ಗುರುವಾರ , ಅಕ್ಟೋಬರ್ 17, 2019
21 °C

ಚೆನ್ನೈ ಓಪನ್ ಟೆನಿಸ್: ಎರಡನೇ ಸುತ್ತಿಗೆ ಭಾಂಬ್ರಿ

Published:
Updated:

ಚೆನ್ನೈ: ಅಚ್ಚರಿಯ ಪ್ರದರ್ಶನ ನೀಡಿದ ಭಾರತದ ಯುವ ಆಟಗಾರ ಯೂಕಿ ಭಾಂಬ್ರಿ ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.ಕಿಕ್ಕಿರಿದು ತುಂಬಿದ್ದ ಸೆಂಟರ್ ಕೋರ್ಟ್ ಅಂಗಳದಲ್ಲಿ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ ಪ್ರಭಾವಿ ಪ್ರದರ್ಶನ ನೀಡಿದರು. 6-2, 6-3ರ ನೇರ ಸೆಟ್‌ಗಳಿಂದ ಸ್ಲೊವೇಕಿಯದ ಕರೊಲ್ ಬೆಕ್ ಅವರನ್ನು ಮಣಿಸಿ ಶುಭಾರಂಭ ಮಾಡಿದರು.`ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿದ್ದ ಭಾಂಬ್ರಿ ಕೇವಲ 79 ನಿಮಿಷದಲ್ಲಿ ತಮ್ಮ ಹೋರಾಟವನ್ನು ಕೊನೆಗೊಳಿಸಿ, ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಬೆಕ್ 101 ಹಾಗೂ ಭಾಂಬ್ರಿ 345ನೇ ರ‌್ಯಾಂಕ್ ಹೊಂದಿದ ಆಟಗಾರರು. ಆದರೆ ಇಲ್ಲಿ ತಮಗಿಂತ ಉತ್ತಮ ಸ್ಥಾನದಲ್ಲಿದ್ದ ಬೆಕ್‌ಗೆ ಭಾರತದ ಆಟಗಾರ ಆಘಾತ ನೀಡಿದ.ಪ್ರಧಾನ ಹಂತಕ್ಕೆ ಸುಗಿತಾ: ಸೋಮವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಯುಯಿಚಿ ಸುಗಿತಾ 7-6, 6-1ರಲ್ಲಿ ರಷ್ಯಾದ ರಿಕ್ ಡೇ ವೋಸ್ಟ್ ಅವರನ್ನು ಮಣಿಸಿ ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟರು. ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಕೆನಡಾದ ವಾಸೆಕ್ ಪೊಸ್ಪಿಸಿಲ್ 6-1, 6-7, 6-3ರಲ್ಲಿ ಅಮೆರಿಕದ ರಾಜೀವ್ ರಾಮ್ ಮೇಲೂ, ಹಾಲೆಂಡ್‌ನ ಥೈಮೊ ಬಕ್ಕರ್ 6-2, 6-4ನೇರ ಸೆಟ್‌ಗಳಿಂದ ರಷ್ಯಾದ ಇಜಾಕ್ ವಾನ್ ಡೇರ್ ಮೇರ್ವೆ ವಿರುದ್ಧವೂ ಗೆಲುವು ಪಡೆದು ಪ್ರಧಾನ ಹಂತ ಪ್ರವೇಶಿಸಿದರು.ಹಿಂದೆ ಸರಿದ ಸೋಮದೇವ್: ಭುಜದ ನೋವಿನ ಸಮಸ್ಯೆ ಎದುರಿಸುತ್ತಿರುವ ಸೋಮದೇವ್ ದೇವವರ್ಮನ್ ಚೆನ್ನೈ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.`ನೋವಿನ ಕಾರಣ ಈ ಟೂರ್ನಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಆಡುತ್ತಿರುವ ಎಲ್ಲಾ ಸ್ಪರ್ಧಿಗಳಿಗೆ ಶುಭವಾಗಲಿ~ ಎಂದು ಅವರು ಹಾರೈಸಿದ್ದಾರೆ.

Post Comments (+)