ಚೆಕ್ ಬದಲು ಮತ್ತೆ ಚಿನ್ನದ ಪದಕ

7

ಚೆಕ್ ಬದಲು ಮತ್ತೆ ಚಿನ್ನದ ಪದಕ

Published:
Updated:

ಬೆಂಗಳೂರು: ಕಳೆದ ಘಟಿಕೋತ್ಸವ ಸಂದರ್ಭದಲ್ಲಿ ‘ಚಿನ್ನದ ಬೆಲೆ ಹೆಚ್ಚಳವಾಗಿದೆ’ ಎಂಬ ಕಾರಣ ನೀಡಿದ್ದ ಬೆಂಗಳೂರು ವಿ.ವಿ., ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ಚೆಕ್ ನೀಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಾರಿ ರೂ 10,000 ಮೌಲ್ಯದ ಚಿನ್ನದ ಪದಕ ನೀಡಲು ಮಂಗಳವಾರ ನಡೆದ ವಿ.ವಿ.ಯ ಅಕಾಡೆಮಿ ಕೌನ್ಸಿಲ್‌ನ ವಿಶೇಷ ಸಭೆ ನಿರ್ಧರಿಸಿದೆ.‘ಪ್ರತಿ ವಿದ್ಯಾರ್ಥಿಗೂ ಚಿನ್ನದ ಪದಕ ಪಡೆಯುವ ಕನಸು ಇರುತ್ತದೆ. ವಿವಿಧ ಗಣ್ಯರು ಪದಕ ನೀಡಲು ದತ್ತಿ ಸ್ಥಾಪಿಸಿದ್ದು, ಅದರ ಬಡ್ಡಿ ಈಗ ಅತ್ಯಂತ ಕಡಿಮೆ ಬರುತ್ತದೆ. ಆ ಹಿನ್ನೆಲೆಯಲ್ಲಿ ಚೆಕ್ ನೀಡಲಾಗಿತ್ತು. ಈ ರೀತಿ ಮಾಡುವುದು ಸರಿಯಲ್ಲ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಮತ್ತೆ ಚಿನ್ನದ ಪದಕ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕುಲಪತಿ ಡಾ.ಎನ್.ಪ್ರಭುದೇವ್ ಸಭೆಗೆ ತಿಳಿಸಿದರು.ಒಟ್ಟು 226 (ಸ್ನಾತಕೋತ್ತರ-142, ಪದವಿ-84) ಚಿನ್ನದ ಪದಕಗಳನ್ನು ಪ್ರಸ್ತುತ ನೀಡಲಾಗುತ್ತಿದ್ದು, ತಲಾ 10 ಸಾವಿರ ಮೊತ್ತದ ಚಿನ್ನದ ಪದಕ ನೀಡಲು ವಾರ್ಷಿಕ ರೂ 25 ಲಕ್ಷ ಅಗತ್ಯಇದೆ. ಈ ಖರ್ಚನ್ನು ಕೆಲ ಅಂತರರಾಷ್ಟ್ರೀಯ, ರಾಷ್ಟ್ರೀಯ ವಿಚಾರ ಸಂಕಿರಣ ನಿಲ್ಲಿಸುವ ಮೂಲಕ. ಘಟಿಕೋತ್ಸವದ ನಂತರ ಏರ್ಪಡಿಸಲಾಗುವ ಔತಣಕೂಟ ಸ್ಥಗಿತಗೊಳಿಸುವ ಮೂಲಕ, ಆ ಹಣವನ್ನು ಈ ಉದ್ದೇಶಕ್ಕೆ ಬಳಸಲಾಗುವುದು. ಈ ಪದಕಗಳಿಗೆ ‘ಬೆಂಗಳೂರು ವಿಶ್ವವಿದ್ಯಾಲಯ ಚಿನ್ನದ ಪದಕ’ ಎಂದು ನಾಮಕರಣ ಮಾಡಲಾಗಿದೆ ಎಂದರು.ಸಂಪನ್ಮೂಲ ಸಂಗ್ರಹ: ‘ಬೆಂಗಳೂರು ವಿ.ವಿ. ಪ್ರಾಧ್ಯಾಪಕರಿಗೆ ಹಾಗೂ ಸಿಬ್ಬಂದಿಗೆ ಪ್ರಸ್ತುತ ವಾರ್ಷಿಕ ರೂ 50 ಕೋಟಿ ವೇತನ ನೀಡಲಾಗುತ್ತಿದೆ. ಜತೆಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗಿದೆ. ಹಾಗಿದ್ದರೆ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹೆಚ್ಚಿಸುವುದು ಬೇಡವೆ’ ಎಂದು ಕುಲಪತಿ ಪ್ರಭುದೇವ್ ಪ್ರಶ್ನೆ ರೂಪದಲ್ಲಿ ಶುಲ್ಕ ಹೆಚ್ಚಿಸುವ ಪ್ರಸ್ತಾವವನ್ನು ಸಭೆಯ ಮುಂದಿಟ್ಟರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಡಾ.ಬಿ.ಎನ್.ಶ್ರೀನಿವಾಸರಾವ್ ಮಾನೆ, ‘ಸಾವಿರಾರು ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈಗ ಇರುವ ಶುಲ್ಕವನ್ನೇ ಪಾವತಿಸಲು ಆಗುತ್ತಿಲ್ಲ. ಆದ್ದರಿಂದ ಶುಲ್ಕ ಏರಿಕೆ ಬೇಡ’ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಡಾ.ಪ್ರಭುದೇವ್, ‘ಬಡವಿದ್ಯಾರ್ಥಿಗಳ ಬಗ್ಗೆ ನಮ್ಮ ವಿ.ವಿ.ಗೆ ಕಾಳಜಿ ವಹಿಸಿದೆ. ಆದ್ದರಿಂದಲೇ ಆರ್ಥಿಕವಾಗಿ ಹಿಂದುಳಿದವರಿಗೆ ರೂ 1.2 ಕೋಟಿ ವೆಚ್ಚದಲ್ಲಿ ಶಿಷ್ಯವೇತನ ನೀಡಲಾಗುತ್ತಿದೆ. ಆದರೆ ಸಂಪನ್ಮೂಲ ಸಂಗ್ರಹಣೆಗೆ ಏನು ಮಾಡುವುದು. ನೀವು ಸಂಗ್ರಹಿಸಿ ಕೊಡುತ್ತೀರಾ’ ಎಂದರು.ಈ ಕುರಿತು ಉತ್ತರಿಸಿದ ಮಾನೆ ‘ನನ್ನ ಕೈಯಿಂದ ಸಾಧ್ಯವಾದಷ್ಟು ಸಂಗ್ರಹಿಸಿಕೊಡುತ್ತೇನೆ’ ಎಂದರು. ಸದಸ್ಯರಾದ ಕರಣ್‌ಕುಮಾರ್, ಸಂಜೀವ್ ಹಾಗೂ ಜ್ಯೋತಿ ಅವರು, ನಮ್ಮಿಂದಲೂ ಸಾಧ್ಯವಾದಷ್ಟು ಸಂಗ್ರಹಿಸಿಕೊಡುತ್ತೇವೆ ಎಂದರು.ಶ್ರೀನಿವಾಸ್‌ರಾವ್ ಅವರ ನೇತೃತ್ವದಲ್ಲಿ ಉದ್ಯಮಿಗಳಿಂದ    ಸಂಪನ್ಮೂಲ ಸಂಗ್ರಹಿಸಲು ಉಪಸಮಿತಿ ರಚಿಸಲು ಪ್ರಭುದೇವ್, ಕುಲಸಚಿವರಿಗೆ ನಿರ್ದೇಶನ ನೀಡಿದರು. ಕನಿಷ್ಠ ಮೂಲಸೌಕರ್ಯ ಹೊಂದಿರದ ಹಿನ್ನೆಲೆಯಲ್ಲಿ ನಗರದ 14 ಕಾಲೇಜುಗಳ      ಸಂಯೋಜನೆ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಕಳೆದ 25 ವರ್ಷಗಳಿಂದ ಪಿಎಚ್.ಡಿ ಮಾಡುತ್ತಿರುವ 35 ವಿದ್ಯಾರ್ಥಿಗಳು ಇನ್ನೂ ಅವಧಿಯನ್ನು ನವೀಕರಿಸುವಂತೆ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು. ಈಚೆಗೆ ನಿಧನರಾದ ವಿ.ವಿ.ಯ ನಿವೃತ್ತ ಕುಲಸಚಿವ ಸಂಜಯ್ ವೀರಸಿಂಗ್ ಅವರ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry