ಗುರುವಾರ , ಮೇ 19, 2022
20 °C

ಚೆಸ್ ಮಾಸ್ಟರ್ಸ್ ಟೂರ್ನಿ: ಆನಂದ್- ಕಾರ್ಲ್‌ಸನ್ ಪಂದ್ಯ ಡ್ರಾದಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಲ್ಬಾವೊ, ಸ್ಪೇನ್ (ಪಿಟಿಐ): ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಫೈನಲ್ ಚೆಸ್ ಮಾಸ್ಟರ್ಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಜೊತೆ ಡ್ರಾ ಮಾಡಿಕೊಂಡರು.ಇದೀಗ ಭಾರತ ಗ್ರ್ಯಾಂಡ್ ಮಾಸ್ಟರ್ ಏಳು ಪಾಯಿಂಟ್‌ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಕಾರ್ಲ್‌ಸನ್ ಅಲ್ಲದೆ ಅಮೆರಿಕದ ಹಿಕರು ನಕಮುರ ಮತ್ತು ಅರ್ಮೇನಿಯದ ಲೆವೊನ್ ಅರೋನಿಯನ್ ಅವರೂ ತಲಾ ಏಳು ಪಾಯಿಂಟ್ ಹೊಂದಿದ್ದಾರೆ. ಈ ಟೂರ್ನಿಯ ಮೊದಲ ಹಂತದ ಐದು ಸುತ್ತಿನ ಪಂದ್ಯಗಳು ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ನಡೆದಿತ್ತು.ಟೂರ್ನಿಯಲ್ಲಿ ಇನ್ನು ನಾಲ್ಕು ಸುತ್ತಿನ ಪಂದ್ಯಗಳು ಬಾಕಿಯುಳಿದಿವೆ. ಮೊದಲ ಹಂತದ ಬಳಿಕ ಅಗ್ರಸ್ಥಾನದಲ್ಲಿದ್ದ ಉಕ್ರೇನ್‌ನ ವಾಸಿಲಿ ಇವಾಂಚುಕ್ ತಮ್ಮ ಉತ್ತಮ ಪ್ರದರ್ಶನವನ್ನು ಇಲ್ಲೂ ಮುಂದುವರಿಸಿದ್ದಾರೆ. ಆರನೇ ಸುತ್ತಿನ ಪಂದ್ಯದಲ್ಲಿ ಅವರು ನಕಮುರ ವಿರುದ್ಧ ಜಯ ಸಾಧಿಸಿದರು. ಇದೀಗ ಉಕ್ರೇನ್‌ನ ಸ್ಪರ್ಧಿ ಒಟ್ಟು 13 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದಾರೆ.ಸ್ಪೇನ್‌ನ ಫ್ರಾನ್ಸಿಸ್ಕೊ ವಲೆಜೊ ಪೊನ್ಸ್ ಮತ್ತು ಲೆವೊನ್ ಅರೋನಿಯನ್ ನಡುವಿನ ದಿನದ ಮತ್ತೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ವಲೆಜೊ ನಾಲ್ಕು ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.

ಕಾರ್ಲ್‌ಸನ್ ವಿರುದ್ಧ ಕಪ್ಪು ಕಾಯಿಗಳೊಂದಿಗೆ ಆಡಿದ ಆನಂದ್ ಉತ್ತಮ ಪ್ರದರ್ಶನ ನೀಡಿದರು. ಯಾವುದೇ ಹಂತದಲ್ಲೂ ಅವರು ಒತ್ತಡಕ್ಕೆ ಒಳಗಾಗಲಿಲ್ಲ. 48 ನಡೆಗಳ ಬಳಿಕ ಇಬ್ಬರೂ ಪಾಯಿಂಟ್ ಹಂಚಿಕೊಳ್ಳಲು ನಿರ್ಧರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.