ಗುರುವಾರ , ನವೆಂಬರ್ 21, 2019
21 °C

ಚೆಟ್ರಿಗೆ ಕೊನೆಗೂ ಸಿಕ್ಕಿದ ವೀಸಾ

Published:
Updated:

ನವದೆಹಲಿ (ಪಿಟಿಐ): ಭಾರತೀಯ ಪುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಚರ್ಚಿಲ್ ಬ್ರದರ್ಸ್ ತಂಡದ ಮುಖ್ಯಸ್ಥ ಚರ್ಚಿಲ್ ಅಲೆಮಾವೋ ಮತ್ತು ಆಟಗಾರ ಅಫ್ಘಾನಿಸ್ತಾನದ ಬಲಾಲ್ ಅರೆಜೌ ಅವರಿಗೆ ಮುಂಬೈನಲ್ಲಿರುವ ಸಿಂಗಪುರ ರಾಯಭಾರಿ ಕಚೇರಿ ಸೋಮವಾರ ವೀಸಾ ನೀಡಿತು.ಏಪ್ರಿಲ್ 10ರಂದು ಸಿಂಗಪುರದಲ್ಲಿ ನಡೆಯಲಿರುವ ಎಎಫ್‌ಸಿ ಕಪ್ ಟೂರ್ನಿಯ `ಡಿ' ಗುಂಪಿನ ಪಂದ್ಯದಲ್ಲಿ ಚರ್ಚಿಲ್ ಬ್ರದರ್ಸ್ ತಂಡವು ಸಿಂಗಪುರ ವಾರಿಯರ್ಸ್ ತಂಡದ ವಿರುದ್ಧ ಣಸಲಿದೆ. ಈ ಪಂದ್ಯದಲ್ಲಿ ಭಾಗವಹಿಸಲು ವೀಸಾ ಕೋರಿ ಮೂವರೂ ಅರ್ಜಿ ಸಲ್ಲಿಸಿದ್ದರು. ಆದರೆ, ಮುಂಬೈನಲ್ಲಿರುವ ಸಿಂಗಪುರ ರಾಯಭಾರಿ ಕಚೇರಿ ಶುಕ್ರವಾರ ಯಾವುದೇ ಕಾರಣ ನೀಡದೇ ಮೂವರಿಗೂ ವೀಸಾ ನಿರಾಕರಿಸಿತ್ತು.ಈ ಬಗ್ಗೆ ಭಾರತೀಯ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಮತ್ತು ಚರ್ಚಿಲ್ ಬ್ರದರ್ಸ್ ತಂಡ, ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ಕ್ಕೆ ಮಾಹಿತಿ ನೀಡಿತು.ಎಸ್‌ಎಐ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶ ಮಾಡುವಂತೆ ಕೋರಿ ವಿದೇಶಾಂಗ ಸಚಿವಾಲಯದ ಉಪ ಕಾರ್ಯದರ್ಶಿ ಸುಖ್‌ಗೀತ್ ಕೌರ್ ಅವರಿಗೆ ಪತ್ರ ಬರೆದರು. ಅವರು ದೆಹಲಿಯಲ್ಲಿರುವ ಸಿಂಗಪುರ ಹೈಕಮಿಷನ್ ಕಚೇರಿಯನ್ನು ಸಂಪರ್ಕಿಸಿದ ಕೆಲವೇ ಗಂಟೆಗಳಲ್ಲಿ ಮೂವರಿಗೂ ವೀಸಾ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)