ಚುರುಮುರಿ ವ್ಯಾಪಾರಿ ಪುತ್ರಿಯ `ಚಿನ್ನದ ಸಾಧನೆ'

ಬುಧವಾರ, ಜೂಲೈ 17, 2019
25 °C

ಚುರುಮುರಿ ವ್ಯಾಪಾರಿ ಪುತ್ರಿಯ `ಚಿನ್ನದ ಸಾಧನೆ'

Published:
Updated:

ಮೈಸೂರು: `ನಂಜನಗೂಡಿನ ಚಾಮಲಾಪುರ ಬೀದಿಯಲ್ಲಿ ತಂದೆ ಮಹಾದೇವಪ್ಪ ಚುರುಮುರಿ ವ್ಯಾಪಾರಿ. ಅವರು ಖಾಸಗಿಯಾಗಿ 50 ಸಾವಿರ ರೂಪಾಯಿ ಸಾಲ ಮಾಡಿ ಓದಿಸಿದರು. ಕಷ್ಟಪಟ್ಟು ಎಂ.ಎ ಕನ್ನಡ ಓದಿದೆ. ಒಂದೇ ಒಂದು ಚಿನ್ನದ ಪದಕ ಸಿಗುತ್ತದೆ ಎಂದು ಅಂದುಕೊಂಡಿದ್ದೆ. ಆದರೆ, 8 ಚಿನ್ನದ ಪದಕ, 2 ನಗದು ಬಹುಮಾನ ಪಡೆದೆ...' ಎಂದು ಸಂಭ್ರಮದಿಂದ ಹೇಳಿದರು ಎಂ. ಅಕ್ಷತಾ.ನಗರದ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 93ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ಪದವಿಯಲ್ಲಿ ಶೇ 65ರಷ್ಟು ಅಂಕ ಪಡೆದಿದ್ದರೂ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೀಟು ಸಿಕ್ಕಿರಲಿಲ್ಲ. ನನಗಿಂತ ಅಪ್ಪ-ಅಮ್ಮ ಹೆಚ್ಚು ದುಃಖಪಟ್ಟಿದ್ದರು. ಆದರೆ, ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಸೀಟು ಸಿಕ್ಕಿತು. ನಿತ್ಯ ನಂಜನಗೂಡಿನಿಂದ 36 ಕಿ.ಮೀ. ದೂರವಿರುವ ಚಾಮರಾಜನಗರಕ್ಕೆ ಓಡಾಡಿ ಓದಿದೆ. ಎಸ್‌ಎಸ್‌ಎಲ್‌ಸಿ, ಪಿಯುನಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಮಾತ್ರ ಪಾಸಾಗಿದ್ದೆ. ಸದ್ಯ ನಂಜನಗೂಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವೆ. ನೆಟ್ ಪಾಸಾಗಿದ್ದು, ಪಿಎಚ್.ಡಿ ಮಾಡುವೆ' ಎಂದು ಖುಷಿಯಾಗಿ ಹೇಳಿದರು.`ಚಹಾದಂಗಡಿ ಇಟ್ಟುಕೊಂಡಿದ್ದೆ. ಆರೋಗ್ಯದ ಮೇಲೆ ಪರಿಣಾಮ ಆದ ಮೇಲೆ ಚುರುಮುರಿ ವ್ಯಾಪಾರ ಶುರು ಮಾಡಿದೆ. ನಾನೇನೂ ಓದಿಲ್ಲ. ಮನೆಯಾಕೆ ಭಾರತಿ ಎಂಟನೇ ತರಗತಿ ಓದಿದ್ದಾಳೆ. ಮಗ ಸತೀಶ್ ನಂಜನಗೂಡಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ಕೊನೆಯ ವರ್ಷದಲ್ಲಿ ಓದುತ್ತಿದ್ದಾನೆ. ಅಕ್ಷತಾ ಚಿನ್ನದ ಪದಕ ಪಡೆದುದನ್ನು ನೋಡಿ ಕಣ್ತುಂಬಿಕೊಂಡೆವು' ಎಂದು ಅಕ್ಷತಾ ತಂದೆ ಮಹಾದೇವಪ್ಪ ಹೇಳಿದರು.ಕನ್ನಡ ಮಾಧ್ಯಮದಲ್ಲಿ ಓದು: ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ಶೇ 92ರಷ್ಟು ಅಂಕ ಪಡೆದು 12 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಪಡೆದವರು ಎಚ್.ಆರ್. ವನಿತಾ. ಮೈಸೂರು ತಾಲ್ಲೂಕಿನ ಹೂಟಗಳ್ಳಿಯ ವನಿತಾ ತಂದೆ ರಂಗಸ್ವಾಮಿ ಮದುವೆ ಪರಿಕರಗಳ ಪ್ಯಾಕೇಜ್ ಮಾಡುವ ಸಣ್ಣ ಉದ್ಯಮಿ. `ಮನೆಯಿಂದ ವಿವಿಗೆ ಬಸ್‌ನಲ್ಲಿ ಓಡಾಡುತ್ತ, ರಾತ್ರಿ 2 ಗಂಟೆಯವರೆಗೆ ಓದುತ್ತಿದ್ದೆ. ದೇಶದಲ್ಲಿ 56ನೇ ರ‌್ಯಾಂಕ್ ಪಡೆದು `ನೆಟ್' ಪಾಸಾಗಿದ್ದು, ಐಎಎಸ್ ಓದುವ ಆಸೆಯಿದೆ' ಎಂದು ಮನದಂಗಿತವನ್ನು ವನಿತಾ ಹಂಚಿಕೊಂಡರು.`ನಮ್ಮ ಪುತ್ರಿ ವನಿತಾಳನ್ನು ಎಸ್‌ಎಸ್‌ಎಲ್‌ಸಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿಸಿರುವೆ. ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಷಯ ಪಡೆದು ಓದಬೇಕೆಂದರೆ ಪ್ರವೇಶ ನಿರಾಕರಿಸಲಾಯಿತು. ಕನ್ನಡ ಮಾಧ್ಯಮದಲ್ಲಿ ಓದಿದರೆ ಇಂಗ್ಲಿಷ್ ವಿಷಯದಲ್ಲಿ ಓದಲು ಕಷ್ಟವಾಗುತ್ತದೆ ಎಂದು ಸೀಟು ಕೊಡಲಿಲ್ಲ. ಜಗಳವಾಡಿ ಸೀಟು ಪಡೆದೆವು. ಕನ್ನಡ ಮಾಧ್ಯಮದಲ್ಲಿ ಓದಿ ಮಗಳು ಎಂಎಸ್ಸಿ ಓದಿ ರ‌್ಯಾಂಕ್ ಪಡೆದಿದ್ದಾಳೆ. ಎಲ್ಲ ಮಕ್ಕಳೂ ಕನ್ನಡ ಶಾಲೆಯಲ್ಲಿ ಓದಬೇಕು' ಎಂಬ ಒತ್ತಾಸೆ ರಂಗಸ್ವಾಮಿ ಅವರದು.ಪಿಎಚ್.ಡಿ ಕನಸು: `ಕಠಿಣ ಶ್ರಮದಿಂದ ಏನನ್ನಾದರೂ ಸಾಧಿಸಬಹುದು' ಎಂದು ಮಾತು ಆರಂಭಿಸಿದವರು ಜಾನಪದ ಎಂ.ಎ ವಿಷಯದಲ್ಲಿ ಶೇ 90ರಷ್ಟು ಅಂಕ ಪಡೆದು 6 ಚಿನ್ನದ ಪದಕ ಪಡೆದ ಎಚ್.ಪಿ. ಮಂಜು.ಮೈಸೂರು ತಾಲ್ಲೂಕಿನ ಹದಿನಾರು ಗ್ರಾಮದ ಕೃಷಿಕರಾದ ಪುಟ್ಟಯ್ಯ ಹಾಗೂ ನಾಗಮ್ಮ ಪುತ್ರರಾದ ಮಂಜು, ಭಾಷಾವಿಜ್ಞಾನದಲ್ಲಿ ಡಿಪ್ಲೊಮಾ ಓದಿದ್ದಾರೆ. ಮುಂದೆ ಪಿಎಚ್.ಡಿ ಅಧ್ಯಯನ ಕೈಗೊಳ್ಳುವ ಕನಸದು ಅವರದು.

ಉತ್ತಮ ಅಂಕ: ಮೈಸೂರು ವಿವಿಯ ಲಲಿತಕಲಾ ಕಾಲೇಜಿನಲ್ಲಿ ಬಿ.ಎ ಪದವಿಯಲ್ಲಿ 5 ಚಿನ್ನದ ಪದಕ ಹಾಗೂ 5 ನಗದು ಬಹುಮಾನ ಪಡೆದವರು ಶ್ರುತಿರಂಜಿನಿ. ಅವರ ತಾಯಿ ಸುಜಾತಾ ತೀರಿಕೊಂಡಿದ್ದಾರೆ. ತಂದೆ ತಾಂಡವಮೂರ್ತಿ ವಯಲಿನ್ ಕಲಾವಿದರು.ಅರಮನೆಯ ಆರ್ಕೆಸ್ಟ್ರಾ ತಂಡದ ಸದಸ್ಯರು. ಅವರ ತಾತ ಶ್ರೀನಿವಾಸಯ್ಯ ವಯಲಿನ್ ಕಲಾವಿದರು. ಗಾಯನ, ಭರತನಾಟ್ಯ ಹಾಗೂ ವಯಲಿನ್ ಕಲಾವಿದೆಯಾಗಿರುವ ಶ್ರುತಿರಂಜಿನಿ, ಸೋದರಿ ಬಿಂದುಮಾಲಿನಿಯೊಂದಿಗೆ ಅನೇಕ ಬಾರಿ ಸಂಗೀತ ಕಛೇರಿ ನೀಡಿದ್ದಾರೆ. ಸಿಂಗಪುರದಲ್ಲಿ (2011) ನಡೆದ ಜಾಗತಿಕ 8ನೇ ಸಂಗೀತ ಸಮ್ಮೇಳನದಲ್ಲಿ ಈ ಸೋದರಿಯರು ಪಾಲ್ಗೊಂಡಿದ್ದರು.`ಚಿನ್ನದ ಪದಕ ಪಡೆಯುವ ಕನಸು ಕಂಡಿರಲಿಲ್ಲ. ಉತ್ತಮ ಅಂಕ ಪಡೆಯುವ ಗುರಿಯಿತ್ತು. ಆದರೆ, ಬಂದಿದ್ದು ಬೋನಸ್' ಎಂದು ಶ್ರುತಿರಂಜಿನಿ ನಕ್ಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry