ಚೇತರಿಕೆ ಹಾದಿಯಲ್ಲಿ ರಿಯಲ್ ಎಸ್ಟೇಟ್

7

ಚೇತರಿಕೆ ಹಾದಿಯಲ್ಲಿ ರಿಯಲ್ ಎಸ್ಟೇಟ್

Published:
Updated:

ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಭಾರತ ಕೂಡ ಒಂದು.   ಇತ್ತೀಚೆಗೆ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದರೂ ವಿಶ್ವದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭಾರತ 20ನೇ ಸ್ಥಾನ ಉಳಿಸಿಕೊಂಡಿದೆ. ಅರ್ಥಿಕ ಹಿಂಜರಿತದ ನಡುವೆಯೂ ಈ ವಲಯ ಸಮತೋಲನ ಕಾಯ್ದುಕೊಂಡಿದೆ  ಎಂದು ಕುಶ್‌ಮನ್ ಮತ್ತು ವೇಕ್‌ಫಿಲ್ಡ್ (ಸಿ ಅಂಡ್ ಡಬ್ಲ್ಯು) ಮಾರುಕಟ್ಟೆ ಅಧ್ಯಯನ ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.` ಸಿ ಅಂಡ್ ಡಬ್ಲ್ಯು' ವರದಿಯಂತೆ, 30,410 ಕೋಟಿ ಡಾಲರ್ ಹೂಡಿಕೆ ದಾಖಲಿಸಿರುವ ಚೀನಾ ಪ್ರಪಂಚದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅಮೆರಿಕ(26,710 ಕೋಟಿ ಡಾಲರ್) ಮತ್ತು ಬ್ರಿಟನ್(5,630 ಕೋಟಿ ಡಾಲರ್) ನಂತರದ ಸ್ಥಾನಗಳಲ್ಲಿವೆ. ರೂ.19,000 ಕೋಟಿ ಹೂಡಿಕೆ ದಾಖಲಿಸಿರುವ ಭಾರತ 20ನೇ  ಸ್ಥಾನದಲ್ಲಿದೆ.ಭಾರತದಲ್ಲಿ ಪ್ರಮುಖವಾಗಿ ವಾಣಿಜ್ಯ ಕಟ್ಟಡಗಳು, ಕಚೇರಿ ಕಟ್ಟಡಗಳಿಗೆ ಭಾರೀ ಬೇಡಿಕೆ ಇದೆ. ಇದರ ಮೇಲೆ ರೂ.12,800 ಕೋಟಿ ಹೂಡಿಕೆ ಮಾಡಲಾಗಿದೆ. ಅಪಾರ್ಟ್‌ಮೆಂಟ್, ವಿಲ್ಲಾಗಳ ಬೇಡಿಕೆ ಕುಸಿಯುತ್ತಿದ್ದರೂ ರೂ.6,800 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ವರದಿ ಹೇಳಿದೆ.ಆರ್ಥಿಕ ಚೇತರಿಕೆ

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ 2007ರಿಂದ 2011ರವರೆಗೆ  ಜಾಗತಿಕವಾಗಿ ರಿಯಲ್ ಎಸ್ಟೇಟ್ ಉದ್ಯಮ ನಷ್ಟದಲ್ಲಿತ್ತು. ಈ ಸಮಯದಲ್ಲಿ ಹೂಡಿಕೆದಾರರು ಬಂಡವಾಳ ಹೂಡಲು ಮೀನಾ-ಮೇಷ ಎಣಿಸುತ್ತಿದ್ದರು. ಇದರಿಂದ ಹೂಡಿಕೆ ಪ್ರಮಾಣ ಶೇ 6 ದಾಟಿರಲಿಲ್ಲ.  2012ರಲ್ಲಿ  ಚೇತರಿಕೆ ಕಂಡುಬಂತು. ಪ್ರಸ್ತುತ ಉದ್ಯಮದ   ಪ್ರಗತಿ ಆಶಾದಾಯಕವಾಗಿದೆ.  2012ರಲ್ಲಿ ಜಾಗತಿಕವಾಗಿ 92,900 ಕೋಟಿ ಡಾಲರ್‌ನಷ್ಟಿದ್ದ ಹೂಡಿಕೆ, 2013ರ ಅಂತ್ಯಕ್ಕೆ ಒಂದು ಟ್ರಿಲಿಯನ್(ಒಂದು ಲಕ್ಷ ಕೋಟಿ) ಡಾಲರ್ ದಾಟಲಿದೆ ಎಂಬ ವಿಶ್ವಾಸವನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.ಸದ್ಯದ ಬೆಳವಣಿಗೆಗಳಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಬಂಡವಾಳ ಹೂಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಉದ್ಯಮಕ್ಕೆ ಹೊಸ ರಂಗು ಬಂದಿದೆ.  ಉದ್ಯಮಕ್ಕೆ ಯಥೇಚ್ಚವಾಗಿ ಹಣ ಹರಿದು ಬರುತ್ತಿದ್ದು, ಜಾಗತಿಕ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗಲಿದೆ ಎಂದು `ಸಿ ಅಂಡ್ ಡಬ್ಲ್ಯು' ಭವಿಷ್ಯ ನುಡಿದಿದೆ. ಅಮೆರಿಕ ಸೇರಿದಂತೆ ಯೂರೋಪಿಯನ್ ದೇಶಗಳಲ್ಲಿ ರಿಯಲ್ ಎಸ್ಟೆಟ್ ಉದ್ಯಮದ ಚೇತರಿಕೆಗೆ ಆರೋಗ್ಯಕರ ವಾತಾವರಣವಿಲ್ಲ. ಹಾಗಾಗಿ ಈ ದೇಶಗಳ ಹೂಡಿಕೆದಾರರು ಭಾರತದತ್ತ ಮುಖಮಾಡುತ್ತಿದ್ದಾರೆ ಎಂದೂ  ಆರ್ಥಿಕ ವಿಶ್ಲೇಷಣೆಕಾರರು ಅಭಿಪ್ರಾಯಪಟ್ಟಿದ್ದಾರೆ.ಬೆಂಗಳೂರಿನಲ್ಲಿ ದಾಖಲೆ

ಐಟಿ ರಾಜಧಾನಿ ಬೆಂಗಳೂರಿನಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಂಡಿದ್ದು, ದಾಖಲೆಯ ವಹಿವಾಟು ನಡೆಸಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ರೂ.3,500 ಕೋಟಿ ಬಂಡವಾಳ ಹರಿದು ಬಂದಿದೆ. ದೆಹಲಿ ಮತ್ತು ಮುಂಬೈ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಹೆಚ್ಚು ಹೂಡಿಕೆ ದಾಖಲಾಗಿದೆ. ಮುಂಬೈನಲ್ಲಿ ರೂ.1,300 ಕೋಟಿ ಹಾಗೂ ದೆಹಲಿಯಲ್ಲಿ ಕೇವಲ ರೂ.700 ಕೋಟಿ ಹೂಡಿಕೆಯಾಗಿರುವುದಾಗಿ `ಸಿ ಅಂಡ್ ಡಬ್ಲ್ಯು' ಹೇಳಿದೆ.`ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ರಿಯಲ್ ಎಸ್ಟೇಟ್‌ಗೆ ಹರಿದ ಬರುವ ಬಂಡವಾಳ ದ್ವಿಗುಣಗೊಂಡಿದೆ. ಬೆಂಗಳೂರಿನಲ್ಲಿ ಒಳ್ಳೆಯ ಹವಾಗುಣ,  ಮೂಲ ಸೌಕರ್ಯಗಳ ಲಭ್ಯತೆಯಿಂದಾಗಿ ವಿದೇಶಿ ಕಂಪೆನಿಗಳಿಗೆ ಬೆಂಗಳೂರು ಹೂಡಿಕೆ ಸ್ವರ್ಗವಾಗಿದೆ'  ಎನ್ನುತ್ತಾರೆ `ಸಿ  ಅಂಡ್ ಡಬ್ಲ್ಯು'ನ ದಕ್ಷಿಣ ಏಷ್ಯಾದ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ದತ್.`ಆಡಳಿತಾತ್ಮಕವಾಗಿ ಮತ್ತು ಆಧಾಯದ ದೃಷ್ಟಿಯಿಂದಲೂ ಬೆಂಗಳೂರು ಲಾಭದಾಯಕ ಸ್ಥಳವಾಗಿದೆ. ಹೂಡಿದ ಬಂಡವಾಳಕ್ಕೆ ತ್ವರಿತವಾಗಿ ಲಾಭ ಸಿಗುವುದರಿಂದ ಹೂಡಿಕೆದಾರರು ಬೆಂಗಳೂರಿನತ್ತ ಆಕರ್ಷಿತರಾಗುತ್ತಿದ್ದಾರೆ. ವಾಣಿಜ್ಯ ಮಾಲ್ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ ಇದೆ. ನಗರದ ಹೊರವಲಯಲ್ಲಿ ತಲೆ ಎತ್ತುತ್ತಿರುವ ವಿಲ್ಲಾಗಳಿಗೂ ಹೆಚ್ಚು ಬೇಡಿಕೆ ಇದೆ' ಎಂದು ಸಿ ಅಂಡ್ ಡಬ್ಲ್ಯು ವಿಶ್ಲೇಷಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry