ಚೇತರಿಕೆ ಇಲ್ಲ?

7

ಚೇತರಿಕೆ ಇಲ್ಲ?

Published:
Updated:

ನವದೆಹಲಿ (ಪಿಟಿಐ): ಉದ್ದಿಮೆ ಸಂಸ್ಥೆಗಳ ತೃತೀಯ ಹಣಕಾಸು ಸಾಧನೆ ವರದಿಗಳು ಈ ವಾರವೂ ಷೇರುಪೇಟೆಯಲ್ಲಿ ಉತ್ಸಾಹ ತುಂಬುವ ಸಾಧ್ಯತೆಗಳು ಕಡಿಮೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

2011ನೇ ವರ್ಷಕ್ಕೆ ಷೇರುಪೇಟೆಯು ನಿರಾಶಾದಾಯಕ ಆರಂಭ ಒದಗಿಸಿದೆ. ಮೊದಲ 2 ವಾರಗಳಲ್ಲಿ ಸಂವೇದಿ ಸೂಚ್ಯಂಕವು ಶೇ 8ರಷ್ಟು ಕುಸಿತ ಕಂಡಿದೆ. ವರ್ಷಾರಂಭದ ವಹಿವಾಟು ಕಳಪೆಯಾಗಿದ್ದರೂ, ಪೇಟೆಯಲ್ಲಿ ಮತ್ತೆ ಚೇತರಿಕೆ ಮರಳುವ ಸಾಧ್ಯತೆಗಳು ಇವೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ, ನಿರೀಕ್ಷೆ ಹುಸಿ ಮಾಡಿರುವ ಕೈಗಾರಿಕಾ ಉತ್ಪಾದನೆ ಮತ್ತು ಹಣದುಬ್ಬರ ಹೆಚ್ಚಳವು ಈಗಾಗಲೇ ಕಳೆದ  ವಾರದ ವಹಿವಾಟಿನ ಮೇಲೆ ತಣ್ಣೀರು ಎರಚಿವೆ.

ಸಾಫ್ಟ್‌ವೇರ್ ದೈತ್ಯ ಸಂಸ್ಥೆ ಟಿಸಿಎಸ್, ಸೋಮವಾರ (ಜ. 17ರಂದು) ತನ್ನ ಹಣಕಾಸು ಸಾಧನೆ ಪ್ರಕಟಿಸಲಿದೆ. ಆನಂತರ ಜ. 21ರಂದು ವಿಪ್ರೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳ ತ್ರೈಮಾಸಿಕ ಸಾಧನೆ ಪ್ರಕಟಗೊಳ್ಳಲಿದೆ.

ಇನ್ಫೋಸಿಸ್‌ನ ನಿರಾಶಾದಾಯಕ ಸಾಧನೆ ಹಿನ್ನೆಲೆಯಲ್ಲಿ ಇತರ ಉದ್ದಿಮೆ ಸಂಸ್ಥೆಗಳ ಸಾಧನೆಯೂ ಗಮನಾರ್ಹವಾಗಿ ಇರಲಾರದು ಎನ್ನುವ ಭಾವನೆ ಪೇಟೆಯಲ್ಲಿ ಮನೆ ಮಾಡಿದೆ.

ಸಾಗರೋತ್ತರ ಬಂಡವಾಳ ಹರಿವು ಕಡಿಮೆಯಾಗಿರುವುದು ಮತ್ತು ಬ್ಯಾಂಕ್ ಬಡ್ಡಿ ದರಗಳು ಹೆಚ್ಚಳಗೊಳ್ಳುವ ವರದಿಗಳು  ಮುಂಬರುವ ದಿನಗಳಲ್ಲಿಯೂ ಷೇರು ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ.

ಕೊನೆಯ ತ್ರೈಮಾಸಿಕವು ಉದ್ದಿಮೆ ಸಂಸ್ಥೆಗಳ ಪಾಲಿಗೆ ಸವಾಲಿನಿಂದ ಕೂಡಿದೆ ಎಂದು ಯೂನಿಕಾನ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜೇಂದ್ರ ನಾಗ್ಪಾಲ್ ಅಭಿಪ್ರಾಯಪಟ್ಟಿದ್ದಾರೆ. ದೇಶದ ಸದೃಢವಾಗಿರುವ ದೀರ್ಘಾವಧಿ ಆರ್ಥಿಕ ಬೆಳವಣಿಗೆಗಿಂತ  ತಕ್ಷಣದ ಸಮಸ್ಯೆ  ಮತ್ತು ಸವಾಲುಗಳೇ ಷೇರುಪೇಟೆಗೆ ಸದ್ಯಕ್ಕೆ ಆತಂಕ ತಂದೊಡ್ಡಿವೆ.

ಉದ್ದಿಮೆ ಸಂಸ್ಥೆಗಳ ಲಾಭ,  ಆರ್‌ಬಿಐ ಪ್ರಕಟಿಸಲಿರುವ  ಹಣಕಾಸು ನೀತಿ ಮತ್ತು ಬಜೆಟ್ ಪ್ರಸ್ತಾವನೆಗಳ ಬಗ್ಗೆ ಹೂಡಿಕೆದಾರರು ಹೆಚ್ಚು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚುವಲ್ ಲೈಫ್ ಇನ್ಶುರನ್ಸ್‌ನ ಮುಖ್ಯ ಹೂಡಿಕೆ ಅಧಿಕಾರಿ ಸುಧಾಕರ ಶಾನಭಾಗ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry