ಭಾನುವಾರ, ನವೆಂಬರ್ 17, 2019
29 °C

ಚೆಲುವಿನ ಚೇಲಾವರ

Published:
Updated:

ಮಳೆಗಾಲದಲ್ಲಿ ಮೈದುಂಬಿ ಜಲಧಾರೆಯಾಗಿ ಭೋರ್ಗರೆಯುವ ಚೇಲಾವರ ಜಲಪಾತಗಳು ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನಪಡೆದಿದೆ. ಮಳೆಗಾಲದ ದಿನಗಳಲ್ಲಿ ಈ ಜಲಪಾತದ ಚೆಲುವು ಮನಮೋಹಕ.ಸೊಗಸಾದ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ರಜಾದಿನಗಳಲ್ಲಿ ಪ್ರವಾಸಿಗರು ಜಲಪಾತದ ನಯನಮನೋಹರ ದೃಶ್ಯದ ಸೊಬಗನ್ನು ಸವಿದು ಸಂತಸ ಪಡುತ್ತಾರೆ.ಕೊಡಗು ಜಿಲ್ಲೆಯ ನರಿಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿರುವ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿವೆ. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ. ಈಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತವೆ. ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕಾವೇರಿ ನದಿ ಉಗಮಿಸಿದರೆ ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನ ನದಿಗಳು ಹರಿದುಬರುತ್ತವೆ. ಈ ಎರಡು ನದಿಗಳು ವಿರಾಜಪೇಟೆ ತಾಲ್ಲೂಕಿನ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತಗಳಾಗಿ ಧುಮುಕುತ್ತವೆ. ಹಾಗೆಯೇ ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ.ಮಳೆಗಾಲದಲ್ಲಿ ತಮ್ಮ ವೈಭವವನ್ನು ಮೆರೆಯುವ ಕೊಡಗಿನ ಜಲಪಾತಗಳಲ್ಲಿ ಚೇಲಾವರ ಜಲಪಾತಗಳಿಗೆ ವಿಶೇಷ ಆಕರ್ಷಣೆ. ಮಡಿಕೇರಿ ತಾಲೂಕಿನ ನಾಪೋಕ್ಲುವಿನಿಂದ ಸುಮರು 16 ಕಿ.ಮೀ. ದೂರ ಸಾಗಿದರೆ ನಿಸರ್ಗದ ನಡುವಿನ ಅಪೂರ್ವ ಜಲಧಾರೆಗಳ ದರ್ಶನ ಭಾಗ್ಯ ದೊರೆಯುತ್ತದೆ.ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಚೇಲಾವರದ ಪ್ರಮುಖ ಜಲಪಾತ ಏಮೆಪಾರೆ ಜಲಪಾತ. ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ಜಲಪಾತ ನಯನಮನೋಹರ. ಜಲಪಾತದತ್ತ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕಪ್ಪು ಬಂಡೆಯ ಮೇಲಿಂದ ಭೋರ್ಗರೆಯುತ್ತಾ ಧುಮುಕುವ ರಮಣೀಯವಾದ ಸೋಮನ ನದಿಯ ಜಲಪಾತದ ದರ್ಶನವಾಗುತ್ತದೆ.ಸ್ಥಳೀಯ ಜನರು ಈ ಜಲಪಾತವನ್ನು ಏಮೆಪಾರೆ ಎಂದು ಕರೆಯುತ್ತಾರೆ. ಎಡಬದಿಯಲ್ಲಿರುವ ಕಾಫಿಯ ತೋಟಗಳ ನಡುವೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದು. ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಧುಮುಕುವಾಗ ಈ ಕಾನನ ಬೆಡಗಿಯ ಸೌಂದರ್ಯ ವರ್ಣನಾತೀತ. ಸುಮಾರು 100 ಅಡಿ ಎತ್ತರದಿಂದ ಧುಮುಕುವ ಜಲಧಾರೆ ಶ್ವೇತ ವೈಭವದಿಂದ ಕಂಗೊಳಿಸುತ್ತದೆ.

 

ಅಲ್ಲಿನ ಅಹ್ಲಾದಕರ ಧೂಮದ ಮೇಳದ ನೋಟದಲ್ಲೇ ತಲ್ಲೆನರಾಗಿರುವಾಗ ಮಂಜಿನಂತೆ ತೇಲಿ ಬರುವ ನೀರ ಹನಿಗಳು ಮೈಮನವನ್ನು ಸ್ಪರ್ಶಿಸಿ ಹಿತಕರ ಅನುಭವವನ್ನುಂಟು ಮಾಡುತ್ತದೆ. ಆನತಿ ದೂರದಲ್ಲಿ ಮತ್ತೊಂದು ಜಲಪಾತವಿದೆ. ಇದಕ್ಕೆ ಬಲಿಯಟ್ರ ಜಲಪಾತ ಎಂದು ಹೆಸರು.ಸುಮಾರು 50 ಅಡಿಗಳಷ್ಟು ಎತ್ತರದಿಂದ ಮೂರು ಹಂತಗಳಲ್ಲಿ ಬಲಿಯಟ್ರ ಜಲಪಾತ ಧುಮುಕುತ್ತದೆ. ಹರಿವ ಜಲಧಾರೆಯಿಂದಾಗಿ ಸದಾ ತಂಪು ಇರುವ ತೋಟಗಳಲ್ಲಿನ ಜಿಗಣೆಗಳ ಚಿಂತೆ ನಿಮಗಿಲ್ಲವಾದರೆ ಆರಾಮವಾಗಿ, ಸಂತೋಷದಿಂದ ಜಲಧಾರೆಗಳ ಸೊಬಗು ಸವಿಯಬಹುದು.

 

ಪ್ರತಿಕ್ರಿಯಿಸಿ (+)