆ ಕಾನೂನುಬದ್ಧ ಅಧಿಕಾರ ನೀಡಬೇಕು. ರಾಜಕೀಯ ಪಕ್ಷಗಳಿಗೆ ಹರಿದುಬರುವ ಹಣದ ಬಗ್ಗೆಯೂ ನಿಗಾ ಇಡುವ ಅಧಿಕಾರವೂ ಆಯೋಗಕ್ಕೆ ಲಭ್ಯವಾಗಬೇಕು’ ಎಂದು ಹೇಳಿದರು.‘ದೇಶದಲ್ಲಿ ಚುನಾವಣಾ ಸುಧಾರಣೆಯ ಭಾಗವಾಗಿ ಮತದಾನ ಕಡ್ಡಾಯಗೊಳಿಸಬೇಕು. ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದನ್ನು ನಿರ್ಬಂಧಿಸಬೇಕು’ ಎಂದು ತಮಿಳುನಾಡು ಕಾನೂನು ಸಚಿವ ದೊರೈ ಮುರುಗನ್ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry