`ಚುನಾವಣೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಇಲ್ಲ'

7

`ಚುನಾವಣೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಇಲ್ಲ'

Published:
Updated:

ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ, ರಾಜ್ಯದಲ್ಲಿ ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿದ್ದು, ಚುನಾವಣೆಯ ನಂತರವೇ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ನಡೆಯಲಿದೆ ಎಂದು ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.ನಗರದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗೆ ಮುನ್ನವೇ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದ್ದರೂ ಅಲ್ಲಿ ಗೆಲುವು ಸಾಧ್ಯವಾಗಲಿಲ್ಲ. ಆದರೆ, ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡದೆಯೇ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ ಎಂದು ಅವರು ಹೇಳಿದರು.ಪಕ್ಷದಲ್ಲಿ ಮುಖಂಡರ ಸಮೂಹವೇ ಇದೆ. ಅವರೆಲ್ಲರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ ಬಳಿಕ ಹೈಕಮಾಂಡ್ ಸೂಚನೆಯ ಮೇರೆಗೆ ಶಾಸಕಾಂಗವೇ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷ ಕೆಲವು ಮಾನದಂಡ ಅನುಸರಿಸುತ್ತಿದೆ. `ಗಾಳಿ ಬಿಟ್ಟಾಗ ತೂರಿಕೋ' ಎಂಬ ಆಸೆಯೊಂದಿಗೆ ಬರುವ ಭ್ರಷ್ಟರಿಗೆ, ಸ್ವಾರ್ಥಿಗಳಿಗೆ ಟಿಕೆಟ್ ದೊರೆಯುವುದಿಲ್ಲ. ಆ ರೀತಿಯ ನಿರೀಕ್ಷೆ ಇರಿಸಿಕೊಂಡು ಪಕ್ಷಕ್ಕೆ ಬರುವವರಿಗೆ ಸ್ಥಾನವಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.ದೆಹಲಿಯೂ ಒಳಗೊಂಡಂತೆ ದೇಶದಾದ್ಯಂತ ಮಹಿಳೆಯರ ಅತ್ಯಾಚಾರ ಪ್ರಕರಣಗಳನ್ನು ಹತ್ತಿಕ್ಕಲು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಸರ್ಕಾರ ಇದಕ್ಕೆ ಬದ್ಧವಾಗಿದೆ. ಭ್ರಷ್ಟಾಚಾರ ನಿರ್ಮೂಲನಾ ಕ್ರಮವನ್ನೂ ಇದೇ ಮಾದರಿಯಲ್ಲಿ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.ಆಹಾರ ಭದ್ರತೆ ಕಾಯ್ದೆ: ಮಾಹಿತಿ ಹಕ್ಕು ಕಾಯ್ದೆ ಮಾದರಿಯಲ್ಲೇ ರಾಷ್ಟ್ರದ ಜನರ ಆಹಾರದ ಹಕ್ಕುಗಳ ಭದ್ರತೆಗಾಗಿ ಕಾಯ್ದೆ ಜಾರಿಗೊಳಿಸಲು ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಬದ್ಧವಾಗಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸಿ, ಉಭಯ ಸದನಗಳ ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.ಮಹತ್ವದ, ಜನಪರವಾದ ಈ ಕಾಯ್ದೆ ಜಾರಿಗೆ ಬಂದಲ್ಲಿ ಕಾಂಗ್ರೆಸ್‌ಗೆ ಅಪಾರ ಜನಬೆಂಬಲ ದೊರೆಯಲಿದೆ ಎಂದು ಭಾವಿಸಿರುವ ವಿರೋಧ ಪಕ್ಷಗಳು ಇದಕ್ಕೆ ಅಡ್ಡಿ ಉಂಟು ಮಾಡುತ್ತಿವೆ ಎಂದು ದೂರಿದರು.ವಿಧೇಯಕಕ್ಕೆ ಅಂಕಿತ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 371ನೇ  `ಜೆ' ಕಲಂಗೆ ತಿದ್ದುಪಡಿ ತಂದಿದ್ದು, ಇನ್ನೊಂದು ವಾರದೊಳಗೆ ರಾಷ್ಟ್ರಪತಿಯವರಿಂದ ವಿಧೇಯಕಕ್ಕೆ ಅಂಕಿತ ಬೀಳುವ ಸಾಧ್ಯತೆ ಇದೆ. ನಂತರ ರಾಜ್ಯ ಸರ್ಕಾರ ಅದರ ಅನುಷ್ಠಾನಕ್ಕೆ ಮುತುವರ್ಜಿ ವಹಿಸಬೇಕು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry