ಶುಕ್ರವಾರ, ಫೆಬ್ರವರಿ 26, 2021
31 °C

ಚೇತನ್ ಈ ದಿನಗಳು...

–ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಚೇತನ್ ಈ ದಿನಗಳು...

ನಟ ಚೇತನ್‌ ಎಲ್ಲಿದ್ದಾರೆ? ಯಾಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ? ಸದ್ಯಕ್ಕೆ ಮಂಗಳೂರಿನಲ್ಲಿದ್ದೇನೆ ಎನ್ನುತ್ತಾರೆ ಚೇತನ್‌. ‘ಮೈನಾ’ ಬಳಿಕ ಚೇತನ್‌ ಮತ್ತೆ ಬಣ್ಣಹಚ್ಚಿಲ್ಲ. ಸಿನಿಮಾ ಗೆದ್ದರೂ ಈ ಪ್ರತಿಭಾವಂತ ನಟನಿಗೆ ಅವಕಾಶಗಳ ಕೊರತೆಯೇ ಎಂದು ಪ್ರಶ್ನಿಸಿದರೆ, ‘ಹಾಗೇನಿಲ್ಲ, ಅವಕಾಶಗಳು ಸಾಕಷ್ಟಿವೆ. ಆದರೆ ಇಷ್ಟವಾಗುವ ಕಥೆ ಸಿಗುತ್ತಿಲ್ಲ’ ಎನ್ನುತ್ತಾರೆ ಅವರು. ನಟನೊಬ್ಬ ಸಿನಿಮಾಗಳಲ್ಲಿ ನಟಿಸದೆಯೇ ವರ್ಷಗಟ್ಟಲೆ ಏನುಮಾಡುತ್ತಾರೆ ಎಂದು ಉತ್ತರ ಹುಡುಕಿದರೆ ಚೇತನ್‌ ಬಗ್ಗೆ ಅಚ್ಚರಿ, ಮೆಚ್ಚುಗೆ ಒಮ್ಮೆಲೆ ಮೂಡುತ್ತದೆ.ಮೇಲ್ವರ್ಗದ ಕುಟುಂಬದಲ್ಲಿ ಜನಿಸಿ, ಅಮೆರಿಕದಲ್ಲಿ ನೆಲೆ ಕಂಡಿದ್ದಾಗಲೂ ಚೇತನ್‌ರಲ್ಲಿ ಇದ್ದದ್ದು ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ. ಅದಕ್ಕಾಗಿ ಭಾರತಕ್ಕೆ ಮರಳಿದ ಚೇತನ್, ಸಿನಿಮಾ ನಡುವೆಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸಬೇಕೆಂಬ ಹಪಾಹಪಿ ಅವರಿಗಿಲ್ಲ. ಹೀಗಾಗಿಯೇ 2007ರಲ್ಲಿ ‘ಆ ದಿನಗಳು’ ಮೂಲಕ ಬೆಳ್ಳಿತೆರೆಗೆ ಬಂದಿದ್ದರೂ ಇದುವರೆಗೆ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಇನ್ನೂ ಐದರಲ್ಲಿ ಇರುವುದು. ಸಮಾಜವನ್ನು ತಿದ್ದಬೇಕು ಎಂಬ ಕನಸಿಟ್ಟುಕೊಂಡಿರುವ ಚೇತನ್‌, ತಮ್ಮನ್ನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.ಸಮಾನ ಮನಸ್ಕ ಯುವಕರು, ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸೇರಿ ಜಾತಿ ವ್ಯವಸ್ಥೆ, ಶೈಕ್ಷಣಿಕ ಸಮಸ್ಯೆಗಳು, ಅನಿಷ್ಟ ಪದ್ಧತಿಗಳು, ಬಡತನ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ, ಸಂಘಟಿಸುವ ಕೆಲಸಗಳಲ್ಲಿ ಅವರು ಮಗ್ನ. ಉತ್ತಮ ಶೈಕ್ಷಣಿಕ ವ್ಯವಸ್ಥೆ ಇರುವ, ಆಧುನಿಕತೆಯನ್ನೂ ಮೈಗೂಡಿಸಿಕೊಂಡಿರುವ ಮಂಗಳೂರಿನಂಥ ಸ್ಥಳದಲ್ಲಿಯೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಮೂಢನಂಬಿಕೆ, ಕೆಟ್ಟ ಆಚರಣೆಗಳು ಇಂದಿಗೂ ಅಸ್ತಿತ್ವದಲ್ಲಿವೆ. ಎಸ್‌ಇಝೆಡ್‌ನ ಸುತ್ತಲೂ ಅನೇಕ ಸಮಸ್ಯೆಗಳಿವೆ. ನೈತಿಕ ಪೊಲೀಸ್‌ಗಿರಿ ಹೆಚ್ಚುತ್ತಿದೆ. ನಮ್ಮಲ್ಲಿ ಉತ್ಸಾಹಿ ಯುವಕರ ದೊಡ್ಡ ಶಕ್ತಿಯೇ ಇದೆ. ಅವರಲ್ಲಿ ಒಳ್ಳೆ ಆಲೋಚನೆಗಳಿವೆ.

ಎಲ್ಲರೂ ಸೇರಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಸಾಧ್ಯವೇನಲ್ಲ ಎನ್ನುವುದು ಅವರ ಅಭಿಪ್ರಾಯ. ಕೋಲಾರ, ಮೈಸೂರಿನ ಕೆಲವು ಭಾಗಗಳಲ್ಲಿ ತಮ್ಮ ಪ್ರಯತ್ನ ತಕ್ಕಮಟ್ಟಿಗೆ ಯಶಸ್ಸು ಕಂಡಿರುವ ಖುಷಿ ಅವರದು. ಕರಾವಳಿ ಭಾಗದಲ್ಲಿಯೂ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕುತ್ತಿದೆ. ಸರ್ಕಾರವೂ ತಮ್ಮ ಮನವಿಗೆ ಸ್ಪಂದಿಸುತ್ತಿದೆ. ಇಲ್ಲಿಂದ ಮುಂದೆ ಉತ್ತರ ಕರ್ನಾಟಕ ಭಾಗದತ್ತ ತೆರಳಲಿದ್ದೇನೆ ಎನ್ನುತ್ತಾರೆ ಚೇತನ್‌.ಅಸಮಾನತೆ ತೊಲಗದೆ ಸಾಮಾಜಿಕ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಅವರ ಅಭಿಮತ. ಅದರಲ್ಲಿ ತೊಡಗಿಸಿಕೊಂಡಾಗ ವಿರೋಧಗಳು ಬಂದರೂ ಅವರ ಮನವೊಲಿಸಿ ಚರ್ಚಿಸಿ ಮನಪರಿವರ್ತನೆ ಮಾಡುವ ಜವಾಬ್ದಾರಿಯನ್ನೂ ಅವರು ನಿಭಾಯಿಸುತ್ತಿದ್ದಾರೆ. ಸಾಮಾಜಿಕ ಕೈಂಕರ್ಯದ ನಡುವೆ ಅವರು ಸಿನಿಮಾವನ್ನು ಮರೆತಿಲ್ಲ. ಅನೇಕ ಕಥೆಗಳನ್ನು ಕೇಳಿದ್ದಾರೆ. ಆದರೆ ಯಾವ ಕಥೆಯೂ ಅವರಿಗೆ ತೃಪ್ತಿ ಕೊಟ್ಟಿಲ್ಲ. ಸಿನಿಮಾ ಒಪ್ಪಿಕೊಂಡ ಬಳಿಕ ಅದಕ್ಕೆ ಬದ್ಧನಾಗಿ, ಜೀವತುಂಬಬೇಕು. ಮಾಡಿದ ಪಾತ್ರ ಜನರ ಮನಸಿನಲ್ಲಿ ಉಳಿಯಬೇಕು. ಇಷ್ಟವಾಗದ ಕಥೆಗಳನ್ನು ಒಪ್ಪಿಕೊಂಡು ನಟಿಸಲು ಸಾಧ್ಯವಿಲ್ಲ ಎಂದು ತಮ್ಮ ಸ್ಪಷ್ಟ ನಿರ್ಧಾರವನ್ನು ಬಹಿರಂಗಪಡಿಸುತ್ತಾರೆ.ಸಿನಿಮಾ ಮಾಡುವ ಸಲುವಾಗಿಯೇ ಭಾರತಕ್ಕೆ ಬಂದಿಲ್ಲ. ಇಲ್ಲಿಗೆ ಬಂದ ಮೂಲ ಉದ್ದೇಶವೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ‘ಆ ದಿನಗಳು’ ಚಿತ್ರದ ಒಂದೂವರೆ ವರ್ಷದ ಬಳಿಕ  ‘ಬಿರುಗಾಳಿ’ ಬಿಡುಗಡೆಯಾಗಿದ್ದು. ‘ಸೂರ್ಯಕಾಂತಿ’ಯೂ ಅಷ್ಟೇ. ‘ಮೈನಾ’ ಚಿತ್ರ ಒಪ್ಪಿಕೊಳ್ಳುವಾಗ ಮೂರು ವರ್ಷ ಆಗಿತ್ತು. ಹೀಗೆ ಸಿನಿಮಾಗಳ ನಡುವಿನ ಅಂತರ ಹೊಸತಲ್ಲ. ಈ ಅಂತರವನ್ನು ನನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಬಳಸಿಕೊಂಡಿದ್ದೇನೆ. ಅದರಿಂದ ಆತ್ಮತೃಪ್ತಿ ಸಿಕ್ಕಿದೆ ಎಂದು ಹೇಳುತ್ತಾರೆ. ಸಿನಿಮಾಗಳ ಸಂಖ್ಯೆ ಹೆಚ್ಚಬೇಕು ಎಂಬ ಹಂಬಲ ಕಿಂಚಿತ್ತೂ ಇಲ್ಲ. ಅಪರೂಪಕ್ಕೆ ಮಾಡಿದ ಸಿನಿಮಾವಾದರೂ ಅದರಲ್ಲಿ ವಿಶೇಷತೆ ಇರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಜನರಲ್ಲಿನ ಭರವಸೆಯೇ ಶಕ್ತಿ ನೀಡುತ್ತದೆ. ಇಷ್ಟವಾಗುವ ಕಥೆ ಬಂದಾಗ ಖಂಡಿತಾ ನಟಿಸುತ್ತೇನೆ ಎನ್ನುತ್ತಾರೆ ಅವರು.ಕಲಾವಿದ ಒಂದು ವಲಯಕ್ಕೆ ಸೀಮಿತನಾಗುವುದಿಲ್ಲ. ಯಾವುದು ಸಂತೋಷ ನೀಡುತ್ತದೋ ನಾವು ಆ ದಾರಿಯಲ್ಲಿ ಹೋಗಬೇಕು. ನಾಟಕ, ಸಂಗೀತ, ಸಾಹಿತ್ಯ, ಸಾಮಾಜಿಕ ಕಳಕಳಿ ಇವುಗಳ ಅಭಿರುಚಿ ಇದ್ದಾಗಲೇ ಆತ ಉತ್ತಮ ಕಲಾವಿದನಾಗಲು ಸಾಧ್ಯ. ನನ್ನ ಮನಸ್ಸು ಮತ್ತು ಹೃದಯ ಎಲ್ಲಿಗೆ ಕರೆದೊಯ್ಯುತ್ತದೋ ಅಲ್ಲಿಗೆ ಹೋಗುತ್ತೇನೆ ಎನ್ನುವ ಚೇತನ್‌, ತಮ್ಮ ಸಿನಿಮಾ ಮತ್ತು ಸಾಮಾಜಿಕ ಸೇವೆಯ ಬಗ್ಗೆ ತೃಪ್ತಿ ಹೊಂದಿದ್ದಾರೆ. ಆದರೆ ಮಾಡಬೇಕಾದ ಕೆಲಸ ಸಾಕಷ್ಟಿದೆ ಎಂಬ ಪ್ರಜ್ಞೆಯೂ ಅವರಲ್ಲಿದೆ.‘ಕಷ್ಟದಲ್ಲಿರುವ ಸಾವಿರಾರು ಜನರ ನಡುವೆ ಎಲ್ಲವನ್ನೂ ಉಳ್ಳ ಅದೃಷ್ಟವಂತನಾಗಿ ಹುಟ್ಟಿದ್ದೇನೆ. ನಾನು ಸುಖಪಡಬೇಕು ಎಂದು ಯಾವತ್ತೂ ಅನಿಸಿಲ್ಲ. ಯಾಕೆ ನನಗೆ ಈ ಅದೃಷ್ಟಗಳು ಸಿಕ್ಕಿವೆ ಎಂದು ಸ್ವಯಂ ಪ್ರಶ್ನೆ ಹಾಕಿಕೊಂಡಿದ್ದೇನೆ. ಪ್ರತಿಯೊಬ್ಬರೂ ಹೀಗೆ ತಮ್ಮನ್ನು ತಾವು ಪ್ರಶ್ನಿಸಿಕೊಂಡರೆ ಆತ್ಮಸಾಕ್ಷಿ ಎಚ್ಚೆತ್ತುಕೊಳ್ಳುತ್ತದೆ. ಹಾಗೆ ಮಾಡಿದಾಗಲೇ ನನ್ನ ಅರ್ಹತೆ ಬಗ್ಗೆ ನನ್ನಲ್ಲಿ ಪ್ರಶ್ನೆ ಉದ್ಭವಿಸಿದ್ದು. ನನಗೆ ದೊರೆತ ಅನುಕೂಲಗಳನ್ನು ಹಂಚಿಕೊಳ್ಳುವುದು ನನ್ನ ಜವಾಬ್ದಾರಿ ಎಂಬ ಪ್ರಜ್ಞೆ ಕಾಡಿತು. ಅದಕ್ಕೆ ಅನುಗುಣವಾಗಿ ನಡೆಯುತ್ತಿದ್ದೇನೆ. ನಡುವೆ ಒಳ್ಳೆಯ ಸಿನಿಮಾಗಳನ್ನೂ ಮಾಡುತ್ತೇನೆ’ ಎನ್ನುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.