ಚೈತ್ರಾ, ಹರೀಶ್‌ಗೆ ತಲಾ 5 ಚಿನ್ನದ ಪದಕ

7

ಚೈತ್ರಾ, ಹರೀಶ್‌ಗೆ ತಲಾ 5 ಚಿನ್ನದ ಪದಕ

Published:
Updated:

ಬೀದರ್: ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದಲ್ಲಿ ಬಿ.ಜೆ. ಚೈತ್ರಾ  ಮತ್ತು ಹರೀಶ ಕುಲಕರ್ಣಿ ತಲಾ ಐದು ಚಿನ್ನದ ಪದಕ ಪಡೆದು ಗಮನ ಸೆಳೆದರು.ತಾಲ್ಲೂಕಿನ ಕಮಠಾಣ ಸಮೀಪ ಇರುವ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಹೆಬ್ಬಾಳ ಹೈನು ವಿಜ್ಞಾನ ಮಹಾವಿದ್ಯಾಲಯದ ಬಿ.ಟೆಕ್ (ಡಿ.ಟೆಕ್) ವಿದ್ಯಾರ್ಥಿ ಚೈತ್ರಾ ಮತ್ತು ಬೀದರ್ ಪಶು ಮಹಾವಿದ್ಯಾಲಯದ ಬಿ.ವಿ.ಎಸ್ಸಿ. ಆ್ಯಂಡ್ ಎ.ಎಚ್. ವಿದ್ಯಾರ್ಥಿ ಹರೀಶ ಕುಲಕರ್ಣಿ ಅವರಿಗೆ ಪಶು ಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಪದಕ ಪ್ರದಾನ ಮಾಡಲಾಯಿತು.ಚೈತ್ರಾ ವಿಶ್ವವಿದ್ಯಾಲಯ ಚಿನ್ನದ ಪದಕ, ಇಂಪ್ರೆಷನ್ ಡೈರಿ ಕೋ ಬ್ಯಾಚ್ ಆಫ್ 1993-97 ಚನ್ನದ ಪದಕ, ಬೆಂಗಳೂರು ಡೈರಿ ಸೈನ್ಸ್ ಕಾಲೇಜು ಬೆಳ್ಳಿಹಬ್ಬದ ಚಿನ್ನದ ಪದಕ, ಡಾ.ಕೃಷ್ಣವೇಣಮ್ಮ ಮತ್ತು ಕಾವೇರಮ್ಮ ಚಿನ್ನದ ಪದಕ ಹಾಗೂ ಕಾಂತಮ್ಮ ಪುಟ್ಟಮೂರ್ತಿ ಸ್ಮರಣಾರ್ಥ ಚಿನ್ನದ ಪದಕ ಪಡೆದರು.ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದವರಾದ ಚೈತ್ರಾ, ಸದ್ಯ ಬೆಂಗಳೂರಿನ ಹೆಬ್ಬಾಳದಲ್ಲಿ ಫುಡ್ ಆ್ಯಂಡ್ ಡೈರಿ ಬಿಸಿನೆಸ್‌ನಲ್ಲಿ ಎಂ.ಬಿ.ಎ. ಓದುತ್ತಿದ್ದಾರೆ. ಓದು ಮುಗಿದ ನಂತರ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿದ್ದಾರೆ. ಕೆಲ ಕಾಲದ ನಂತರ ಸ್ವಂತ ಆಹಾರ ತಯಾರಿಕೆ ಕಾರ್ಖಾನೆ ಆರಂಭಿಸುವ ಯೋಚನೆಯೂ ಅವರದಾಗಿದೆ. ಕಡಿಮೆ ದರದಲ್ಲಿ ಆಹಾರ ಒದಗಿಸುವ ಆಕಾಂಕ್ಷೆ ತಮ್ಮದು ಎನ್ನುತ್ತಾರೆ ಅವರು. ಯಶಸ್ಸಿಗೆ ಯಾವುದೇ ‘ಶಾರ್ಟ್‌ಕಟ್’ ಇಲ್ಲ. ಪರಿಶ್ರಮವೇ ಇದಕ್ಕಿರುವ ಮಾರ್ಗವಾಗಿದೆ ಎಂದು ಅಭಿಪ್ರಾಯಪಡುತ್ತಾರೆ.ಚೈತ್ರಾ ಅವರ ತಂದೆ ಎಂ. ಜಗದೀಶ ವೆಟರ್ನರಿ ಡಾಕ್ಟರ್ ಆಗಿದ್ದಾರೆ. ತಾಯಿ ಲೀಲಾಮಣಿ. ಅವರಿಗೆ ನಾಲ್ಕು ಎಕರೆ ಜಮೀನಿದೆ.ಇವರೊಂದಿಗೆ 5 ಚಿನ್ನದ ಪದಕ ಪಡೆದ ಹರೀಶ ಕುಲಕರ್ಣಿ ವಿಜಾಪುರ ಜಿಲ್ಲೆಯ ಹಲಗಣಿ ಗ್ರಾಮದವರು. ತಂದೆ ಟಿಕಾರಾವ ಕುಲಕರ್ಣಿ ವಕೀಲರಾಗಿದ್ದಾರೆ. ತಾಯಿ ಸುಧಾ ಗೃಹಿಣಿ ಆಗಿದ್ದಾರೆ.  60 ಎಕರೆ ಜಮೀನು ಹೊಂದಿದ್ದಾರೆ.ಸದ್ಯ ಚೆನ್ನೈನಲ್ಲಿ ಎಂವಿಎಸ್‌ಸಿ ಸರ್ಜರಿ ಓದುತ್ತಿರುವ ಹರೀಶ, ಮುಂದೆ ಪಿ.ಎಚ್.ಡಿ. ಮಾಡುವ ಉದ್ದೇಶ ಹೊಂದಿದ್ದಾರೆ. ಚಿನ್ನದ ಪದಕಗಳು ಸಂತಸ ತಂದಿವೆ ಎಂದು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry