ಚೊಚ್ಚಲ ಜಯಕ್ಕೆ ಮುತ್ತಿಕ್ಕಲು ಆತಿಥೇಯರ ಕಾತರ

7
ರಣಜಿ ಟ್ರೋಫಿ: ಕರ್ನಾಟಕದ ಆರು ಬ್ಯಾಟ್ಸ್‌ಮನ್‌ಗಳ ಅರ್ಧಶತಕ, ದೆಹಲಿ ಹೈರಾಣ

ಚೊಚ್ಚಲ ಜಯಕ್ಕೆ ಮುತ್ತಿಕ್ಕಲು ಆತಿಥೇಯರ ಕಾತರ

Published:
Updated:

ಬೆಂಗಳೂರು: ಪ್ರಥಮಗಳ ಸಂಭ್ರಮವೇ ಹಾಗೇನೊ? ವಿಜಯ ವೇದಿಕೆ ಮೇಲೆ ನಿಂತು ಸಂಭ್ರಮಿಸುವ ಅವಕಾಶ ಲಭಿಸಲಿದೆ ಎನ್ನುವ ಸುಳಿವು ನೀಡುವ ಖುಷಿಯಿದೆಯಲ್ಲಾ, ಅದು ಆಟಗಾರರಲ್ಲಿನ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸೋಮವಾರ ಸಂಜೆ ಕರ್ನಾಟಕದ ಆಟಗಾರರ ಮೊಗದಲ್ಲಿ ನಲಿದಾಡುತ್ತಿದ್ದ ನಗುವೇ ಇದಕ್ಕೆ ಸಾಕ್ಷಿ.ಈ ಸಲದ ರಣಜಿ ಋತುವಿನಲ್ಲಿ ಒಂದೂ ಗೆಲುವು ಪಡೆಯದೇ ಪರದಾಡುತ್ತಿರುವ ವಿನಯ್ ಬಳಗಕ್ಕೆ ಈಗ ಮೊದಲ ಜಯದ ಸಿಹಿಮುತ್ತು ಪಡೆಯುವ ಅವಕಾಶ ಲಭಿಸಿದೆ. ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದ ಆತಿಥೇಯರು ಸೋಮವಾರ ರನ್ ಮಳೆ ಸುರಿಸಿದರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಪಂದ್ಯದಲ್ಲಿ ಮೂರನೇ ದಿನ ಕರ್ನಾಟಕದ ಆರು ಬ್ಯಾಟ್ಸ್‌ಮನ್‌ಗಳುಅರ್ಧಶತಕ ದಾಖಲಿಸಿದರು. ಈ ಪರಿಣಾಮ ಆತಿಥೇಯ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 103.2 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 475 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು. ಶಿಖರ್ ಧವನ್ ನೇತೃತ್ವದ ದೆಹಲಿ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಕರ್ನಾಟಕದ ಚೊಚ್ಚಲ ಗೆಲುವಿನ ನಿರೀಕ್ಷೆಗೆ ಬಲ ಬಂದಿದೆ.ವಿನಯ್ ಬಳಗ ನೀಡಿರುವ 410 ರನ್‌ಗಳ ಗುರಿಯನ್ನು ಬೆನ್ನು ಹತ್ತಿರುವ ದೆಹಲಿ ಸೋಮವಾರದ ಆಟದ ಅಂತ್ಯಕ್ಕೆ 13 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದೆ. ಉನ್ಮುಕ್ತ ಚಾಂದ್ (18),ಧವನ್ (13) ಮತ್ತು ವಿಕಾಸ್ ಮಿಶ್ರಾ ಅವರನ್ನು ಕಳೆದುಕೊಂಡಿರುವ ದೆಹಲಿ ಬೋನಿಗೆ ಬಿದ್ದ ಇಲಿಯಂತೆ ಒದ್ದಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಎಚ್.ಎಸ್. ಶರತ್.11ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಶರತ್ ಎಡಗೈ ಬ್ಯಾಟ್ಸ್‌ಮನ್ ಧವನ್ ಅವರನ್ನು ಮೊದಲು ಎಲ್‌ಬಿಡಬ್ಲ್ಯು `ಖೆಡ್ಡಾ'ಕ್ಕೆ ಕೆಡವಿದರು. `ನೈಟ್ ವಾಚ್‌ಮೆನ್' ಆಗಿ ಉಳಿಯಲೆಂದು ಕೊನೆಯ ಸರದಿಯ ಬ್ಯಾಟ್ಸ್‌ಮನ್ ವಿಕಾಸ್ ಅವರನ್ನು ಎರಡನೇ ಕ್ರಮಾಂಕದಲ್ಲಿ ದೆಹಲಿ ಬ್ಯಾಟಿಂಗ್‌ಗೆ ಕಳುಹಿಸಿತು.ಆದರೆ, ಮಂಡ್ಯದ ಶರತ್ ದಾಳಿಯನ್ನು ಎದುರಿಸಿ ನಿಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ತಾವಾಡಿದ ಮೂರನೇ ಎಸೆತದಲ್ಲಿಯೇ ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್‌ಗೆ ಕ್ಯಾಚ್ ನೀಡಿ `ಸೊನ್ನೆ' ಸುತ್ತಿದರು. ಇದಕ್ಕೂ ಮುನ್ನ ಉನ್ಮುಕ್ತ್ ಅವರನ್ನು ವಿನಯ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ್ದರು. ದಿನದ ಕೊನೆಯಲ್ಲಿ ಕರ್ನಾಟಕಕ್ಕೆ ಲಭಿಸಿದ ಈ ಮೇಲುಗೈ ಚೊಚ್ಚಲ ಗೆಲುವಿನ ಕನಸಿಗೆ ಬಲ ನೀಡಿದೆ.ಆರು ಅರ್ಧಶತಕ: ಎರಡನೇ ದಿನದ ಅಂತ್ಯಕ್ಕೆ 31 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 136 ರನ್ ಕಲೆ ಹಾಕಿದ್ದ ಆತಿಥೇಯರು ಮೂರನೇ ದಿನ 72.2 ಓವರ್‌ಗಳಲ್ಲಿ 339 ರನ್ ಕಲೆ ಹಾಕಿದರು. ಆರಂಭದಿಂದಲೂ ವೇಗವಾಗಿ ರನ್ ಗಳಿಸಿದ್ದ ರಾಬಿನ್ ಉತ್ತಪ್ಪ (81, 119ಎಸೆತ, 13 ಬೌಂಡರಿ) ಸೋಮವಾರ ಕೇವಲ ನಾಲ್ಕು ರನ್ ಸೇರಿಸಿ ಪೆವಿಲಿಯನ್ ಸೇರಿಕೊಂಡರು. ಉತ್ತಪ್ಪ ಭಾನುವಾರ 77 ರನ್ ಗಳಿಸಿದ್ದರು. ರಾಹುಲ್ (73, 96ಎಸೆತ, 13 ಬೌಂಡರಿ) ಹಾಗೂ ಉತ್ತಪ್ಪ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 140 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟಿತು.ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಹೊಂದಿರುವ ಮನೀಷ್ ಪಾಂಡೆ (61, 106ಎಸೆತ, 7ಬೌಂಡರಿ, 1 ಸಿಕ್ಸರ್) ಲಯಕ್ಕೆ ಮರಳಿದರಲ್ಲದೆ, ಕರ್ನಾಟಕ ಸವಾಲಿನ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಟುವರ್ಟ್ ಬಿನ್ನಿ (85, 100ಎಸೆತ, 9 ಬೌಂ., 4 ಸಿಕ್ಸರ್), ಸಿ.ಎಂ. ಗೌತಮ್ (71, 94ಎಸೆತ, 9 ಬೌಂ.,), ಅಭಿಮನ್ಯು ಮಿಥುನ್ (52, 50ಎಸೆತ, 4ಬೌಂ., 2ಸಿಕ್ಸರ್) ಅರ್ಧಶತಕ ಗಳಿಸಿದರು. ಕರ್ನಾಟಕದ ರನ್‌ವೇಗಕ್ಕೆ ಕಡಿವಾಣ ತೊಡಿಸಲು ದೆಹಲಿ ತಂಡದ ನಾಯಕ ಧವನ್ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರು. ಆದರೆ, ಆತಿಥೇಯ            ಬ್ಯಾಟ್ಸ್‌ಮನ್‌ಗಳು ಮಾತ್ರ ಬಗ್ಗಲಿಲ್ಲ.ಆತಂಕ ಮೂಡಿಸಿದ್ದ ಆ ಕ್ಷಣ: ಸುಮಿತ್ ನರ್ವಾಲ್ ಓವರ್‌ನಲ್ಲಿ ರಾಹುಲ್ ಔಟಾದ ನಂತರ ಕರ್ನಾಟಕದ ನಾಲ್ವರು ಬ್ಯಾಟ್ಸ್‌ಮನ್‌ಗಳ `ಪೆವಿಲಿಯನ್ ಪರೇಡ್' ನಡೆಯಿತು. 27 ರನ್ ಕಲೆ ಹಾಕುವ ಅಂತರದಲ್ಲಿ ಉತ್ತಪ್ಪ, ರಾಹುಲ್, ಕುನಾಲ್ ಕಪೂರ್ ಮತ್ತು ಗಣೇಶ್ ಸತೀಶ್ ಅವರ ವಿಕೆಟ್ ಕಳೆದುಕೊಂಡಿತು. ರನ್ ಖಾತೆ ತೆರೆಯದೇ ವಾಪಸ್ಸಾದ ಸತೀಶ್ ವಿಕೆಟ್ ಪತನವಾದಾಗ ಕರ್ನಾಟಕ 4 ವಿಕೆಟ್‌ಗೆ 167 ರನ್ ಗಳಿಸಿತ್ತು. ಈ ವೇಳೆ ಒಡಿಶಾ ವಿರುದ್ಧ ಅನುಭವಿಸಿದ್ದ ಹೀನಾಯ ಸೋಲಿನ ನೆನಪು ಪದೇ ಪದೇ ನೆನಪಾಯಿತು. ಆದರೆ, ಮುದುಡಿ ಹೋಗುತ್ತಿದ್ದ ಮೊಗ್ಗಿಗೆ ಮನೀಷ್ ಮತ್ತು ಸ್ಟುವರ್ಟ್ ಜೀವ ತುಂಬಿದರು.ಈ ಜೋಡಿ ಐದನೇ ವಿಕೆಟ್ ಜೊತೆಯಾಟದಲ್ಲಿ 145 ರನ್ ಗಳಿಸಿ ಕರ್ನಾಟಕದ ಮೇಲೆ ಮನೆ ಮಾಡಿದ್ದ ಆತಂಕದ ಕಾರ್ಮೋಡವನ್ನು ದೂರ ಮಾಡಿತು. ಚಹಾ ವಿರಾಮದ ನಂತರ 92 ಎಸೆತಗಳಲ್ಲಿ 91 ರನ್ ಕಲೆ ಹಾಕಿದ ವಿನಯ್ ಬಳಗ ದೆಹಲಿ ಎದುರು ಸವಾಲಿನ ಮೊತ್ತ ಮುಂದಿಟ್ಟಿದೆ.ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಆಸರೆಗಾಗಿ ಕಾಯುತ್ತಿರುವ ದೆಹಲಿ ಗೆಲುವಿನ ದಡ ಮುಟ್ಟಬೇಕಾದರೆ ಇನ್ನೂ 370 ರನ್ ಗಳಿಸಬೇಕಿದೆ. ಕೈಯಲ್ಲಿರುವುದು ಏಳು ವಿಕೆಟ್. ಬೆಳಿಗ್ಗೆಯಿಂದಲೂ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಿದ ಪಿಚ್ ಸಂಜೆಯ ವೇಳೆಗೆ ಮುನಿಸಿಕೊಂಡ ಪ್ರೇಯಸಿಯಂತೆ ಬೌಲರ್‌ಗಳತ್ತ ಮುಖ ಮಾಡಿತು. ಪಿಚ್‌ನ ಈ `ಆಟ'ದ ಕಾರಣ ಮಂಗಳವಾರದ ಆಟ ಸಾಕಷ್ಟು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.ಸ್ಕೋರು ವಿವರ

ಕರ್ನಾಟಕ ಪ್ರಥಮ ಇನಿಂಗ್ಸ್ 65 ಓವರ್‌ಗಳಲ್ಲಿ 192

ದೆಹಲಿ ಪ್ರಥಮ ಇನಿಂಗ್ಸ್ 59.3 ಓವರ್‌ಗಳಲ್ಲಿ 258

ಕರ್ನಾಟಕ ದ್ವಿತೀಯ ಇನಿಂಗ್ಸ್ 103.2 ಓವರ್‌ಗಳಲ್ಲಿ 9 ವಿಕೆಟ್‌ಗೆ 475 ಡಿಕ್ಲೇರ್ಡ್

(ಭಾನುವಾರದ ಅಂತ್ಯಕ್ಕೆ 31 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 136)


ರಾಬಿನ್ ಉತ್ತಪ್ಪ ಸಿ ಪುನಿತ್ ಬಿಸ್ಟ್ ಬಿ ಪರ್ವಿಂದರ್ ಅವಾನ  81

ಕೆ.ಎಲ್. ರಾಹುಲ್ ಸಿ ಪುನಿತ್ ಬಿಸ್ಟ್ ಬಿ ಸುಮಿತ್ ನರ್ವಾಲ್  73

ಕುನಾಲ್ ಕಪೂರ್ ಎಲ್‌ಬಿಡಬ್ಲ್ಯು ಬಿ ಪರ್ವಿಂದರ್ ಅವಾನ  06

ಗಣೇಶ್ ಸತೀಶ್ ಎಲ್‌ಬಿಡಬ್ಲ್ಯು ಬಿ ಸುಮಿತ್ ನರ್ವಾಲ್  00

ಮನೀಷ್ ಪಾಂಡೆ ಬಿ ವಿಕಾಸ್ ಮಿಶ್ರಾ  61

ಸ್ಟುವರ್ಟ್ ಬಿನ್ನಿ ಸಿ ಉನ್ಮುಕ್ತ ಚಾಂದ್ ಬಿ ರಜತ್ ಭಾಟಿಯಾ  85

ಸಿ.ಎಂ. ಗೌತಮ್ ಸಿ ರಜತ್ ಭಾಟಿಯಾ ಬಿ ಮೋಹಿತ್ ಶರ್ಮಾ  71

ಆರ್. ವಿನಯ್ ಕುಮಾರ್ ಸಿ ಉನ್ಮುಕ್ತ ಚಾಂದ್ ಬಿ ಪರ್ವಿಂದರ್ ಅವಾನ  30

ಅಭಿಮನ್ಯು ಮಿಥುನ್  ಸಿ ರಜತ್ ಭಾಟಿಯಾ ಬಿ ಸುಮಿತ್ ನರ್ವಾಲ್  52

ಎಚ್.ಎಸ್. ಶರತ್ ಔಟಾಗದೆ  00ಇತರೆ: ಬೈ-6, ಲೆಗ್ ಬೈ-6, ನೋಬಾಲ್-3, ವೈಡ್-1)  16

ವಿಕೆಟ್ ಪತನ: 1-140 (ಉತ್ತಪ್ಪ; 32.6), 2-167 (ರಾಹುಲ್; 37.6), 3-167 (ಕುನಾಲ್; 38.1), 4-167 (ಸತೀಶ್; 39.5), 5-312 (ಪಾಂಡೆ; 72.2), 6-320 (ಬಿನ್ನಿ; 75.3), 7-383 (ವಿನಯ್; 86.6), 8-466 (ಗೌತಮ್; 102.2), 9-475 (ಮಿಥುನ್; 103.2).ಬೌಲಿಂಗ್: ಆಶಿಶ್ ನೆಹ್ರಾ 12-1-51-0, ಪರ್ವಿಂದರ್ ಅವಾನ 22-2-89-3, ಸುಮಿತ್ ನರ್ವಾಲ್ 21.2-2-84-3, ರಜತ್ ಭಾಟಿಯಾ 20-1-87-1, ವಿಕಾಸ್ ಮಿಶ್ರಾ 20-2-99-1, ಮೋಹಿತ್ ಶರ್ಮಾ 8-0-53-1.ದೆಹಲಿ ದ್ವಿತೀಯ ಇನಿಂಗ್ಸ್ 13 ಓವರ್‌ಗಳಲ್ಲಿ 3 ವಿಕೆಟ್‌ಗೆ 40

ಉನ್ಮುಕ್ತ ಚಾಂದ್ ಎಲ್‌ಬಿಡಬ್ಲ್ಯು ಬಿ ವಿನಯ್ ಕುಮಾರ್  18

ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಿ ಎಚ್.ಎಸ್. ಶರತ್  13

ಮೋಹಿತ್ ಶರ್ಮಾ ಬ್ಯಾಟಿಂಗ್  04

ವಿಕಾಸ್ ಮಿಶ್ರಾ ಸಿ ರಾಹುಲ್ ಬಿ ಎಚ್.ಎಸ್ ಶರತ್  00

ಮಿಥುನ್ ಮನ್ಹಾಸ್ ಬ್ಯಾಟಿಂಗ್  01

ಇತರೆ: ಬೈ-4  04

ವಿಕೆಟ್ ಪತನ: 1-30 (ಉನ್ಮುಕ್ತ್; 8.1), 2-35 (ಧವನ್; 10.2), 3-35 (ವಿಕಾಸ್; 10.5).

ಬೌಲಿಂಗ್: ಆರ್ ವಿನಯ್ ಕುಮಾರ್ 5-1-14-1, ಅಭಿಮನ್ಯು ಮಿಥುನ್ 6-1-13-0, ಎಚ್.ಎಸ್. ಶರತ್ 2-0-9-2.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry