ಚೆಸ್: ಅಗ್ರಸ್ಥಾನಲ್ಲಿ ಕುನಾಲ್

7

ಚೆಸ್: ಅಗ್ರಸ್ಥಾನಲ್ಲಿ ಕುನಾಲ್

Published:
Updated:

ಮಂಗಳೂರು: ಬುಧವಾರ ಅನಿರೀಕ್ಷಿತ ಫಲಿತಾಂಶಗಳಿಂದ ಮತ್ತು ಗುರುವಾರ ಬೆಳಿಗ್ಗೆ ಡ್ರಾ ಸರಣಿಯಿಂದ ಹಿನ್ನಡೆ ಅನುಭವಿಸಿದ್ದ ಪ್ರಮುಖ ಆಟಗಾರರು ಮಧ್ಯಾಹ್ನ ಆರನೇ ಸುತ್ತಿನಲ್ಲಿ ಚೇತರಿಸಿಕೊಂಡರು. 3ನೇ ಯುಕೆಇಸಿ ಕಪ್ ಅಖಿಲ ಭಾರತ ಫಿಡೆ ರೇಟೆಡ್ ಓಪನ್ ಚೆಸ್ ಟೂರ್ನಿಯ ಆರನೇ ಸುತ್ತಿನ ನಂತರ ತಮಿಳುನಾಡಿನ ಎಂ.ಕುನಾಲ್ ಐದೂವರೆ ಪಾಯಿಂಟ್ ಸಂಗ್ರಹಿಸಿ ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು.ನಗರದ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಗುರುವಾರದ ಕೊನೆಗೆ 9 ಮಂದಿ ಆಟಗಾರರು ತಲಾ ಐದು ಪಾಯಿಂಟ್‌ಗಳೊಡನೆ ಎರಡನೇ ಸ್ಥಾನದಲ್ಲಿದ್ದಾರೆ. ನೈರುತ್ಯ ರೈಲ್ವೆಯ ಐಎಂ ಎಂ.ಎಸ್.ತೇಜಕುಮಾರ್, ಕೊಡಗಿನ ಎ.ಆಗಸ್ಟಿನ್ ಇವರಲ್ಲಿ ಒಳಗೊಂಡಿದ್ದಾರೆ.ಮೊದಲ ಬೋರ್ಡ್‌ನಲ್ಲಿ ಹಿಮಾಂಶು ಶರ್ಮ (5 ಪಾಯಿಂಟ್) 68 ನಡೆಗಳಲ್ಲಿ ಐಎಂ ನಿತಿನ್ (5) ಜತೆ ಡ್ರಾ ಸಾಧಿಸಿದರೆ, ಕುನಾಲ್ ಎಂ. (5.5), ಮಹಾರಾಷ್ಟ್ರದ ಚಿನ್ಮಯ್ ಕುಲಕರ್ಣಿ (4.5) ವಿರುದ್ಧ ಜಯ ಪಡೆದರು.  ಮೈಸೂರು ಮೂಲದ ತೇಜಕುಮಾರ್ (5), ಕೇರಳದ ಕೆ.ಎಸ್.ಮಧುಸೂದನ್ ವಿರುದ್ಧ, ಕೆ.ರತ್ನಾಕರನ್ (5), ಆಂಧ್ರದ ಚಕ್ರವರ್ತಿ ರೆಡ್ಡಿ (4) ವಿರುದ್ಧ, ದಿನೇಶ್ ಕುಮಾರ್ (5), ರೋಹನ್ ಅಹುಜಾ (4) ವಿರುದ್ಧ ಡ್ರಾ ಮಾಡಿಕೊಂಡರು. ಆಗಸ್ಟಿನ್ (5)ಗೆ, ಕೇರಳದ ಅರ್ಜುನ್ ಸತೀಶ್ (4) ಶರಣಾದರು.ಡ್ರಾ ಸರಣಿ: ಬೆಳಿಗ್ಗೆ ಐದನೇ ಸುತ್ತಿನಲ್ಲಿ ಐಎಂಗಳಾದ ಹಿಮಾಂಶು ಶರ್ಮ, ಎಸ್.ನಿತಿನ್, ಎಂ.ಎಸ್.ತೇಜಕುಮಾರ್, ದಿನೇಶ್ ಕುಮಾರ್ ಶರ್ಮ, ಶ್ಯಾಮ್ ನಿಖಿಲ್ ಅವರು ತಮಗಿಂತ ಕೆಳ ಕ್ರಮಾಂಕದ ಆಟಗಾರರ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು.

ಬುಧವಾರ ನಾಲ್ಕನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಐಎಂ ಶ್ಯಾಮ್ ನಿಖಿಲ್ (ತಮಿಳುನಾಡು), ಚಿನ್ಮಯ ಕುಲಕರ್ಣಿ (ಮಹಾರಾಷ್ಟ್ರ) ಎದುರು ಸೋಲನುಭವಿಸಿದ್ದರೆ, ಎರಡನೇ ಶ್ರೇಯಾಂಕದ ತೇಜಕುಮಾರ್ ಡ್ರಾ ಮಾಡಿಕೊಂಡಿದ್ದರು. ಮೂರನೇ ಸುತ್ತಿನಲ್ಲಿ ಐಎಂ ರತ್ನಾಕರನ್, ರೋಹನ್ ಅಹುಜಾಗೆ ಮಣಿದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry