ಗುರುವಾರ , ಮೇ 13, 2021
18 °C

ಚುರುಕು ಪಡೆದುಕೊಳ್ಳದ ಬಿತ್ತನೆ ಕಾರ್ಯ

ಪ್ರಜಾವಾಣಿ ವಾರ್ತೆ/ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಚುರುಕು ಪಡೆದುಕೊಳ್ಳದ ಬಿತ್ತನೆ ಕಾರ್ಯ

ಮಂಡ್ಯ:  ಜಿಲ್ಲೆಯಲ್ಲಿ ಮೇ ಆರಂಭದಲ್ಲಿ ಸುರಿದ ಮಳೆ ಕಳೆದೊಂದು ವಾರದಿಂದ ಕಾಣೆಯಾಗಿದೆ. ಸುರಿದ ಮಳೆಯೂ ಎಲ್ಲೆಡೆ ಚದುರಿಕೊಂಡಿಲ್ಲ. ಚುರುಕು ಪಡೆದುಕೊಳ್ಳಬೇಕಿದ್ದ ಬಿತ್ತನೆ ಕಾರ್ಯ ಮಂದವಾಗಿದೆ. ಇದು ರೈತರ ಮನದಲ್ಲಿ ಆತಂಕ ಮೂಡಿಸಿದೆ.ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ 2,05,800 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 22,018 (ಶೇ 10.7) ಹೆಕ್ಟೇರ್ ಬಿತ್ತನೆಯಾಗಿದೆ. ಅದರಲ್ಲೂ ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ಅಲಸಂದೆ ಬಿತ್ತನೆ ಪ್ರಮಾಣ ಶೇ 32 ರಷ್ಟಾಗಿದೆ.ಮೇ ತಿಂಗಳವರೆಗೆ ಜಿಲ್ಲೆಯಲ್ಲಿ ವಾಡಿಕೆ ಪ್ರಕಾರ 860 ಮಿ.ಮೀ. ಮಳೆಯಾಗಬೇಕಿತ್ತು. 627 ಮಿ.ಮೀ. ಮಳೆಯಾಗಿದೆ. ಜೂನ್‌ನಲ್ಲಿ 43.9 ಮಿ.ಮೀ. ಮಳೆಯಾಗಬೇಕಿತ್ತು. 42.8 ಮಳೆಯಾಗಿದೆ. ಜುಲೈನಲ್ಲಿ 220 ಮಿ.ಮೀ. ಮಳೆಯಾಗಿದೆ.ಜಿಲ್ಲೆಯಲ್ಲಿ ಒಟ್ಟಾರೆಯಾಗಿ ವಾಡಿಕೆ ಮಳೆಗೆ ಹತ್ತಿರ, ಹತ್ತಿರ ಮಳೆಯಾಗಿದೆ. ಆದರೆ, ಆ ಮಳೆ ಎಲ್ಲ ತಾಲ್ಲೂಕುಗಳಲ್ಲಿ ಸಮಾನವಾಗಿ ಆಗಿಲ್ಲ. ಜತೆಗೆ ಕೆಲವು ಕಡೆಗಳಲ್ಲಿ ಒಂದೆರಡು ಬಾರಿ ಸುರಿದ ಮಳೆ ಮತ್ತೆ ಮುಖ ತೋರಿಸಿಲ್ಲ.ಜಿಲ್ಲೆಯಲ್ಲಿ ಅಲಸಂದೆಯ ಬಿತ್ತನೆಯನ್ನು 5,100 ಹೆಕ್ಟೇರ್ ಹೊಂದಲಾಗಿತ್ತು. 6,018 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ತೊಗರಿ 1,400 ಹೆಕ್ಟೇರ್ ಗುರಿಯಲ್ಲಿ 740, ಉದ್ದುವಿನಲ್ಲಿ 450 ಹೆಕ್ಟೇರ್ ಗುರಿಯಲ್ಲಿ 408, ಹೆಸುರು ಬಿತ್ತನೆಯ 450 ಹೆಕ್ಟೇರ್ ಗುರಿಯಲ್ಲಿ 314 ಹೆಕ್ಟೇರ್ ಬಿತ್ತನೆಯಾಗಿದೆ.ಎಳ್ಳು ಬಿತ್ತನೆಯ 4,600 ಹೆಕ್ಟೇರ್ ಗುರಿಯಲ್ಲಿ 8,548, ನೆಲಗಡಲೆ ಬಿತ್ತನೆಯ 2,200 ಹೆಕ್ಟೇರ್ ಗುರಿಯಲ್ಲಿ 304 ಹೆಕ್ಟೇರ್ ಹಾಗೂ ಹರಳು ಬಿತ್ತನೆಯ 1,500 ಹೆಕ್ಟೇರ್ ಗುರಿಯಲ್ಲಿ 3,36 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.  ಹುರುಳಿ, ಅವರೆ ಬಿತ್ತನೆಯಾಗಿಲ್ಲ.ಆರಂಭಕ್ಕೆ ಮಂಕು: ಜಿಲ್ಲೆಯ ಪ್ರಮುಖ ಬೆಳೆಗಳಾದ ರಾಗಿ, ಬತ್ತ ಹಾಗೂ ಕಬ್ಬಿನ ಬಿತ್ತನೆಗೆ ಮಂಕು ಕವಿದಿದೆ.70,600 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 64,450 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಹಾಗೂ 30,550 ಪ್ರದೇಶದಲ್ಲಿ ಕಬ್ಬು ಹಾಕಬೇಕಾಗಿತ್ತು.ರಾಗಿ ಬೆಳೆ ಬಿತ್ತನೆಯು ಈಗಷ್ಟೇ ಆರಂಭವಾಗಬೇಕಿದೆ. ಆದರೆ, ಸರಿಯಾಗಿ ಮಳೆಯಾಗದ್ದರಿಂದ ರೈತರು ಕಾಯುತ್ತಿದ್ದಾರೆ. ನೀರಾವರಿ ಪ್ರದೇಶದಲ್ಲಿಯೂ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಬತ್ತ ಹಾಗೂ ಕಬ್ಬು ಸಂಪೂರ್ಣ ನೀರಾವರಿ ಆಶ್ರಿತ ಬೆಳೆಗಳಾಗಿವೆ. ಕೆಆರ್‌ಎಸ್ ಅಣೆಕಟ್ಟಯಲ್ಲಿ ನೀರಿಲ್ಲದ್ದರಿಂದ ಈ ಬೆಳೆಗಳನ್ನು ಬೆಳೆಯುವುದು ಅತಂತ್ರವಾಗಿದೆ.ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈಗ 79 ಅಡಿಯಷ್ಟು ನೀರಿದೆ. ಪ್ರಮುಖ ನಾಲೆಗಳಲ್ಲೊಂದಾದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಬೇಕು ಎಂದರೆ ಕನಿಷ್ಠ 94 ಅಡಿ ನೀರು ಬರಬೇಕು. ಒಂದು ಬೆಳೆಗೆ ನೀರು ಒದಗಿಸಬೇಕು ಎಂದರೆ ಅಣೆಕಟ್ಟೆಯ ಮಟ್ಟ 110 ಅಡಿಯಾಗಬೇಕು. ಮಳೆರಾಯ ಕೃಪೆ ತೋರಿಸಿದರೆ ಸರಿ, ಇಲ್ಲದಿದ್ದರೆ ಸತತ ಮೂರನೇ ವರ್ಷವೂ ಜಿಲ್ಲೆ ಬರಗಾಲವನ್ನು ಎದುರಿಸಬೇಕಾಗುತ್ತದೆ.ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಅಣೆಕಟ್ಟೆಗೆ ನೀರು ಬರುವ ನಿರೀಕ್ಷೆಯಿದೆ. ಕೊಡಗು ಹಾಗೂ ಕೇರಳದಲ್ಲಿ ಉತ್ತಮ ಮಳೆಯಾಗಿ, ಅಣೆಕಟ್ಟೆಗೆ ನೀರು ಬರಲಿದೆ ಎಂಬ ಆಶಾಭಾವನೆ ರೈತರದ್ದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.