ಶುಕ್ರವಾರ, ಜೂನ್ 18, 2021
28 °C

ಚುನಾವಣೆ: ‘ನೋಟಾ’ ಚಲಾವಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಹೈ–ಕ ವಿಶೇಷ ಸ್ಥಾನಮಾನದ 371(ಜೆ) ಕಲಂ ಪಟ್ಟಿಯಲ್ಲಿ ತಾಲ್ಲೂಕನ್ನು ಸೇರ್ಪಡೆಗೊಳಿಸಲು ಆಡಳಿತರೂಢ ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ಪ್ರದರ್ಶಿಸದ ಹಿನ್ನೆಲೆಯಲ್ಲಿ  ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರು ‘ನನ್‌ ಆಫ್‌ ದಿ ಎಬೊವ್‌’ (ನೋಟಾ) ಮೂಲಕ ಅಸಮರ್ಥ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸುವಂತೆ ಹೈ–ಕ ವಿಶೇಷ ಸ್ಥಾನಮಾನ ಹೋರಾಟ ಸಮಿತಿ ಭಾನುವಾರ ನಿರ್ಧಾರ ಕೈಗೊಂಡಿದೆ.ಬಳ್ಳಾರಿ ಜಿಲ್ಲೆಯ ಭಾಗವಾಗಿರುವ ಹರಪನಹಳ್ಳಿ ತಾಲ್ಲೂಕು ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೂ ಮುನ್ನ ಹೈದರಾಬಾದ್‌– ಕರ್ನಾಟಕ ವ್ಯಾಪ್ತಿಯ ಪ್ರಮುಖ ತಾಲ್ಲೂಕು ಕೇಂದ್ರ. ಆಡಳಿತ್ಮಾಕ ಅನುಕೂಲಕ್ಕಾಗಿ ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸಿ, ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆಯೇ ಹೊರತು, ಈ ಭಾಗದ ಸಮಸ್ಯೆಗಳಿಂದ  ಮುಕ್ತಿ ಸಿಕ್ಕಿಲ್ಲ. ಭೌಗೋಳಿಕವಾಗಿ ತಾಲ್ಲೂಕು ದಾವಣಗೆರೆ ಜಿಲ್ಲೆಯಲ್ಲಿದ್ದರೂ, ಈಗಲೂ ಮಾತೃ ತಾಲ್ಲೂಕಿನೊಂದಿಗೆ ನಿಕಟ ಸಂಪರ್ಕ, ಬಾಂಧವ್ಯ, ನಡೆ– ನುಡಿ, ಆಚಾರ– ವಿಚಾರ ಹಾಗೂ ಸಂಸ್ಕೃತಿ ಈಗಲೂ ಬಳ್ಳಾರಿಯೊಂದಿಗೆ ಮೇಳೈಸಿಕೊಂಡಿವೆ.ನೀರಾವರಿ ಮೂಲಗಳೇ ಇಲ್ಲದೇ ಮಳೆಯಾಶ್ರಿತ ಬದುಕಿನಲ್ಲಿ ಬಸವಳಿದು ಹೋಗಿರುವ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶ ಎಂದು ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮಾತೋಲನ ನಿವಾರಣಾ ಸಮಿತಿ  ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸ್ಪಷ್ಟಪಡಿಸಿದೆ.ಹೀಗಿದ್ದರೂ, ತಾಲ್ಲೂಕನ್ನು ಪ್ರತಿನಿಧಿಸುತ್ತಿರುವ ರಾಜಕಾರಣಿಗಳ ಬೇಜವಾಬ್ದಾರಿತನ ಹಾಗೂ ಇಚ್ಛಾಶಕ್ತಿ ಕೊರತೆ ಪರಿಣಾಮ ಹೈ–ಕ ವಿಶೇಷ ಸ್ಥಾನಮಾನ ಪಟ್ಟಿಯಿಂದ ಹೊರಗುಳಿಯಲು ಕಾರಣ. ಹೀಗಾಗಿ  ಏಪ್ರಿಲ್‌ 17ರಂದು ಕ್ಷೇತ್ರಕ್ಕೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರದ ಕೊನೆಯಲ್ಲಿ  ಅಳವಡಿಸಿರುವ ‘ನನ್‌ ಆಫ್‌ ದಿ ಎಬೊವ್‌’(ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡದಿರುವುದು) ಗುಂಡಿಯನ್ನು ಒತ್ತುವ ಮೂಲಕ ತಾಲ್ಲೂಕಿನ ಹಿತಾಸಕ್ತಿ ಕಾಪಾಡದ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸುವಂತೆ ಹೋರಾಟ ಸಮಿತಿ ಸಭೆ ಒಮ್ಮತದ ಮೂಲಕ ನಿರ್ಣಯ ಅಂಗೀಕರಿಸಿ, ತಾಲ್ಲೂಕಿನ ಮತದಾರರಿಗೆ ಕರೆ ನೀಡಿದೆ.ಸಮಿತಿ ಅಂಗೀಕರಿಸಿರುವ ನಿರ್ಣಯ ಕುರಿತು ತಾಲ್ಲೂಕಿನಾದಾದ್ಯಂತ ಕರಪತ್ರ, ಜಾಥಾ, ಜನಜಾಗೃತಿ ಸಭೆ ನಡೆಸುವ ಮೂಲಕ ನೋಟಾ ಮತ ಚಲಾವಣೆಗೆ ಮತದಾರರಲ್ಲಿ ಕೋರಲಾಗುವುದು. ವಿದ್ಯಾರ್ಥಿಗಳು, ನಿರುದ್ಯೋಗ ವಿದ್ಯಾವಂತ ಯುವಕರು ಬೆಂಬಲಿಸಲಿದ್ದು, ಮತದಾನ ಪೈಕಿ, ಸುಮಾರು 90 ಸಾವಿರಕ್ಕೂ ಅಧಿಕ ಮತದಾರರು ನೋಟಾ ಗುಂಡಿ ಒತ್ತುವ ಮೂಲಕ ಮತ ಚಲಾವಣೆ ಮಾಡಲಿದ್ದಾರೆ ಎಂದು ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ. ಚುನಾವಣೆಯಲ್ಲಿ ಪೊಳ್ಳು ಭರವಸೆ ನೀಡುವ ರಾಜಕಾರಣಿಗಳ ಬಣ್ಣದ ಮಾತಿಗೆ ಮರಳಾಗದಂತೆ ಎಚ್ಚರ ವಹಿಸಲು ಸಮಿತಿ ಕರೆ ನೀಡಿದೆ.ಈಗಾಗಲೇ ಹೈ–ಕ ವಿಶೇಷ ಸ್ಥಾನಮಾನ ವ್ಯಾಪ್ತಿಗೆ ಸಂಬಂಧಿಸಿದಂತೆ ಮೀಸಲಾತಿ ನೀಡುವ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ವೃಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ಪ್ರಕ್ರಿಯೆ ತಾಲ್ಲೂಕಿನ ಜನರ ಮೇಲೆ ಅನ್ಯಾಯ ಎಸಗಿದಂತೆ. ಹೀಗಾಗಿ ಕೇಂದ್ರ ಲೋಕಸೇವಾ ಆಯೋಗ ಹಾಗೂ ರಾಜ್ಯ ಲೋಕಸೇವಾ ಆಯೋಗ ಸೇರಿದಂತೆ ಸರ್ಕಾರಿ ನೇಮಕಾತಿ ಪ್ರಾಧಿಕಾರ ಕೂಡಲೇ ನೇಮಕಾತಿ ಪ್ರಕ್ರಿಯೆ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಸಮಿತಿ ನಿರ್ಧಾರ ಕೈಗೊಂಡಿದೆ.ಸಭೆಯಲ್ಲಿ ಸಮಿತಿ ಸಂಚಾಲಕರಾದ ಇದ್ಲಿ ರಾಮಪ್ಪ, ಶಿಕಾರಿ ಬಾಲಪ್ಪ, ಬಿ.ವೈ. ವೆಂಕಟೇಶನಾಯ್ಕ, ಎಚ್‌. ವೆಂಕಟೇಶ್‌, ಗೌಳಿ ಭರಮಣ್ಣ, ಎಸ್‌. ಪರಶುರಾಮ್‌ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.