ಚೇಳುಗಳೊಂದಿಗೆ ಸರಸ
ಗುರುಮಠಕಲ್: ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ನಾಗಪ್ಪನಿಗೆ ಹಾಲು ಎರೆಯುವುದರ ಮೂಲಕ ಆಚರಿಸುವುದು ಸಾಮಾನ್ಯ. ಆದರೆ ಇಲ್ಲಿಗೆ ಸಮೀಪದ ಕಂದಕೂರ ಗ್ರಾಮದಲ್ಲಿ ಮಕ್ಕಳು, ಹಿರಿಯರು, ಮಹಿಳೆಯರು ಚೇಳುಗಳನ್ನು ಹಿಡಿದು ಅವುಗಳೊಂದಿಗೆ ಸರಸವಾಡುತ್ತಾ ವಿನೂತನವಾಗಿ ಪಂಚಮಿ ಹಬ್ಬವನ್ನು ಸೋಮವಾರದಂದು ಆಚರಿಸಲಿದ್ದಾರೆ.
ನಾಗರ ಪಂಚಮಿ ಬಂತೆಂದರೆ ಸಾಕು ಗ್ರಾಮಗಳಲ್ಲಿ ಮಕ್ಕಳು, ಯುವಕರು ಕೊಬ್ಬರಿ ಗೆಲ್ಲಲು ಹಲವು ಪಂದ್ಯಗಳಿಗಾಗಿ ಕಾಯುತ್ತಾರೆ. ಕಂದಕೂರು ಗ್ರಾಮದಲ್ಲಿ ಬೆಳಿಗ್ಗೆಯಿಂದ ಪಂದ್ಯಗಳನ್ನು ಕಾಯುವ ಯುವಕರು ಸಾಯಂಕಾಲ 4 ಗಂಟೆ ಸುಮಾರಿನಿಂದ ಗ್ರಾಮಕ್ಕೆ ಅಂಟಿಕೊಂಡಿರುವ ಕೊಂಡ್ಯಮ್ಮ ಬೆಟ್ಟ ಹತ್ತುವ ಉತ್ಸಾಹ ತೋರುತ್ತಾರೆ. ಬೆಟ್ಟ ಹತ್ತಿದವರು ದೇವರಿಗೆ ನಮಸ್ಕರಿಸಿ ಯಾವುದೇ ಕಲ್ಲನ್ನು ಕಿತ್ತರೂ ಕಲ್ಲಿನ ಕೆಳಗೆ ಚೇಳು ಕಾಣಿಸಿಕೊಳ್ಳುತ್ತದೆ. ಬೇರೆ ದಿನಗಳಲ್ಲಿ ಚೇಳುಗಳು ಗೋಚರಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಮಕ್ಕಳು, ಮಹಿಳೆಯರು, ಯುವಕರು ಚೇಳುಗಳನ್ನು ಹಿಡಿದು ಅವುಗಳೊಂದಿಗೆ ಸರಸವಾಡುತ್ತಾರೆ. ಅವು ಈ ಬೆಟ್ಟದಲ್ಲಿ ನಾಗರ ಪಂಚಮಿ ದಿನದಂದು ಮಾತ್ರ ಗೋಚರಿಸುತ್ತವೆ. ಅವು ಕಚ್ಚುವುದಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ. ಇದರಿಂದಾಗಿ ಇಲ್ಲಿಗೆ ಆಗಮಿಸುವ ಮಕ್ಕಳಂತು ಚೇಳುಗಳನ್ನು ಹಿಡಿಯುವುದರಲ್ಲಿ ಉತ್ಸುಕರಾಗುತ್ತಾರೆ ಮತ್ತು ಸರಸವಾಡುತ್ತಾರೆ, ದೇಹದ ಮೇಲೆಲ್ಲ ಹರಿದಾಡಿಸಿಕೊಳ್ಳುತ್ತಾರೆ.
ಬೆಳಿಗ್ಗೆಯಿಂದ ನಾಗಪ್ಪನಿಗೆ ಹಾಲು ಎರೆದು ಪಂಚಮಿಯನ್ನು ಆಚರಿಸಿದ ಮಹಿಳೆಯರು ಸಾಯಂಕಾಲ ಬೆಟ್ಟಹತ್ತಿ ಕೊಂಡ್ಯಮ್ಮ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ.
ಕೊಂಡ್ಯಮ್ಮ ಬೆಟ್ಟ ಹತ್ತಲು ಮತ್ತು ಅಲ್ಲಿನ ವಿಶೇಷ ಚೇಳುಗಳೊಂದಿಗಿನ ಚಲ್ಲಾಟ ನೋಡಲು ಸುತ್ತಮುತ್ತಲಿನ ಗ್ರಾಮದ ಜನರು ಮುಗಿಬೀಳುತ್ತಾರೆ.
ಇಲ್ಲಿನ ಬೆಟ್ಟದಲ್ಲಿ ಕೆಂಪು ಮಿಶ್ರಿತ ಮಣ್ಣು ಇರುವುದು ಸಾಮಾನ್ಯವಾಗಿ ಈ ಮಣ್ಣಿನಲ್ಲಿ ಕೆಂಪು ಚೇಳುಗಳು ಕಾಣಿಸುತ್ತವೆ. ಆದರೆ ಇಲ್ಲಿನ ಮಣ್ಣಿನ ಗುಣದಿಂದಾಗಿ ಚೇಳಿನ ದೇಹದಲ್ಲಿ ವಿಷದ ಪ್ರಮಾಣ ಕಡಿಮೆ ಇರುತ್ತದೆ.
ಕಚ್ಚಿದರೂ ಅಷ್ಟೊಂದು ನೋವು, ಉರಿತ ಕಾಣಿಸುವುದಿಲ್ಲ. ಕಾರಣ ಎಲ್ಲರೂ ಅವುಗಳೊಂದಿಗೆ ಸರಸವಾಡುತ್ತಾರೆ ಎಂದು ಹಿರಿಯ ವೈಜ್ಞಾನಿಕ ಚಿಂತಕರು ಅಭಿಪ್ರಾಯವಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.