ಭಾನುವಾರ, ಡಿಸೆಂಬರ್ 8, 2019
21 °C

ಚೆಕ್ ಬರೆಯುವ ಮುನ್ನ...

Published:
Updated:
ಚೆಕ್ ಬರೆಯುವ ಮುನ್ನ...

ಸರಕು ಅಥವಾ ಸೇವೆಗಳ ವಿನಿಮಯಕ್ಕೆ ಹಣ ಒಂದು ಪ್ರಮುಖ, ಪ್ರಭಾವಿ ಮತ್ತು ಅಷ್ಟೇ ಅವಶ್ಯಕ ಮಾಧ್ಯಮ. ಪುರಾತನ ಕಾಲದಲ್ಲಿ ವಿನಿಮಯ ಪದ್ಧತಿ (ಬಾರ್ಟರ್ ಸಿಸ್ಟಮ್) ಅನುಸರಿಸುತ್ತಿದ್ದರು. ಕಾಲ ಗತಿಸಿದಂತೆ ಚಿನ್ನ ಬೆಳ್ಳಿ ಮುಂತಾದ ಲೋಹದ ನಾಣ್ಯಗಳ ಬಳಕೆ ಆರಂಭವಾಯಿತು. ತರುವಾಯ ಕಾಗದದ ಕರೆನ್ಸಿಗಳು ಚಲಾವಣೆಗೆ ಬಂದವು.ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಮನಿ  ಅಂದರೆ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಬಳಕೆ ಸರ್ವೇ ಸಾಮಾನ್ಯವಾಯಿತು. ಇಂದು ಸಾಮಾನ್ಯ ಜನರಿಗೂ ಇದರ ಬಳಕೆ ತಿಳಿದಿದೆ.ಇಂದಿನ ಆಧುನಿಕ ಸಮಾಜದಲ್ಲಿ ಬ್ಯಾಂಕಿಂಗ್ ಸೇವೆ ಬಳಸಿಕೊಳ್ಳದ ವ್ಯಾಪಾರ ವ್ಯವಹಾರಗಳನ್ನು ಊಹಿಸಿಕೊಳ್ಳುವುದೂ ಕಷ್ಟ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಚೆಕ್‌ಗಳದ್ದು ಪ್ರಮುಖ ಪಾತ್ರ. ದೊಡ್ಡ ದೊಡ್ಡ ಮೊತ್ತದ ಬಹುಪಾಲು ವ್ಯವಹಾರಗಳು ನಡೆಯುವುದು ಚೆಕ್‌ಗಳ ಮೂಲಕವೇ.

 

ಈ ಚೆಕ್‌ಗಳ ಬಳಕೆ ಸಾಮಾನ್ಯ ಜನರಿಗೂ  ತಿಳಿದಿರುವ  ಸಂದರ್ಭದಲ್ಲಿಯೂ ವಿದ್ಯಾವಂತರೂ, ಶಿಕ್ಷಿತರೂ ಕೆಲವೊಮ್ಮೆ  ಚೆಕ್‌ನಲ್ಲಿ ಮಾಹಿತಿಯನ್ನು ಸರಿಯಾಗಿ ಬರೆಯಲು, ಬರೆದಂತಹ ಚೆಕ್ಕಿನ ಜೊತೆ ಚಲನ್ ಲಗ್ಗತ್ತಿಸಿ ವ್ಯವಹರಿಸಲು ಬರದೆ ಬ್ಯಾಂಕ್‌ಗಳಲ್ಲಿ ಹೆಣಗಾಡುವುದನ್ನು ನಾವು ಆಗಾಗ ಕಾಣುತ್ತಿರುತ್ತೇವೆ.ಚೆಕ್ ಸೌಲಭ್ಯ ಪಡೆಯಲು ಸಾಮಾನ್ಯವಾಗಿ ನಮ್ಮ ಖಾತೆಯಲ್ಲಿ ್ಙ 1,000 ಕನಿಷ್ಠ ಶುಲ್ಕ ಯಾವಾಗಲು ಕಾಯ್ದುಕೊಳ್ಳಬೇಕು (ಮಿನಿಮಮ್ ಬ್ಯಾಲನ್ಸ್). ಚೆಕ್ ಅನ್ನು ಬಳಸುವವರು ಬಹುಮುಖ್ಯವಾಗಿ ನಾಲ್ಕು ಸಂಗತಿಗಳ ಬಗ್ಗೆ ಗಮನ ಕೊಡುವುದು ಅವಶ್ಯಕ. ಸ್ಪಷ್ಟ ದಿನಾಂಕ, ಹಣ ಪಡೆಯಬೇಕಾದವರ ಮಾಹಿತಿ, ಹಣದ ಮೌಲ್ಯ ಅಕ್ಷರ ಮತ್ತು ಅಂಕಿಗಳಲ್ಲಿ ಹಾಗು ಸಹಿ.ಚೆಕ್‌ನ ಬಲ ಮೇಲ್ತುದಿಯಲ್ಲಿ ದಿನಾಂಕ ಸ್ಪಷ್ಟವಾಗಿ ನಮೂದಿಸಬೇಕು, ನಮೂದಿಸಿದ ದಿನಾಂಕದಂದು ಸಂಬಂಧಿಸಿದ ಖಾತೆಯಲ್ಲಿ ನಿಗದಿತ ಶುಲ್ಕು ಇರುವಂತೆ ನೋಡಿಕೊಳ್ಳಬೇಕು. ಹಣ ಪಡೆಯಬೇಕಾದವರ ಪೂರ್ಣ ಹೆಸರನ್ನು ಸ್ಪಷ್ಟವಾಗಿ ಪೇ.. ಎಂಬ ಇಂಗ್ಲಿಷ್ ಅಕ್ಷರದ ಮುಂದಿರುವ ಗೆರೆಯಲ್ಲಿ ಬರೆಯಬೇಕು. ಹಣ ಪಡೆಯಬೇಕಾದವರ ಹೆಸರಿನ ಜೊತೆಗೆ ಖಾತೆ ಸಂಖ್ಯೆಯನ್ನೂ ಬರೆದರೆ ಉತ್ತಮ. ನಂತರದ ಸ್ಥಾನದಲ್ಲಿ ಹಣದ ಮೌಲ್ಯವನ್ನು ಅಕ್ಷರಗಳಲ್ಲಿಯೂ ಚೌಕದಲ್ಲಿ ಸಂಖ್ಯೆಗಳಲ್ಲಿ ಬರೆದು ಕ್ರಮವಾಗಿ ಮಾತ್ರ (ಟ್ಞ್ಝ) ಮತ್ತು /- ಚಿಹ್ನೆ   ತಪ್ಪದೇ ಬರೆಯಬೇಕು. ಉದಾ: ರೂಪಾಯಿ ಒಂದು ಲಕ್ಷ ಮಾತ್ರ. ರೂ 1,00,000/- `ಮಾತ್ರ~ ಎಂದು ಬರೆಯದೇ ಹೋದಲ್ಲಿ ಒಂದು ಲಕ್ಷವನ್ನು ಒಂದು ಲಕ್ಷದ ಐವತ್ತು ಸಾವಿರ, ತೊಂಬತ್ತು ಸಾವಿರ ಮುಂತಾಗಿ ತಿರುಚುವ ಸಂಭವವಿರುತ್ತದೆ. ಆದ್ದರಿಂದ ಮಾತ್ರ ಎಂದು ಬರೆಯುವುದು ಕಡ್ಡಾಯ./- ಚಿಹ್ನೆ ಯೂ ತಿರುಚುವಿಕೆಯನ್ನು ತಡೆಯುವ ಸಲುವಾಗಿಯೇ. ಚೆಕ್ಕಿನ ಎಡ ಮೇಲ್ತುದಿಯಲ್ಲಿ ಎರಡು ಸಮಾನಾಂತರ ಗೆರೆ ಎಳೆದು ಅದರ ಮಧ್ಯದಲ್ಲಿ `ಅಕೌಂಟ್ ಪೇ ಓನ್ಲಿ~ ಎಂದು ಬರೆದರೆ ಅದು ಕೇವಲ ಖಾತೆಗಳಿಗೆ ಮಾತ್ರ ಜಮೆ ಮಾಡುವಂತೆ ತಿಳಿಸಿದಂತೆ.ಬರೀ ಎರಡು ಸಮಾನಾಂತರ ಗೆರೆ ಎಳೆದರೂ ಸಾಕು ಅದೇ ಅರ್ಥವನ್ನು ಸೂಚಿಸುತ್ತದೆ. ಒಂದು ವೇಳೆ ಯಾವುದೇ ಗೆರೆಯನ್ನು ಬರೆಯದೆ ಖಾಲಿ ಬಿಟ್ಟರೆ ಅದನ್ನು ಓಪನ್ ಅಥವಾ ಸೆಲ್ಫ್ ಚೆಕ್ ಎನ್ನಲಾಗುತ್ತದೆ. ಇಂತಹ ಚೆಕ್‌ಗಳಲ್ಲಿ ಸಾಮಾನ್ಯವಾಗಿ ಹೆಸರು ಅಥವಾ ಸೆಲ್ಫ್ ಎಂದು ನಮೂದಿಸಲಾಗುತ್ತದೆ. ಇವುಗಳನ್ನು ತಕ್ಷಣ ನಗದೀಕರಿಸಿಕೊಳ್ಳಬಹುದು. ಈ ಎಲ್ಲ ವಿವರಗಳನ್ನು ದೃಢೀಕರಿಸಲು ಖಾತೆದಾರನ ನಿಖರ ಸಹಿ ಅತ್ಯಗತ್ಯ. ಚೆಕ್‌ನ ಹಿಂಬದಿಯಲ್ಲಿ ದೂರವಾಣಿ ಸಂಖ್ಯೆ ಬರೆಯುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯ ಅಭ್ಯಾಸ.ಒಂದು ವೇಳೆ ಡಿ.ಡಿ, ಪೇ ಆರ್ಡರ್, ಎನ್.ಇ.ಎ್.ಟಿ ಮುಂತಾದವುಗಳಿಗೆ ಚೆಕ್ ಅನ್ನು ಬಳಸುವುದಾದರೆ ಯುವರ್ ಸೆಲ್ಫ ಎಂದು ಬರೆಯುವುದು ವಾಡಿಕೆ. ಮೇಲಿನ ಎಲ್ಲ ಮಾಹಿತಿಗಳನ್ನು ನಿಖರವಾಗಿ ನಮೂದಿಸಿದ್ದೇ ಆದಲ್ಲಿ ಚೆಕ್ ಕೊಟ್ಟ ದಿನದಂದೇ ವರ್ಗಾವಣೆ/ ನಗದಾಗುತ್ತದೆ. ಬೇರೆ ಬ್ಯಾಂಕಿನ ಚೆಕ್ ಆದರೆ ಮೂರು ಕೆಲಸದ ದಿನಗಳಲ್ಲಿ ಸಂಬಂಧಿಸಿದ ಖಾತೆದಾರನಿಗೆ ಜಮಾ ಆಗುತ್ತದೆ.ಹಣ ವರ್ಗಾವಣೆಗೆ ಎನ್‌ಇಎಫ್‌ಟಿ/ಆರ್‌ಟಿಜಿಎಸ್ ಮುಂತಾದ ತ್ವರಿತಗತಿ ಆಧುನಿಕ ಸೌಲಭ್ಯಗಳಿದ್ದರೂ  ಸಹ, ಭಾರತದಂತ ದೇಶಗಳಲ್ಲಿ ಚೆಕ್‌ಗಳು ತಮ್ಮದೇ ಆದ ಮಹತ್ವ ಹೊಂದಿವೆ. ಆದುದರಿಂದ ಚೆಕ್ ಕ್ಲಿಯರಿಂಗ್ ಸೈಕಲ್ ಅನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್, ಚೆಕ್ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಸಾರ್ವತ್ರಿಕವಾಗಿ ಜಾರಿಗೆ ತರುತ್ತಿದೆ.ಈ ಸೌಲಭ್ಯವನ್ನು ಆರಂಭಿಕವಾಗಿ ದೆಹಲಿಯಲ್ಲಿ 1 ಫೆಬ್ರುವರಿ 2008 ರಂದು ಜಾರಿಗೆ ತರಲಾಯಿತು. ಇದರ ಯಶಸ್ಸಿನಿಂದ ಉತ್ತೇಜಿತರಾಗಿ ಈ ವ್ಯವಸ್ಥೆಯನ್ನ ದೇಶದಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 1, 2012 ರಿಂದ ಸಿ.ಟಿ.ಎಸ್-2010 ಮಾದರಿಯ ಚೆಕ್ಕುಗಳನ್ನೇ ವಿಸ್ತರಿಸಬೇಕು  ಎಂದು ಬ್ಯಾಂಕುಗಳಿಗೆ `ಆರ್‌ಬಿಐ~ ನಿರ್ದೇಶಿಸಿದೆ.ಗ್ರಾಹಕರಿಂದ ಸಂದಾಯವಾದ ಚೆಕ್‌ಅನ್ನು ಇತ್ಯರ್ಥಗೊಳಿಸಲು ಬ್ಯಾಂಕ್‌ನಿಂದ ಬ್ಯಾಂಕಿಗೆ ಅಥವಾ ತೀರುವಳಿ ಶಾಖೆಗಳಿಗೆ ಭೌತಿಕವಾಗಿ ಸಾಗಿಸುವ ಬದಲು ಚೆಕ್ ಅನ್ನು ಸ್ಕ್ಯಾನ್ ಮಾಡಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರೊಸೆಸ್ ಮಾಡಿ ಇತ್ಯರ್ಥ ಗೊಳಿಸುವುದೇ ಈ ಚೆಕ್ ಟ್ರಂಕೇಶನ್ ಸಿಸ್ಟಮ್. ಸಿಟಿಎಸ್ 2010 ಮಾದರಿಯ ಚೆಕ್‌ಗಳು ದೇಶದಾದ್ಯಂತ ಏಕರೂಪವಾಗಿರುತ್ತವೆ. ಸಿಟಿಎಸ್ ವ್ಯವಸ್ಥೆಯಿಂದ ಚೆಕ್‌ಗಳು ಬೇಗನೆ ಇತ್ಯರ್ಥಗೊಳ್ಳುತ್ತವೆ.  ಭೌತಿಕವಾಗಿ ಚೆಕ್ ಅನ್ನು ಸಾಗಿಸದ ಕಾರಣ ಸಾಗಣೆ ವೆಚ್ಚವೂ ಉಳಿತಾಯವಾಗುತ್ತದೆ. ಚೆಕ್ ಪ್ರೊಸೆಸಿಂಗ್ ಸಂದರ್ಭದಲ್ಲಿ ಸಂಭವಿಸಬಹುದಾದ ಮಾನವ ತಪ್ಪುಗಳು ಇಲ್ಲಿ ಆಗುವುದಿಲ್ಲ. ಗ್ರಾಹಕರಿಗೆ ತಮ್ಮ ಚೆಕ್‌ಗಳು ಕಳೆದುಹೋಗಬಹುದೆಂಬ ಭಯವೂ ಇರುವುದಿಲ್ಲ. ಒಟ್ಟಾರೆ ಇಂದು ಚೆಕ್‌ಗಳು ಗ್ರಾಹಕ ಸ್ನೇಹಿಯಾಗಿ ಕೋಟ್ಯಂತರ ರೂಪಾಯಿಗಳ ವ್ಯವಹಾರಗಳಿಗೆ ಸಾಕ್ಷಿಯಾಗುತ್ತಿರುವುದಂತೂ ದಿಟ. ಮುಂದಿನ ಬಾರಿ ನೀವು ಬ್ಯಾಂಕ್‌ಗಳಿಗೆ ಹೋದಾಗ ತಡವರಿಸದೇ ಚೆಕ್, ಚಲನ್‌ಗಳಲ್ಲಿ ವಿವರಗಳನ್ನು ಸುಲಲಿತವಾಗಿ ತುಂಬಿ. ನಿಮ್ಮದೇ ಸ್ವಂತ ಪೆನ್ನಿನಲ್ಲಿ!

ಪ್ರತಿಕ್ರಿಯಿಸಿ (+)