ಬುಧವಾರ, ಜೂನ್ 16, 2021
22 °C

ಚೆಸ್ ಏಕಲವ್ಯ!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಚೆಸ್ ಏಕಲವ್ಯ!

ಉತ್ತರ ಕರ್ನಾಟಕದಲ್ಲಿ ಚೆಸ್ ಆಟದ ತರಬೇತಿಯಲ್ಲಿ ತೊಡಗಿರುವ ಹುಬ್ಬಳ್ಳಿ ಚೆಸ್ ಅಕಾಡೆಮಿ ಇದೀಗ ಹತ್ತು ವರ್ಷ ಪೂರೈಸಿದ್ದು, ನೂರಾರು ಮಕ್ಕಳಿಗೆ ಕ್ರೀಡಾ ದೀಕ್ಷೆಯನ್ನು ಕೊಟ್ಟ ಖುಷಿಯಲ್ಲಿದೆ. 15 ವರ್ಷಗಳಿಂದ ಚೆಸ್ ಕ್ರೀಡೆಯಲ್ಲಿ ತೊಡಗಿಸಿಕೊಂಡು, ಅಂತರರಾಷ್ಟ್ರೀಯ ರೇಟಿಂಗ್ ಕೂಡ ಪಡೆದಿರುವ ಕೆ.ವಿ. ಶ್ರೀಪಾದ್ ಈ ಹೆಮ್ಮೆಯ ಸಂಸ್ಥೆ ಕಟ್ಟಿದ ರೂವಾರಿಯಾಗಿದ್ದಾರೆ.ಹುಬ್ಬಳ್ಳಿಯವರೇ ಆದ ಶ್ರೀಪಾದ್ `ಏಕಲವ್ಯ~ನಂತೆ ಚೆಸ್ ಆಟದಲ್ಲಿ ತೊಡಗಿಕೊಂಡವರು. ಈಗ ದ್ರೋಣರಂತೆ ಮಕ್ಕಳಿಗೆ ಚೆಸ್ ಪಾಠ ಹೇಳಿಕೊಡುವ ಹಂತಕ್ಕೆ ಬೆಳೆದಿದ್ದಾರೆ. ಯಾರಿಂದಲೂ ತರಬೇತಿ ಪಡೆಯದೆ ಪತ್ರಿಕೆ ಹಾಗೂ ಪುಸ್ತಕಗಳನ್ನೇ ಆಧಾರವಾಗಿ ಇಟ್ಟುಕೊಂಡು ಬುದ್ಧಿಗೆ ಕಸರತ್ತು ನೀಡುವಂತಹ ಈ ಕ್ರೀಡೆಯ ಒಳಪಟ್ಟುಗಳನ್ನು ಕರಗತ ಮಾಡಿಕೊಂಡವರು ಅವರು.ಆಟದ ತಂತ್ರಗಳ ಕುರಿತಂತೆ ಯಾವ ಸಾಫ್ಟ್‌ವೇರ್‌ಗಳು ಇಲ್ಲದಿದ್ದ ಕಾಲದಲ್ಲಿ ಚೆಸ್ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದ ಈ ಆಟಗಾರ,   `ಡೆಕ್ಕನ್ ಹೆರಾಲ್ಡ್~ ಪತ್ರಿಕೆಯಲ್ಲಿ ಪ್ರಕಟವಾಗುವ ಆಟದ ತಂತ್ರಗಳನ್ನು ಮೈಗೂಡಿಸಿಕೊಂಡು ಬೆಳೆದವರು.`ಡೆಕ್ಕನ್ ಹೆರಾಲ್ಡ್~ನಲ್ಲಿ ಮನಿಷಾ ಮೋಹಿತೆ     ಪ್ರತಿ ವಾರ ಒಂದೊಂದು ಹೊಸ ಸಮಸ್ಯೆಯನ್ನು ಬಿಡಿಸಿ ತೋರುತ್ತಾರೆ. ಅಲ್ಲದೆ, ಇನ್ನೊಂದು ಸಮಸ್ಯೆಯನ್ನು ನಮಗೇ ಪರಿಹರಿಸಲು ಬಿಡುತ್ತಾರೆ. ನನ್ನ ಬೆಳವಣಿಗೆಯಲ್ಲಿ ಈ ಅಂಕಣದ ಪಾತ್ರ ಮಹತ್ವದ್ದಾಗಿದೆ~ ಎಂದು ಅವರು ಹೇಳುತ್ತಾರೆ. ಚೆನ್ನೈನಿಂದ ಪ್ರಕಟವಾಗುವ ಚೆಸ್‌ಗೆ ಮೀಸಲಾದ ಪತ್ರಿಕೆಯನ್ನೂ ಶ್ರೀಪಾದ್ ತರಿಸುತ್ತಿದ್ದರು. ಆ ಪತ್ರಿಕೆಯ ಪಾಠಗಳೂ ನನ್ನನ್ನು ಕೈಹಿಡಿದು ಮುನ್ನಡೆಸಿವೆ ಎಂದು ಹೇಳಲು ಅವರು ಮರೆಯುವುದಿಲ್ಲ.ಮೂರ‌್ನಾಲ್ಕು ವರ್ಷಗಳ ಕಾಲ ಸತತವಾಗಿ ಧಾರವಾಡ ಜಿಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿದ ಅವರು, ರಾಜ್ಯಮಟ್ಟದ ಟೂರ್ನಿಗಳಲ್ಲೂ ಗಮನಾರ್ಹವಾದ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಈ ಚದುರಂಗ ತಜ್ಞನಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು ಬೆಂಗಳೂರಿನಲ್ಲಿ ನಡೆಯುವ ಐಟಿ ಕಂಪೆನಿಗಳ ಚೆಸ್ ಟೂರ್ನಿ. ಎಲ್ಲ ಪ್ರಮುಖ ಐಟಿ ಕಂಪೆನಿಗಳು        ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ ಶ್ರೀಪಾದ್ ಸತತ ನಾಲ್ಕು ವರ್ಷ ಚಾಂಪಿಯನ್ ಆಗಿದ್ದರು.ಹತ್ತು ವರ್ಷಗಳ ಹಿಂದೆ ಈ ಆಟಗಾರ ಹುಟ್ಟುಹಾಕಿದ ಸಂಸ್ಥೆಯೇ ಹುಬ್ಬಳ್ಳಿ ಚೆಸ್ ಅಕಾಡೆಮಿ. ತಮ್ಮ ಸಂಸ್ಥೆಯಿಂದ ಪ್ರತಿವರ್ಷ ಹಲವು ಟೂರ್ನಿಗಳನ್ನು ಸಂಘಟಿಸುತ್ತಾ ಬಂದಿರುವ ಶ್ರೀಪಾದ್, ನೂರಾರು ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದಾರೆ. ರಾಜ್ಯದ ಅಗ್ರ ಶ್ರೇಯಾಂಕದ ಆಟಗಾರರು ಹುಬ್ಬಳ್ಳಿ ಚೆಸ್ ಅಕಾಡೆಮಿ ಆಹ್ವಾನವನ್ನು ಮನ್ನಿಸಿ ಬಂದು ಆಡಿದ್ದಾರೆ.ಶ್ರೀಪಾದ್ ಶಾಲಾ-ಕಾಲೇಜುಗಳಲ್ಲಿ ತರಬೇತಿ ಕಾರ್ಯಾಗಾರಗಳನ್ನೂ ನಡೆಸಿದ್ದಾರೆ. ಅವರ ಗರಡಿಯಲ್ಲಿ ಪಳಗಿದ ಹಲವು ಕಿರಿಯ ಆಟಗಾರರು, 12 ಮತ್ತು 14 ವರ್ಷದೊಳಗಿನವರ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲೂ ಮಿಂಚಿದ್ದಾರೆ. ಪ್ರತಿ ತಿಂಗಳು ಚೆಸ್ ಚಾಂಪಿಯನ್‌ಷಿಪ್ ಸಂಘಟನೆ ಮಾಡುವ ಮೂಲಕ ಈ ಭಾಗದಲ್ಲಿ ಆಟದ ಬೆಳವಣಿಗೆಗೆ ಅಕಾಡೆಮಿ ತನ್ನ ಗಣನೀಯವಾದ ಕೊಡುಗೆ ನೀಡುತ್ತಾ ಬಂದಿದೆ.`ಯಾವುದೇ ಬಾಹ್ಯ ಪ್ರಭಾವವಿಲ್ಲದೆ ಪರಿಶುದ್ಧವಾಗಿ ನಡೆಯುವ ಆಟವೆಂದರೆ ಚೆಸ್ ಮಾತ್ರ. ಈ ಆಟದಲ್ಲಿ ನಮ್ಮ ಬುದ್ಧಿಮತ್ತೆಗೆ ಮಾತ್ರ ಮನ್ನಣೆ. ಮಿಕ್ಕೆಲ್ಲ ವಿಷಯಗಳೂ ಗೌಣ. ಉಳಿದ ಯಾವ ಆಟದಲ್ಲಿ ಇಂತಹ ಶುದ್ಧತೆ ಇದೆ ನೀವೇ ಹೇಳಿ~ ಎಂದು ಶ್ರೀಪಾದ್ ಪ್ರಶ್ನೆ ಹಾಕುತ್ತಾರೆ.`ಒಬ್ಬ ಆಟಗಾರ ಯಶಸ್ವಿ ಚೆಸ್‌ಪಟು ಆಗಬೇಕಾದರೆ, ದೈಹಿಕ ಸದೃಢತೆಯೂ ಅಗತ್ಯ. ಏಕಾಗ್ರತೆ ಇಲ್ಲದಿದ್ದರೆ ಈ ಆಟದಲ್ಲಿ ಯಶಸ್ಸು ಸಾಧ್ಯವಿಲ್ಲ. ದೈಹಿಕವಾಗಿ ಸಮರ್ಥರಾಗಿದ್ದರೆ ಮಾತ್ರ ಏಕಾಗ್ರತೆ ಸಾಧಿಸಲು ಸಾಧ್ಯ~ ಎಂದು ಅವರು ಅಭಿಪ್ರಾಯಪಡುತ್ತಾರೆ.`ಚೆಸ್ ಆಟದಲ್ಲಿ ಮೂಲಭೂತ ಅಂಶಗಳ ಬಗೆಗೆ ತರಬೇತಿ ನೀಡಲಾಗುತ್ತದೆ. ಮೊದಲ 15 ನಡೆಗಳಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಈ ಹಂತದಲ್ಲಿ ಯಾವುದೇ ಕಾರಣಕ್ಕೂ `ಕ್ವೀನ್~ ಅನ್ನು ಸ್ಥಾನಪಲ್ಲಟ ಮಾಡಬಾರದು. ಎದುರಾಳಿಯಿಂದ ನಾವು ಟ್ರ್ಯಾಪ್ ಆಗುವ ಸಂಭವ ಇದ್ದೇ ಇರುತ್ತದೆ~ ಎನ್ನುತ್ತಾರೆ ಅವರು.`ಆಟಗಾರರಿಗೆ ನಾವು ಇಂತಹ ಅಂಶಗಳನ್ನು ಕಲಿಸಿ ಬಲಿಷ್ಠಗೊಳಿಸಬಹುದು. ಪಂದ್ಯ ಬೆಳೆಯುತ್ತಾ ಹೋದಂತೆ ಸನ್ನಿವೇಶಕ್ಕೆ ತಕ್ಕ ತಂತ್ರಗಳನ್ನು ಹೆಣೆಯುವುದು ಆಟಗಾರರದ್ದೇ ಜವಾಬ್ದಾರಿ~ ಎಂದು ಅವರು ವಿವರಿಸುತ್ತಾರೆ.ಹಿರಿಯ ಚೆಸ್ ಆಟಗಾರ ಶಿರಸಿಯ ರಾಮಚಂದ್ರ ಭಟ್ ಅವರ ಸಹಕಾರವನ್ನು ಸ್ಮರಿಸುವ ಶ್ರೀಪಾದ್, ತಮ್ಮ ತಂದೆ ಕೆ.ಎನ್. ವಿಠಲರಾವ್ ನೀಡಿದ ಪ್ರೋತ್ಸಾಹದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿನೀತರಾಗಿ ಹೇಳುತ್ತಾರೆ.ಕೆಲವೇ ದಿನಗಳ ಹಿಂದಷ್ಟೇ ಮಗಳನ್ನು ಪಡೆದು, `ಅಪ್ಪ~ನಾಗಿ ಬಡ್ತಿ ಪಡೆದ ಖುಷಿಯಲ್ಲಿರುವ ಶ್ರೀಪಾದ್, ಉತ್ತರ ಕರ್ನಾಟಕದಲ್ಲಿ ಚೆಸ್ ಆಟವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಅಭಿಲಾಷೆ ಹೊಂದಿದ್ದಾರೆ.  

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.