ಚೆನ್ನಿಗರಾಮಯ್ಯ ಹೆಸರಲ್ಲಿ ವಿವಿ ಅಧ್ಯಯನ ಪೀಠಕ್ಕಾಗಿ ಒತ್ತಾಯ

7

ಚೆನ್ನಿಗರಾಮಯ್ಯ ಹೆಸರಲ್ಲಿ ವಿವಿ ಅಧ್ಯಯನ ಪೀಠಕ್ಕಾಗಿ ಒತ್ತಾಯ

Published:
Updated:

ಬೆಂಗಳೂರು: ರಾಜ್ಯದ ಮೊದಲ ದಲಿತ ಸಚಿವ ಆರ್.ಚೆನ್ನಿಗರಾಮಯ್ಯ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ  ಪತ್ರ ಬರೆಯಲಾಗುವುದೆಂದು ಆರ್.ಚೆನ್ನಿಗರಾಮಯ್ಯ  ಜನ್ಮಶತಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.ಬುಧವಾರ ಶಾಸಕರ ಭವನದಲ್ಲಿ ನಡೆದ ಸ್ವಾಗತ ಸಮಿತಿ ಸಭೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಚೆನ್ನಿಗರಾಮಯ್ಯ ಅವರು ದಲಿತ ವರ್ಗಕ್ಕೆ ಸೇರಿದ ಮೊದಲ ಸಚಿವರಾಗಿದ್ದರು. ಕೆ.ಸಿ.ರೆಡ್ಡಿ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಅವರ ನೆನಪಿಗಾಗಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಮಿತಿ ನಿರ್ಧರಿಸಿದೆ’ ಎಂದು ಹೇಳಿದರು.ಜೂನ್ 5ರಂದು ಚೆನ್ನಿಗರಾಮಯ್ಯ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅದೇ ದಿನ ಬೆಂಗಳೂರಿನ ಪುರಭವನದಲ್ಲಿ ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಅವರ ಸ್ವಕ್ಷೇತ್ರ ಕೊರಟಗೆರೆ ಮತ್ತು ಜಿಲ್ಲಾ ಕೇಂದ್ರ ತುಮಕೂರಿನಲ್ಲೂ ಸಮಾರಂಭ ನಡೆಸಲಾಗುವುದು. ಈ ಸಂಬಂಧ ವಿಚಾರ ಸಂಕಿರಣವನ್ನೂ ನಡೆಸಲಾಗುವುದು ಎಂದು ವಿವರಿಸಿದರು.ಚೆನ್ನಿಗರಾಮಯ್ಯ ಅವರ ಹೆಸರಿನಲ್ಲಿ ರಾಜ್ಯದ ಒಂದು ವಿಶ್ವವಿದ್ಯಾಲಯದಲ್ಲಿ ದತ್ತಿನಿಧಿ ಸ್ಥಾಪಿಸಲಾಗುವುದು. ಅದರ ಮೂಲಕ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಪುರಸ್ಕಾರ ನೀಡಲಾಗುವುದು. ಅವರ ನೆನಪಿಗಾಗಿ ಪುಸ್ತಕಗಳನ್ನು ಪ್ರಕಟಿಸುವ ಕುರಿತೂ ಚರ್ಚೆ ನಡೆಸಲಾಗಿದೆ ಎಂದರು. ಸಮಿತಿಯ ಸಂಚಾಲಕರಾಗಿರುವ ಮಾಜಿ ಸಚಿವ  ರಾಜವರ್ಧನ್, ಸಮಿತಿಯ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಓ.ಅನಂತರಾಮಯ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry