ಚೇಳ್ಯಾರು: ಬಸ್ ಮಾಲೀಕರ, ಸಾರ್ವಜನಿಕರ ಸಭೆ

ಶುಕ್ರವಾರ, ಜೂಲೈ 19, 2019
22 °C

ಚೇಳ್ಯಾರು: ಬಸ್ ಮಾಲೀಕರ, ಸಾರ್ವಜನಿಕರ ಸಭೆ

Published:
Updated:

ಸುರತ್ಕಲ್: ಸುಮಾರು 15 ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿದ್ದ ಚೇಳ್ಯಾರು ಬಸ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಸ್ ಮಾಲೀಕರ ಹಾಗೂ ಸಾರ್ವಜನಿಕರ ಸಭೆ ಚೇಳ್ಯಾರು ಸರ್ಕಾರಿ ಪದವಿಪೂರ್ವ  ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆಯಿತು. ಚೇಳ್ಯಾರು ಗ್ರಾ.ಪಂ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಚೇಳ್ಯಾರಿಗೆ ಬರುವ ಬಸ್‌ಗಳು ಸಮಯಪಾಲಿಸದೆ ಇರುವುದು, ಸಂಚಾರ ಮೊಟಕುಗೊಳಿಸುವುದು, ಪಾವಂಜೆ ಮೂಲಕ ಸಂಚರಿಸುವುದು ಹಾಗೂ ಪ್ರಯಾಣ ದರದಲ್ಲಿನ ವ್ಯತ್ಯಾಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.ಚೇಳ್ಯಾರಿನ ಪ್ರಮುಖ ಬಸ್ ತಂಗುದಾಣಗಳಲ್ಲಿ ವೇಳಾಪಟ್ಟಿ ಹಾಕುವುದು, ಪಂಚಾಯಿತಿಗೂ ವೇಳಾಪಟ್ಟಿ ಸಲ್ಲಿಸುವುದು ಮತ್ತು ಎಲ್ಲ ಬಸ್‌ಗಳೂ ಸಮಯ ಪಾಲನೆ ಮಾಡಲು ಮಾಲೀಕರು ಒಪ್ಪಿಗೆ ಸೂಚಿಸಿದರು.ಚೇಳ್ಯಾರಿಗೆ ಬರುವ ಬಸ್‌ಗಳು ಪಾವಂಜೆ ಮೂಲಕ ಸಂಚರಿಸುವುದರಿಂದ ಚೇಳ್ಯಾರಿನ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾವಿಸಿದಾಗ ಚೇಳ್ಯಾರಿಗೆ ಪರ್ಮಿಟ್ ಪಡೆದ ಬಸ್‌ಗಳು ಅದೇ ದಾರಿಯಲ್ಲಿ ಸಂಚರಿಸಬೇಕು ಎಂಬ ತೀರ್ಮಾನಕ್ಕೆ ಮಾಲೀಕರು ಒಪ್ಪಿಕೊಂಡರು.ಒಂದು ಸಾವಿರ ವೇತನ: ಚೇಳ್ಯಾರಿಗೆ ಸಂಪರ್ಕ ಕಲ್ಪಿಸುವ ಒಂದು ಬಸ್‌ನ ಮಾಲೀಕ ನೆಲೆಸಿರುವುದು ಬೆಂಗಳೂರಿನಲ್ಲಿ, ಬಸ್ ಅನ್ನು ಮತ್ತೊಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಆ ಬಸ್ ಚಾಲಕನಿಗೇ ದಿನದ ಸಂಬಳ ರೂ. 1ಸಾವಿರ ತಿಳಿಸಿದಾಗ ಸಭೆ ಅಚ್ಚರಿ ವ್ಯಕ್ತಪಡಿಸಿತು.ಮತ್ತೊಂದು ಬಸ್‌ನಲ್ಲಿ ಇಬ್ಬರಿಂದ ಮೂವರು ನಿರ್ವಾಹಕರು ದಿನಂಪ್ರತಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರೂ ಗೊಂದಲಕ್ಕೀಡಾಗಿದ್ದಾರೆ. ಈ ಸಮಸ್ಯೆ ಕುರಿತು ಗಮನಹರಿಸುವುದಾಗಿ ಬಸ್ ಮಾಲೀಕರು ಭರವಸೆ ನೀಡಿದರು.ನಿರ್ಣಯಗಳು: ಆರ್.ಎಸ್ ಹೆಸರಿನ ಬಸ್ ಸಂಜೆ 7.50ಕ್ಕೆ ಸುರತ್ಕಲ್‌ನಿಂದ ಬಿಡಬೇಕು. ಪ್ರಗತಿ ಬಸ್ ರಾತ್ರಿ 8.10ಕ್ಕೆ ಸುರತ್ಕಲ್‌ನಿಂದ ಬಿಡಬೇಕು. ಸುರತ್ಕಲ್‌ನಿಂದ ಬಂದ ಎಲ್ಲ ಬಸ್‌ಗಳೂ ಅದೇ ರೂಟ್‌ನಲ್ಲಿ ಪ್ರಯಾಣಿಕರನ್ನು ಸುರತ್ಕಲ್‌ವರೆಗೆ ಕೊಂಡೊಯ್ಯಬೇಕು. ಮಹಿಮಾ ಬಸ್ ಕೆ.ಆರ್.ಇ.ಸಿ. ಹಾಸ್ಟೆಲ್, ಮುಂಚೂರು ಮಾರ್ಗವಾಗಿ ಸಂಚರಿಸಬೇಕು. ಮ್ಯೋಕ್ಸಿ ಬಸ್ ರಾತ್ರಿ 9.30ಕ್ಕೆ ಬರುವ ಸಮಯದ ಬಗ್ಗೆ ಬಸ್ ಗುತ್ತಿಗೆ ಪಡೆದವರ ಬಗ್ಗೆ ವಿಚಾರಿಸಬೇಕು. ಬಸ್ ದರ ಪಟ್ಟಿ ಬಗ್ಗೆ ಚರ್ಚಿಸಿ ಸರಿಯಾದ ದರ ಪಟ್ಟಿ ಪ್ರಕಟಿಸಬೇಕು. ಎಸ್.ಎಂ. ಬಸ್ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಸಂಚರಿಸಬೇಕು ಎಂದು ಸೂಚಿಸಲಾಯಿತು.ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ರಘುರಾಮ ಶೆಟ್ಟಿ, ತಾ.ಪಂ.ಸದಸ್ಯೆ ವಜ್ರಾಕ್ಷಿ ಶೆಟ್ಟಿ,  ಚೇಳ್ಯಾರು ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry