ಚೆನ್ನೈ: ಹಾಡ ಹಗಲೇ ಬ್ಯಾಂಕ್ ದರೋಡೆ ಪ್ರಕರಣ

7

ಚೆನ್ನೈ: ಹಾಡ ಹಗಲೇ ಬ್ಯಾಂಕ್ ದರೋಡೆ ಪ್ರಕರಣ

Published:
Updated:

ಚೆನ್ನೈ: ಇತ್ತೀಚೆಗೆ ನಗರದಲ್ಲಿ ಹಾಡಹಗಲೇ ನಡೆದಿದ್ದ ಎರಡು ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ನಂಬಲಾದ ಐವರು ಯುವಕರನ್ನು ಪೊಲೀಸರು ಗುರುವಾರ ನಸುಕಿನಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.  ಬ್ಯಾಂಕ್ ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಶಂಕಿತ ದರೋಡೆಕೋರರ ವಿಡಿಯೊ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ 12 ಗಂಟೆಗಳ ಅವಧಿಯ ಒಳಗಾಗಿ ಪೊಲೀಸರು ಈ ಎನ್‌ಕೌಂಟರ್ ನಡೆಸಿದ್ದಾರೆ.ಜನದಟ್ಟಣೆಯ ಪ್ರದೇಶವಾದ ವೆಲ್ಲಚೇರಿಯ ಮನೆಯೊಂದರಲ್ಲಿದ್ದ ಶಂಕಿತ ಆರೋಪಿಗಳು ಶರಣಾಗಲು ನಿರಾಕರಿಸಿ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದಾಗ ಪ್ರತಿ ದಾಳಿ ನಡೆಸಬೇಕಾಯಿತು ಎಂದು ಪೊಲೀಸ್ ಕಮಿಷನರ್ ಜೆ.ಕೆ. ತ್ರಿಪಾಠಿ ಹೇಳಿದ್ದಾರೆ.ಘಟನೆಯಲ್ಲಿ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಸ್ಥಳದಲ್ಲಿ ಕಂಡು ಬಂದಿರುವ ಮತದಾರರ ಚೀಟಿ, ಚಾಲನಾ ಪರವಾನಗಿಗಳಿಂದ ಮೃತಪಟ್ಟವರ ಗುರುತು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.ಐವರಲ್ಲಿ ನಾಲ್ವರು ಬಿಹಾರದವರಾಗಿದ್ದು, ಒಬ್ಬ ಪಶ್ಚಿಮ ಬಂಗಾಳದವನಾಗಿದ್ದಾನೆ. ಶಂಕಿತರಿದ್ದ ಮನೆಯಿಂದ ಐದು ಪಿಸ್ತೂಲ್, ಎರಡು ರಿವಾಲ್ವರ್, ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದರ ಹೊರತಾಗಿ 14 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.

ಶಂಕಿತರು ವೆಲ್ಲಚೇರಿ ಪ್ರದೇಶದ ಮನೆಯೊಂದರಲ್ಲಿ ಇರುವ ಕುರಿತಂತೆ ದೊರಕಿದ್ದ ಖಚಿತ ಸುಳಿವಿನ ಮೇರೆಗೆ ಪೊಲೀಸ್ ಸಿಬ್ಬಂದಿ ಗುರುವಾರ ನಸುಕಿನ ಜಾವ 1 ಗಂಟೆಯ ಸುಮಾರಿಗೆ ಆ ಮನೆ ಮೇಲೆ ದಾಳಿ ಮಾಡಿದರು.`ಪದೇ ಪದೇ ಶರಣಾಗುವಂತೆ ಸೂಚಿಸಿದರೂ ಕೇಳದ ಶಂಕಿತರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಸ್ವಯಂ ರಕ್ಷಣೆಗಾಗಿ ಮತ್ತು ಆ ಪ್ರದೇಶದ ಜನರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಪ್ರತಿ ದಾಳಿ ನಡೆಸಬೇಕಾಯಿತು~ ಎಂದು ತ್ರಿಪಾಠಿ ತಿಳಿಸಿದ್ದಾರೆ.`ಈ ದರೋಡೆ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿತ್ತು~ ಎಂದು ಅವರು ಹೇಳಿದ್ದಾರೆ.ಜನವರಿ 23 ಮತ್ತು ಫೆಬ್ರುವರಿ 21ರಂದು ಚೆನ್ನೈನಲ್ಲಿ ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಿಂದ ತಲಾ 19 ಮತ್ತು 14 ಲಕ್ಷ ರೂಪಾಯಿಗಳನ್ನು ಹಾಡಹಗಲೇ ದರೋಡೆ ಮಾಡಲಾಗಿತ್ತು.

ಈ ಪ್ರಕರಣವನ್ನು ಭೇದಿಸಲು ಪೊಲೀಸ್ ಇಲಾಖೆ 30 ವಿಶೇಷ ತನಿಖಾ ತಂಡಗಳನ್ನು ರಚಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry