ಚುನಾವಣೆ ಸಿದ್ಧತೆ

ಸೋಮವಾರ, ಜೂಲೈ 22, 2019
24 °C

ಚುನಾವಣೆ ಸಿದ್ಧತೆ

Published:
Updated:

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನ ನಡೆಯಲಿದೆ.ರಾಜ್ಯಸಭೆ, ಲೋಕಸಭೆ ಮತ್ತು ವಿಧಾನಸಭೆ ಸದಸ್ಯರು (ನಾಮಕರಣ ಸದಸ್ಯರನ್ನು ಹೊರತುಪಡಿಸಿ) ಮತದಾನ ಮಾಡಬಹುದು. ರಾಜ್ಯದ ಸಂಸದರ ಪೈಕಿ 10 ಮಂದಿ ಮಾತ್ರ ಬೆಂಗಳೂರಿನಲ್ಲಿ ಮತದಾನ ಮಾಡಲು ಚುನಾವಣಾ ಆಯೋಗದಿಂದ ಅನುಮತಿ ಪಡೆದಿದ್ದಾರೆ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಿ.ಚೆಲುವರಾಯಸ್ವಾಮಿ, ಬಿ.ವೈ.ರಾಘವೇಂದ್ರ ಸೇರಿದಂತೆ ಹತ್ತು ಮಂದಿ ವಿಧಾನಸೌಧದಲ್ಲೇ ಮತದಾನ ಮಾಡಲಿದ್ದಾರೆ. ಉಳಿದ ಸದಸ್ಯರು ದೆಹಲಿಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಗೊತ್ತಾಗಿದೆ.ಬಳ್ಳಾರಿ ಸಂಸದೆ ಜೆ.ಶಾಂತಾ ಅವರ ಸದಸ್ಯತ್ವ ರದ್ದುಗೊಳಿಸಿ, ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಅವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಅವರ ಮತಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಶೇಖರಿಸಿಡಲು ನ್ಯಾಯಾಲಯ ಸೂಚಿಸಿದೆ. ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳ ಮತಗಳು ಸಮವಾದ ಸಂದರ್ಭದಲ್ಲಿ ಇವರ ಮತಪತ್ರವನ್ನು ಎಣಿಕೆಗೆ ಕೈಗೆತ್ತಿಕೊಳ್ಳಲು ಅವಕಾಶ ಇದೆ. ಅದಕ್ಕೂ ನ್ಯಾಯಾಲಯದ ಪೂರ್ವಾನುಮತಿ ಅಗತ್ಯ ಎನ್ನಲಾಗಿದೆ.ಸಹಾಯಕ ಚುನಾವಣಾಧಿಕಾರಿ ಓಂಪ್ರಕಾಶ್ ಅವರು ಶುಕ್ರವಾರ ಬೆಳಿಗ್ಗೆ ಮತ ಪೆಟ್ಟಿಗೆಯೊಂದಿಗೆ ವಿಮಾನದಲ್ಲಿ ದೆಹಲಿಗೆ ತೆರಳುವರು. ಎಕ್ಸಿಕ್ಯುಟಿವ್ ಕ್ಲಾಸ್‌ನ ಒಂದು ಸೀಟನ್ನು ಮತಪೆಟ್ಟಿಗೆ ಇಡುವುದಕ್ಕೇ ಮೀಸಲಿಡಲಾಗಿದೆ.ಅದರ ಪಕ್ಕ ಓಂಪ್ರಕಾಶ್ ಕೂರಲಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಿಂದಲೂ ಬಿಗಿ ಪೊಲೀಸ್ ಭದ್ರತೆಯಲ್ಲಿ ಮತಪೆಟ್ಟಿಗೆಯನ್ನು ಸಂಸತ್ ಭವನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ವಿಶೇಷ ಚುನಾವಣಾಧಿಕಾರಿ ಆರ್.ಮನೋಜ್ `ಪ್ರಜಾವಾಣಿ~ಗೆ ತಿಳಿಸಿದರು. ಮತ ಎಣಿಕೆ ಇದೇ 22ರಂದು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry