ಚೆಂಡು ಹೂನಿಂದ ಅರಳಿದ ಬದುಕು

7

ಚೆಂಡು ಹೂನಿಂದ ಅರಳಿದ ಬದುಕು

Published:
Updated:

ಚೆಂಡು ಹೂಗಳು ಮನೆ, ದೇಗುಲ ಮತ್ತು ದೇವರುಗಳ ಶೃಂಗಾರಕ್ಕೆ ಮಾತ್ರವಲ್ಲ, ರೈತರ ಮತ್ತು ಕೂಲಿಕಾರ್ಮಿಕರ ಜೀವನೋಪಾಯಕ್ಕೂ ದಾರಿ ಮಾಡಿಕೊಟ್ಟಿವೆ. ಜಮೀನ್ದಾರರು ಚೆಂಡು ಹೂಗಳನ್ನು ಬೆಳೆಸುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದರೆ, ರೈತರು ಮತ್ತು ಕೂಲಿಕಾರ್ಮಿಕರು ಆಯಾ ಜಮೀನುಗಳಲ್ಲಿ ದಿನಪೂರ್ತಿ ದುಡಿದು ಬರುವ ಅಲ್ಪಸ್ವಲ್ಪ ಕೂಲಿಯನ್ನು ನಂಬಿ ಬದುಕುತ್ತಿದ್ದಾರೆ. ಹಬ್ಬಹರಿದಿನಗಳಷ್ಟೇ ಅಲ್ಲ, ವರ್ಷದ ಇತರ ತಿಂಗಳಲ್ಲೂ ಚೆಂಡು ಹೂಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.ಹೀಗಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಚೆಂಡು ಹೂಗಳು ತಮ್ಮ ಆಧಿಪತ್ಯ ಸಾಧಿಸಿವೆ. ರಾಗಿ, ನೆಲಗಡಲೆ, ಮುಸುಕಿನ ಜೋಳ ಬೆಳೆಯುವ ಪ್ರಮಾಣದಷ್ಟೇ ಚೆಂಡು ಹೂ ಬೆಳೆಯಲಾಗುತ್ತಿದೆ. ತಾಲ್ಲೂಕಿನ ಹೊರವಲಯದ ರಾಮಪಟ್ಣ, ಕೇತನಹಳ್ಳಿ, ಆವಲಗುರ್ಕಿ, ಮುಸ್ಟೂರು, ಗೇರಹಳ್ಳಿ, ಗೊಲ್ಲಹಳ್ಳಿ, ಇಟ್ಟಪ್ಪನಹಳ್ಳಿ, ಮಾರಪ್ಪನಹಳ್ಳಿ, ಜಂಗಮಾರಪ್ಪನಹಳ್ಳಿ, ಸಾದೇನಹಳ್ಳಿ, ನಾಸತಿಮ್ಮನಹಳ್ಳಿ, ಮಂಡಿಕಲ್, ಗುಂಡ್ಲುಮಂಡಿಕಲ್, ನಲ್ಲಗುಟ್ಟಪಾಳ್ಯ ಮುಂತಾದ ಗ್ರಾಮಗಳಲ್ಲಿ ರಾಶಿರಾಶಿಗಟ್ಟಲೆ ಚೆಂಡು ಹೂ ಬೆಳೆಯಲಾಗುತ್ತಿದೆ.ಗ್ರಾಮದ ರಸ್ತೆಗಳಲ್ಲಿ, ಮುಖ್ಯರಸ್ತೆಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ನಡೆಯುತ್ತ ಅಥವಾ ವಾಹನಗಳಲ್ಲಿ ಹೋಗುವಾಗ, ಜಮೀನಿನಲ್ಲಿ ಅರಳಿ ನಿಂತ ಚೆಂಡು ಹೂಗಳು ಮನಸ್ಸಿಗೆ ಖುಷಿ ನೀಡುತ್ತವೆ. ಹಳದಿ ಮತ್ತು ಕೆಂಪು ಬಣ್ಣದ ಹೂಗಳು ಜಮೀನಿನ ಅಂದ ಹೆಚ್ಚಿಸುತ್ತವೆ.`ನಾವು ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಜಮೀನಿನಲ್ಲಿ ದುಡಿಯುತ್ತೇವೆ. ಕೆಂಪು ಮತ್ತು ಹಳದಿ ಬಣ್ಣದ ಚೆಂಡು ಹೂಗಳನ್ನು ಕಿತ್ತು ಒಂದೆಡೆ ಸಂಗ್ರಹಿಸುತ್ತೇವೆ. ಅವುಗಳನ್ನು ಮೂಟೆಗಳಲ್ಲಿ ಮತ್ತು ಬಟ್ಟೆಗಳಲ್ಲಿ ಕೂಡಿ ಹಾಕುತ್ತೇವೆ. ಕೆಲ ರೈತರು ಹೂಗಳನ್ನು ಎಪಿಎಂಸಿ ಮಾರುಕಟ್ಟೆಗೆ ಒಯ್ದು ಮಾರುತ್ತಾರೆ. ಇನ್ನೂ ಕೆಲ ಜಮೀನ್ದಾರರು ಹೈದರಾಬಾದ್‌ನ ಕಾರ್ಖಾನೆಗಳಿಗೆ ಹೂಗಳನ್ನು ಮಾರುತ್ತಾರೆ. ಕಾರ್ಖಾನೆಯಲ್ಲಿ ಚೆಂಡು ಹೂಗಳಿಂದ ಉಪಯುಕ್ತ ಔಷಧಿಗಳನ್ನು ತಯಾರಿಸಲಾಗುತ್ತದೆ~ ಎಂದು ಕೂಲಿಕಾರ್ಮಿಕರಾದ ಜರೀನಾ `ಪ್ರಜಾವಾಣಿ~ಗೆ ತಿಳಿಸಿದರು.`ಕೆಲ ಗ್ರಾಮಗಳಲ್ಲಿ ಕಾರ್ಖಾನೆಯವರೇ ರೈತರಿಗೆ ಚೆಂಡು ಹೂಗಳ ಬಿತ್ತನೆ ಬೀಜಗಳನ್ನು ನೀಡುತ್ತಾರೆ. ಹಬ್ಬಹರಿದಿನಗಳಲಿ ಬೇಡಿಕೆಯಿದ್ದಾಗ ಚೆಂಡು ಹೂಗಳನ್ನು ರೈತರೇ ನೇರವಾಗಿ ಮಾರುಕಟ್ಟೆಗೆ ಒಯ್ದು ಮಾರುತ್ತಾರೆ. ಬೇಡಿಕೆಯಿರದ ಸಂದರ್ಭದಲ್ಲಿ ಕೆ.ಜಿ.ಗೆ 4 ರೂಪಾಯಿಯಂತೆ ಚೆಂಡು ಹೂಗಳನ್ನು ಕಾರ್ಖಾನೆಗೆ ಮಾರಲಾಗುತ್ತದೆ. ನಮಗೆ ದಿನದ ಕೂಲಿ ರೂಪದಲ್ಲಿ 150 ರಿಂದ 200 ರೂಪಾಯಿ ನೀಡಲಾಗುತ್ತದೆ~ ಎಂದು ಅವರು ತಿಳಿಸಿದರು. 

                        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry