ಚೆಸ್: ವಿಶ್ವನಾಥನ್ ಆನಂದ್- ಅರೋನಿಯನ್ ಪಂದ್ಯ ಡ್ರಾ

7

ಚೆಸ್: ವಿಶ್ವನಾಥನ್ ಆನಂದ್- ಅರೋನಿಯನ್ ಪಂದ್ಯ ಡ್ರಾ

Published:
Updated:

ಲಂಡನ್ (ಪಿಟಿಐ): ಗೆಲುವು ಪಡೆಯಲು ಲಭಿಸಿದ ಕೆಲವೊಂದು ಉತ್ತಮ ಅವಕಾಶಗಳನ್ನು ಕಳೆದುಕೊಂಡ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಅರ್ಮೇನಿಯದ ಲೆವೊನ್ ಅರೋನಿಯನ್ ಜೊತೆ ಡ್ರಾ ಸಾಧಿಸಿದರು.ಭಾರತದ ಗ್ರ್ಯಾಂಡ್‌ಮಾಸ್ಟರ್ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರು. ಆದರೆ ಕೊನೆಯವರೆಗೂ ಪಟ್ಟುಬಿಡದೆ ಹೋರಾಡಿದ ಅರೋನಿಯನ್ ಪಾಯಿಂಟ್ ಹಂಚಿಕೊಳ್ಳುವಲ್ಲಿ ಯಶ ಕಂಡರು. ಇದೀಗ ಎರಡು ಪಾಯಿಂಟ್‌ಗಳನ್ನು ಹೊಂದಿರುವ ಆನಂದ್ ಜಂಟಿ ಐದನೇ ಸ್ಥಾನದಲ್ಲಿದ್ದಾರೆ.ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇವರಿಬ್ಬರು ತಲಾ ಏಳು ಪಾಯಿಂಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಮೈಕಲ್ ಆ್ಯಡಮ್ಸ ಮಹಿಳಾ ಸ್ಪರ್ಧಿ ಹಂಗರಿಯ ಜುಡಿತ್ ಪೋಲ್ಗರ್ ಅವರನ್ನು ಮಣಿಸಿದರು. ಇಂಗ್ಲೆಂಡ್‌ನ ಗವೇನ್ ಜೋನ್ಸ್ ಮತ್ತು ಅಮೆರಿಕದ ಹಿಕರು ನಕಮುರ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿತು.

ಆರು ಪಾಯಿಂಟ್‌ಗಳನ್ನು ಹೊಂದಿರುವ ಆ್ಯಡಮ್ಸ ಮೂರನೇ ಸ್ಥಾನದಲ್ಲಿದ್ದರೆ, ನಾಲ್ಕು ಪಾಯಿಂಟ್‌ಗಳನ್ನು ಕಲೆಹಾಕಿರುವ ನಕಮುರ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry